ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹೊನ್ನಾವರದ ಶಾರದಾ ಮೊಗೇರಗೆ ಲಭಿಸಿದ ಜಾನಪದ ಅಕಾಡೆಮಿ ಪ್ರಶಸ್ತಿ.

ಹೊನ್ನಾವರದ ಶಾರದಾ ಮೊಗೇರಗೆ ಲಭಿಸಿದ ಜಾನಪದ ಅಕಾಡೆಮಿ ಪ್ರಶಸ್ತಿ.

Fri, 19 Aug 2022 04:26:07  Office Staff   SO News

ಹೊನ್ನಾವರ : ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2022 ಸಾಲಿನ ಜಾನಪದ ಪ್ರಶಸ್ತಿಗೆ ಹೊನ್ನಾವರ ತಾಲೂಕಿನ ಬಿದ್ರಕೇರಿಯ ಶಾರದಾ ಮಹಾದೇವ ಮೊಗೇರ ಆಯ್ಕೆಯಾಗಿದ್ದಾರೆ.

74 ವರ್ಷದ ಶಾರದಾ ಮೊಗೇರ ಕಳೆದ ಹಲವು ದಶಕಗಳಿಂದ ಜನಪದ ಹಾಡುಗಳನ್ನು ಹಾಡಿಕೊಂಡು ಬಂದು ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.  ಕೃಷಿ ಮಾಡಿ ಬದುಕು ಸವೆಸುತ್ತಿರುವ ಶಾರದಾ ನೂರಾರು ಹಾಡುಗಳನ್ನು ತನ್ನ ಎದೆಯಾಳದಲ್ಲಿ ಹುದುಗಿಸಿಕೊಂಡು ತಮ್ಮ ಸಮುದಾಯದವರಿಗೆ ಆದರ್ಶಪ್ರಾಯರಾಗಿದ್ದಾರೆ. ಭತ್ತ ಕುಟ್ಟುವ, ಬೀಸುವ,  ನಾಟಿ ಮಾಡುವ ಪದಗಳಲ್ಲದೇ ಜೋಗುಳ ಪದಗಳು, ಮದುವೆ ಪದಗಳು, ಸೋಬಾನೆ ಪದಗಳು, ದೋಣಿ ಪದಗಳು, ತಮ್ಮ ಕುಲದೈವ, ಆರಾಧನೆ ದೈವಗಳ ಪುರಾಣ ಕಥನಗಳು, ಕಡಲ ಪದಗಳು, ಕಾಯಕ ಪದಗಳು ಮುಂತಾದ ಪದಗಳ ಕಣಜವೆ ಇವರಲ್ಲಿವೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಜರುಗಿದ ಹಲವಾರು ಕಾರ್ಯಕ್ರಮಗಳ ವೇದಿಕೆಯಲ್ಲಿ ತಮ್ಮ ಪ್ರದೇಶದ ಜಾನಪದವನ್ನು ಪ್ರಚುರಗೊಳಿಸಿದ್ದಾರೆ. ಅಂಕೋಲದಲ್ಲಿ ಜರುಗಿದ ಕರ್ನಾಟಕ ಜಾನಪದ ಅಕಾಡೆಮಿಯ ಕಾರ್ಯಕ್ರಮದಲ್ಲೂ ಇವರ ತಂಡ ಭಾಗವಹಿಸಿತ್ತು. ಭಟ್ಕಳ ತಾಲೂಕಿನಲ್ಲಿ ಯುವ ಪೀಳಿಗೆಗೆ ಜಾನಪದವನ್ನು ಅದರಲ್ಲೂ ವಿಶೇಷವಾಗಿ ಮೂಲ ಹಾಡುಗಳನ್ನು ಕಲಿಸಿ ಉತ್ತೇಜಿಸುವ ಮಹತ್ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಶಾರದಾ ಅವರ ಸಮುದಾಯ ಕೃಷಿಕೂಲಿ, ಸಣ್ಣ ಕೃಷಿಯಲ್ಲಿ ಮತ್ತು ಮೀನುಗಾರಿಕೆಯಲ್ಲಿ ಬದುಕಿನ ಬಂಡಿಯನ್ನು ಸಾಗಿಸುತ್ತಾ ಬಂದವರು. ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿಯ ಸಮುದಾಯ ಮೊಗೇರರು". ಕಷ್ಟ ಸಹಿಷ್ಣುಗಳಾದ ಮೊಗೇರರಲ್ಲಿ ಶ್ರೀಮಂತವಾದ ಜನಪದ ಸಂಸ್ಕೃತಿ ಇದೆ. ಸಮಾಜದ, ಸಂಸ್ಥೆಗಳ ಮತ್ತು ಸರಕಾರದ ಯಾವುದೇ ಪ್ರೋತ್ಸಾಹ ಮತ್ತು ಉತ್ತೇಜನವಿಲ್ಲದೇ ಅವರಲ್ಲಿನ ಜನಪದ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಆದರೂ ಎದೆಗುಂದದೆ ಮೊಗೇರ ಅವರು ತಮ್ಮ ಹಾಡುಗಾರಿಕೆಯನ್ನ  ಮುಂದುವರಿಸಿಕೊಂಡು ಬಂದಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿ‌ಯ ಸಿರಿಗಂಧ ಶ್ರೀನಿವಾಸ  ಮತ್ತು ಭಟ್ಕಳ ಜೈಭೀಮ್ ಬಳಗ ತಮ್ಮನ್ನ ಗುರುತಿಸಿದ್ದಕ್ಕೆ ಕೃತಜ್ಞತೆ ತಿಳಿಸಿದ್ದಾರೆ.


Share: