ಬಂಟ್ವಾಳ, ಜನವರಿ 20: ತುಂಬೆಯಲ್ಲಿ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೆಶಿಸಿರುವ ನೂತ ವೆಂಟೆಡ್ ಡ್ಯಾಂ ಕಾಮಗಾರಿಗೆ ಸುದೀರ್ಘ ಸಮಯದ ಬಳಿಕ ಮತ್ತೆ ಚಾಲನೆ ದೊರೆತಿದೆ.
ಕಳೆದ ೨೦೦೯ ರ ಫೆ.೧೬ ರಂದು ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿದ್ದು ಬಳಿಕ, ಆಸುಪಾಸಿನ ಕೃಷಿಕರಿಂದ ಕೇಳಿ ಬಂದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ನೂತನ ಡ್ಯಾಂ ನ ಎತ್ತರದ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ, ಏಕಪಕ್ಷೀಯವಾಗಿ ಸಮೀಕ್ಷೆ ನಡೆಸಲಾಗಿದ್ದು, ಕೃಷಿ ಭೂಮಿಯ ಮುಳುಗಡೆ ಕುರಿತು ಡ್ಯಾಂ ಅಧಿಕಾರಿಗಳು ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದ ಕೃಷಿಕರು, ಸಂತ್ರಸ್ತರ ಹಿತರಕ್ಷಣಾ ಸಮಿತಿಯನ್ನೂ ಅಸ್ತಿತ್ವಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜನಪ್ರತಿ ನಿಧಿಗಳೆಲ್ಲರೂ ಡ್ಯಾಂ ನ ನಿರ್ದಿಷ್ಟ ಎತ್ತರ ಘೋಷಿಸುವಂತೆ ಹಾಗೂ ಕೃಷಿಕರ ಉಪಸ್ಥಿತಿಯಲ್ಲಿಯೇ ಮರು ಸಮೀಕ್ಷೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆಬಳಿಕ ಅತ್ತ ಕೆಲಸವೂ ಸ್ಥಗಿತಗೊಂಡಿತ್ತು, ಇತ್ತ ಹೋರಾಟಗಾರರೂ ಸುಮ್ಮನಾಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಡ್ಯಾಂ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದ್ದು, ನದಿಗೆ ಮಣ್ಣು ಹಾಕುವ ಕಾಮಗಾರಿ ನಡೆಯುತ್ತಿದೆ. ಹೋರಾಟದ ಫಲವಾಗಿ ಡ್ಯಾಂ ಎತ್ತರವನ್ನು ೫ ಮೀ ಗೆ ಮಿತಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಮತ್ತೆ ಎಚ್ಚೆತ್ತುಕೊಳ್ಳುವ ಹಿತರಕ್ಷಣಾ ಸಮಿತಿ,ಆಸುಪಾಸಿನ ಕೃಷಿಕರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.