ಹೊನ್ನಾವರ : ಶರಾವತಿ ನದಿಗೆ ಗೌರವ ಸಲ್ಲಿಸುವ ಸಲುವಾಗಿ 'ಶರಾವತಿ ಆರತಿ' ಕಾರ್ಯಕ್ರಮ ವಿಶಿಷ್ಟವಾಗಿ ನಡೆಯಿತು.
ಪಟ್ಟಣದ ಶರಾವತಿ ಸೇತುವೆ ಮೇಲಿಂದ ಸಾವಿರಾರು ಜನರು ದೀಪ ಬೆಳಗಿ ಆರತಿ ನಮನ ಸಲ್ಲಿಸಿದರು.
ಪಟ್ಟಣದ ಗಣಪತಿ ವಿಸರ್ಜನೆ ಸ್ಥಳದಲ್ಲಿ ಆಯೋಜಿಸಿದ ಸಭಾ ಕಾರ್ಯಮದಲ್ಲಿ ಕರ್ಕಿಯ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಮಗೆ ಮೂರು ಮಾತೆಯರಿದ್ದಾರೆ. ಜನ್ಮ ನೀಡಿದ ತಾಯಿ, ಗೋಮಾತೆ ಮತ್ತು ಜಲ ಮಾತೆ. ನಮ್ಮ ಪ್ರಾಂತ್ಯದಲ್ಲಿ ಹರಿಯುತ್ತಿರುವ ಶರಾವತಿ ನದಿಯ ತ್ಯಾಗದಿಂದ ಇಲ್ಲಿನ ಜನ ಸುಖಮಯ ಜೀವನ ನಡೆಸುತ್ತಿದ್ದಾರೆ. ಈ ನದಿಯ ಸ್ವಚ್ಚತೆಗೆ ನಾವು ಅದ್ಯತೆ ನೀಡಬೇಕು. ನದಿ ನೀರನ್ನು ಹಾಳು ಮಾಡುವ ಕೆಲಸ ಮಾಡಬಾರದು. ಕಲ್ಮಶವನ್ನು ನದಿಗೆ ಬಿಡಬಾರದು. ವರ್ಷವಿಡೀ ಈ ನದಿಯ ಸ್ವಚ್ಚತೆಗೆ ಶ್ರಮಿಸೋಣ. ಶರಾವತಿ ತಾಯಿ ನಮ್ಮನ್ನೆಲ್ಲ ಹರಸಲಿ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಜೆ.ಟಿ.ಪೈ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಜಿ.ಶಂಕರ ಮಾತನಾಡಿ, ಶರಾವತಿ ನದಿಯು ನಮ್ಮ ಜನಜೀವನಕ್ಕೆ ಹಲವಾರು ಬಗೆಯಲ್ಲಿ ಉಪಯೋಗಿಯಾಗಿದೆ. ಈ ನದಿಗೆ ನಮನ ಸಲ್ಲಿಸಬೇಕು ಎಂದು ಕಾರ್ಯಕ್ರಮ ಸಂಘಟಿಸಲಾಯಿತು. ಎಲ್ಲರೂ ಸ್ಪಂದಿಸಿ ಸಹಕಾರ ನೀಡಿದ್ದಾರೆ ಎಂದರು.
ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ಸಮಿತಿಯ ಖಜಾಂಚಿ ವೆಂಕಟ್ರಮಣ ಹೆಗಡೆ, ಎನ್. ಎಸ್. ಹೆಗಡೆ, ಎಂ.ಜಿ.ನಾಯ್ಕ, ಡಾ. ಜಿ.ಪಿ.ಪಾಠಣಕರ, ಡಾ. ಶ್ರೀಪಾದ ಶೆಟ್ಟಿ, ಶಿವರಾಜ ಮೇಸ್ತ, ಎಂ.ಎಸ್.ಹೆಗಡೆ, ವಿಶ್ವನಾಥ ನಾಯಕ, ಸಂಜೀವ ಶೇಟ್ ಇತರರಿದ್ದರು.