ವಿಜಯನಗರ ಸಾಮ್ರಾಜ್ಯವನ್ನು ಹಿಂದೂ ಸಾಮ್ರಾಜ್ಯವೆಂತಲೂ, ಕನ್ನಡ ಸಾಮ್ರಾಜ್ಯವೆಂತಲೂ ಭಾರಿ ವೈಭವ,ಸಮೃದ್ಧಿಯ ಪರಾಕಾಷ್ಠೆ ಎಂತಲೂ ಕೊಂಡಾಡುತ್ತಿರುವ ಈ ಹೊತ್ತಲ್ಲಿ, ಈ ಪ್ರಚಾರ, ವಿಚಾರಗಳ ನಿಜವಾದ ಹೂರಣವೇನು? ವಿಜಯನಗರದ ಪ್ರಭುಗಳ ವೈಭವದ ಮೂಲ ಆಧಾರವೇನು? ಈ ಕುರಿತು ಇತಿಹಾಸಕಾರರಾದ ಡಾ. ಎಂ.ವಿ. ವಸು ಅವರ ಸಂದರ್ಶನ
ಜನಶಕ್ತಿ : ವಿಜಯನಗರ ಸಾಮ್ರಾಜ್ಯದ ವಿಷಯದಲ್ಲಿ ಕೃಷ್ಣದೇವರಾಯನ ಆಡಳಿತ, ಸಾಧನೆಗಳ ವೈಭವವನ್ನು ಕೊಂಡಾಡುವ, ಹಾಡಿ ಹೊಗಳುವ ಪ್ರಚಾರಗಳು ಈಗ ವ್ಯಾಪಕವಾಗಿ ಕಾಣುತ್ತಿವೆ. ಈ ವಿಚಾರವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ?
ಡಾ|| ವಸು : ಹಂಪಿಯ ಪತನದ ನಂತರ ವಿಜಯನಗರದ ಇತಿಹಾಸದ ರಚನೆಯ ನಡುವೆ ಒಂದು ದೂಡ್ಡ ಅಂತರ ಇದೆ. ವಿಜಯನಗರ ಸಾಮ್ರಾಜ್ಯದ ಕುರಿತು ರಾಬರ್ಟ ಸೀವೆಲ್ ಅವರ "ಫರ್‌ಗಟನ್ ಎಂಪೈರ‍್" ಕೃತಿ ನಂತರ ಬಂದ ಬರವಣಿಗೆಗಳೆಲ್ಲ ವಸಾಹತುಶಾಹಿ ದೃಷ್ಟಿಕೋನದ ಬರವಣಿಗೆಗಳು. ಆನಂತರ ರಾಷ್ಟ್ರೀಯವಾದಿ ಇತಿಹಾಸಕಾರರ ಬರವಣಿಗೆಗಳು ಬಂದವು. ರಾಷ್ಟ್ರೀಯವಾದಿ ಇತಿಹಾಸಕಾರರ ಜೊತೆ ಜೊತೆಗೆ ರಾಷ್ಟ್ರೀಯವಾದಿ ಬರಹಗಾರರು ಮೂಡಿಬಂದರು. `ಎಚ್ಚಮ ನಾಯಕ' ನಾಟಕವು ಇಂತಹ ಸಂದರ್ಭದಲ್ಲಿ ಮೂಡಿಬಂದ ಒಂದು ಕೃತಿ. ಸಂಶೋಧನೆಯ ವಿಚಾರದಲ್ಲಿ ತುಂಬಾ ಪರಿಮಿತಿ ಇದ್ದಂತಹ ಸಂದರ್ಭವದು. ವಿಜಯನಗರ ಸಾಮ್ರಾಜ್ಯ ಎಂದರೆ ಹಿಂದೂ ಸಾಮ್ರಾಜ್ಯ ಎಂದೂ, `ಕನ್ನಡಮಾತೆ' ಎಂಬಂತಹ ಕಲ್ಪನೆಯಲ್ಲಿ ವಿಜಯನಗರ ಇತಿಹಾಸವನ್ನು ನೋಡಲು ಶುರು ಮಾಡಿದರು.
ವಿಜಯನಗರದ ಕುರಿತು ಪಾಶ್ಚಿಮಾತ್ಯರು ಮೊದಲ ಇತಿಹಾಸ ಬರೆದಾಗ ಇದ್ದಾಗಿನ ಪರಿಸ್ಥಿತಿಗೂ ಈಗಿನ ಪರಿಸಿತ್ಥಿಗೂ ಸಾಕಷ್ಟು ವ್ಯತ್ಯಾಸವಿದೆ. ಮೊದಲು ಇತಿಹಾಸ ಬರೆದಾಗ ಇಷ್ಟು ನಾಶ ಆಗಿರಲಿಲ್ಲ. ನಂತರ ನಾಶ ಆಗಿದೆ. ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಲೂರು ವೆಂಕಟರಾಯರ `ಕರ್ನಾಟಕದ ಗತ ವೈಭವ' ವನ್ನು ಕರ್ನಾಟಕದ ರಾಷ್ಟ್ರೀಯತೆಯೆಂಬಂತೆ, ಬಿಂಬಿಸಿ ರಚಿಸಲಾಯಿತು. ಮಾತನಾಡುವಾಗಲೂ ಸಹ `ಗತ ವೈಭವ'ವನ್ನೇ ನೆನಪಿಸಿಕೊಂಡದ್ದು. ಇವೆಲ್ಲಾ ರಾಜ ಮಹಾರಾಜರ ಕುರಿತ ಅಧ್ಯಯನವಾಗಿದ್ದವು. ಸಾಮ್ರಾಜ್ಯಗಳ ಕುರಿತ ಅಧ್ಯಯಗಳಾಗಿದ್ದವು. ಬ್ರಿಟೀಷರಿಗೆ ಅಡಿಯಾಳಾಗಿದ್ದ ವರ್ತಮಾನದ ಅಪಮಾನಕಾರಿ ಸ್ಥಿತಿಯಲ್ಲಿ `ಕಳೆದು ಹೋಗಿದ್ದ' ಗತ ವೈಭವವನ್ನು ನೆನಪಿಸಿಕೊಳ್ಳಲಾಯಿತು. ಅದು ಆ ಮೂಲಕ ಕೀಳರಿಮೆಯನ್ನು ನೀಗಿ ಭಾವನಾತ್ಮಕ ಮೇಲ್ಮೆಸಾಧಿಸುವ ಯತ್ನವಾಗಿತ್ತು. ಕೋಟೆ-ಕೊತ್ತಲಗಳು, ಶಾಸನ, ಆರಮನೆ, ಗೆಜೆಟಿಯರ‍್ಗಳ... ಇವನ್ನೆ ಚರಿತ್ರೆಯ ಆಧಾರಗಳು ಎಂದು ಭಾವಿಸಿದ ಸಂದರ್ಭವದು. ಬಹಳ ಧೀರ್ಘ ಕಾಲದಿಂದ ಈ ಚಿಂತನೆ ಇದೆ. ಇದಕ್ಕಿಂತ ಭಿನ್ನವಾಗಿ ಜನರ ಆರ್ಥಿಕ - ಸಾಮಾಜಿಕ ಹಿನ್ನೆಲೆಯಲ್ಲಿ ವಿಜಯನಗರವನ್ನು ವಿಶ್ಲೇಷಿಸಿ ಇತಿಹಾಸಕಾರ `ಸಾಲೆತೂರು' ಅವರು ಕೃತಿ ರಚಿಸಿಕೊಟ್ಟಿದ್ದಾರೆ.
ಈಗ ವಿಜಯನಗರವನ್ನು ನೋಡುವಾಗ ಮೇಲು ನೋಟಕ್ಕೆ ವಿಜಯನಗರದ ವೈಭವ ನಾಶ ಆಗಿದ್ದು ಕಾಣುತ್ತದೆ. ಮತ್ತು ಬಹುಮನಿ ಸುಲ್ತಾನರೊಂದಿಗಿನ ಕೊನೆಯ ಯುದ್ಧ ನೆನಪಾಗುತ್ತದೆ. ಈ ನಾಶದ ಹೊಣೆಯನ್ನು ಬಹುಮನಿ ಸುಲ್ತಾನರ ಮೇಲೆ ಹೊರಿಸಲಾಗಿದೆ.ವಿಜಯನಗರ ಸಾಮ್ರಾಜ್ಯ ಯಾವಾಗ ನಾಶವಾಯಿತು ? ಏಕೆ ನಾಶವಾಯಿತು? ಇತ್ತೀಚಿಗೆ ಹೊಸ ಹೊಸ ಸಂಶೋಧನೆಗಳಾಗುತ್ತಿವೆ. ಆದರೆ ಅವು ಜನ ಸಾಮಾನ್ಯರ ಗಮನಕ್ಕೆ ಬರುತ್ತಿಲ್ಲ. ಯುದ್ದದಲ್ಲಿ ಆದ ನಾಶಕ್ಕಿಂತ ಆನಂತರದಲ್ಲಿ ಹೆಚ್ಚು ನಾಶ ಆಗಿದೆ. ಯಾಕೆ ನಾಶ ಆಗಿದೆ ಅನ್ನುವುದರ ದಾಖಲೆ ಸಿಗುತ್ತಿಲ್ಲ. ವಿಜಯನಗರದ ವೈಭವವನ್ನು ಆ ಕಾಲದ ಸಾಮ್ರಾಜ್ಯಶಾಹಿ ಪ್ರಭುತ್ವದ ಕೊಳ್ಳೆ, ಆಕ್ರಮಣ, ತೆರಿಗೆ ಸುಲಿಗೆಗಳನ್ನು ಸಾಧನೆ ಅಂತ ಒಪ್ಪಿದರೆ ಆಗ ವಿಜಯನಗರದ ವೈಭವವನ್ನು ಸಾಧನೆ ಎಂದು ಒಪ್ಪಬಹುದು. ಆದರೆ ಹಾಗೆ ಒಪ್ಪಬಹುದೇ ಎಂಬ ಗಂಭಿರ ಪ್ರಶ್ನೆ ನಮ್ಮ ಮುಂದಿದೆ.
ಜನಶಕ್ತಿ : ವಿಜಯನಗರ ಕನ್ನಡಿಗರ ಹೆಮ್ಮೆಯ ಗರಿಮೆಯೇ ?
ಡಾ|| ವಸು : ವಿಜಯನಗರದ್ದು ವಿಸ್ತಾರವಾದ ಸಾಮ್ರಾಜ್ಯವಾಗಿತ್ತು. ಆಸ್ಥಾನ ವೈಭವವಾಗಿತ್ತು. ವಿಜಯನಗರದ ಅರಸರು ಭಾಷಾವಾರು ರಾಜ್ಯವನ್ನು ಕಟ್ಟಲಿಲ್ಲ. ಅವರು ಕನ್ನಡನಾಡು, ತೆಲುಗು ನಾಡನ್ನು ಕಟ್ಟಲು ಪ್ರಯತ್ನಿಸಲಿಲ್ಲ. ಅವರು ಕಟ್ಟಿದ್ದು ವಿಜಯನಗರ ಸಾಮ್ರಾಜ್ಯ. ಅದು ಬಹುಭಾಷಾ ಸಾಮ್ರಾಜ್ಯ. ವಿಜಯನಗರ ಸಾಮ್ರಾಜ್ಯ ಕನ್ನಡ ನಾಡು ಅಲ್ಲ. ಕನ್ನಡ ಸಾಮ್ರಾಜ್ಯ ಅಲ್ಲ. ಅದರ ಬಹುತೇಕ ಭಾಗ ಆಂಧ್ರದ್ದಾಗಿತ್ತು. ಕೃಷ್ಣದೇವರಾಯನ ಆಸ್ಥಾನದಲ್ಲಿನ ಕವಿಗಳು ತೆಲುಗು ಕವಿಗಳು. ತೆನಾಲಿರಾಮ, ಅಲ್ಲಸಾನಿ ಪೆದ್ದಣ್ಣ ಮುಂತಾದ ತೆಲುಗು ಕವಿಗಳು. ಸ್ವತಃ ಕವಿಯಾಗಿದ್ದ ಕೃಷ್ಣದೇವರಾಯನು `ಅಮುಕ್ತ ಮೌಲ್ಯದ' ಎಂಬ ತೆಲುಗು ಕೃತಿಯನ್ನು ರಚಿಸಿದ್ದಾನೆ. ಇಂತಹ ಕೃಷ್ಣ ದೇವರಾಯನಿಗೆ `ಕನ್ನಡ ರಮಾರಮಣ' ಎಂದು ಕರೆದುಕೊಳ್ಳುವುದು ಇವತ್ತಿನ ತೃಪ್ತಿ ಅಷ್ಟೇ. ಅವತ್ತಿನ ಕನ್ನಡ ಭಾಗದ ದೇವಸ್ಥಾನಗಳಿಗೆ ಅತಂಹ ಪ್ರಾಮುಖ್ಯತೆ ಸಿಕ್ಕಿಲ್ಲ. ಹಂಪೆಯ ವಿರೂಪಾಕ್ಷ ದೇವಸ್ಥಾನವು ಒಂದು ಪ್ರಾಚೀನವಾದ ದೇವಾಲಯ. ವಿಜಯವಿಠಲ ದೇವಾಲಯ ಯುದ್ದದ ವಿಜಯಗಳ ನೆನಪಿನಲ್ಲಿ ನಿರ್ಮಿಸಲಾದ ದೇವಾಲಯ. ಮಹಾನವಮಿ ದಿಬ್ಬ ಆಚರಣೆ ಮಧ್ಯಕಾಲೀನ ಯುಗದ ಕಲ್ಪನೆ. ಕರ್ನಾಟಕದ ಬಹುತೇಕ ಭಾಗ, ಆಂಧ್ರ, ತಮಿಳುನಾಡು ಸೇರಿದ ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟುತ್ತಾನೆ ಕೃಷ್ಣದೇವರಾಯ. ವಿಜಯದ ಸಂಕೇತವಾಗಿ ವಿಜಯದಶಮಿ ದಿಬ್ಬ, ದಸಾರ ವಿಜಯ ಮಹೋತ್ಸವ ಆರಂಭಿಸಲಾಯಿತು. ಯುದ್ಧಗಳಿಂದ ದೋಚಿದ ಹಣವನ್ನು ತಂದು ಸಾಮ್ರಾಜ್ಯ ವಿಸ್ತರಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ತೆಲುಗು, ತಮಿಳು, ಸಂಸ್ಕೃತ ಶಾಸನಗಳು ವ್ಯಾಪಕವಾಗಿವೆ. ವಿಜಯನಗರ ಸಾಮ್ರಾಟರು `ರಾಯಗೋಪುರ' ಎನ್ನಲಾಗುವ ಎತ್ತರದ ಗೋಪುರವನ್ನು ನಿರ್ಮಿಸುತ್ತಿದ್ದರು. ಹೊಯ್ಸಳರ ರಾಜಧಾನಿ ದೊರಸಮುದ್ರದ `ಪ್ರವೇಶ ದ್ವಾರದ ಮೇಲೆ ರಾಯಗೋಪುರವನ್ನು ನಿರ್ಮಿಸಲಾಯಿತು. ಇದು ಒಂದು ರಾಜಕೀಯ ಪರಿಭಾಷೆ. ಅಂದರೆ ಹೊಯ್ಸಳರ ಮೇಲೆ ಈ ಅಧಿಪತ್ಯ ಸ್ಥಾಪಿಸಿದ್ದರ ಕುರುಹಾಗಿ ಇಂತಹ ನಿರ್ಮಾಣ ನಡೆದಿದೆ.
ಜನಶಕ್ತಿ : ಕೃಷ್ಣದೇವರಾಯ ಒಬ್ಬ ಜನಪ್ರಿಯ ರಾಜನಾಗಿದ್ದನೆ?
ಡಾ|| ವಸು : ಪುರುಷೋತ್ತಮ ಬಿಳಿಮಲೆಯವರ `ಹಂಪಿ ಜಾನಪದ' ಎಂಬ ಒಂದು ಸುಂದರ ಕೃತಿ ಇದೆ. ತುಂಬಾ ಕುತೂಹಲದ ವಿಷಯವೆಂದರೆ ಕೃಷ್ಣದೇವರಾಯನ ಬಗೆಗಾಗಲಿ, ವಿಜಯನಗರ ಸಾಮ್ರಾಜ್ಯದ ಬಗೆಗಾಗಲಿ ಹಂಪಿ ಜಾನಪದವು ಮಾತನಾಡುವುದಿಲ್ಲ. ಟಿಪ್ಪು, ಕೆಂಪೇಗೌಡ, ಕುಮಾರ ರಾಮ ಇವರೆಲ್ಲರ ಬಗೆಗೆ ಜನಪದ ಸಾಹಿತ್ಯ ಸೃಷ್ಟಿಯಾಗಿದೆ. ಕೃಷ್ಣದೇವರಾಯ ಒಬ್ಬ ಜನಪ್ರಿಯ ಸಾಮ್ರಾಟನಾಗಿದ್ದರೆ ಯಾಕೆ ಆತನ ಕುರಿತು ಜನಪದ ಸಾಹಿತ್ಯ ಇಲ್ಲ? ಯಾಕೆ ಕೇವಲ ಆಸ್ಥಾನದ ನೆಲೆಯ ಚರಿತ್ರೆ ಮಾತ್ರ ಇದೆ?
ಜನಶಕ್ತಿ : ವಿಜಯನಗರ ಸಾಮ್ರಾಜ್ಯದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಏನಿತ್ತು? ಜನರ ಬದುಕು ವೈಭವದಲ್ಲಿತ್ತೆ?
ಡಾ|| ವಸು : ನಮಗೆ ಎರಡು ವಿಜಯನಗರದ ಚಿತ್ರಣವನ್ನು ಕಾಣಲು ಸಾಧ್ಯ. ಒಂದು ಜನ ಸಾಮಾನ್ಯರ ಮೇಲೆ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿದ್ದ ವಿಜಯನಗರ. ಮತ್ತೊಂದು ಭವ್ಯಕೋಟೆ, ಕೊತ್ತಲ, ದೇವಾಲಯಗಳು, ಅರಮನೆಗಳ ವೈಭವದ ವಿಜಯನಗರ. ವಿಜಯನಗರ ಸಾಮ್ರಾಜ್ಯದಲ್ಲಿ ಜನರ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಗಳ ಪಟ್ಟಿಯೇ ಅಘಾತಕರವಾಗಿದೆ. ಭಾರತದ ಇತಿಹಾಸದಲ್ಲಿ ಜನರ ಮೇಲೆ ಅತಿ ಹೆಚ್ಚು ತೆರಿಗೆ ಭಾರವನ್ನು ಹೊರಿಸಿದ ಕುಖ್ಯಾತಿ ಅಲ್ಲಾವುದ್ದೀನ್ ಖಿಲ್ಜಿಯದ್ದು ಎಂದು ಹೇಳಲಾಗುತ್ತದೆ. ಆದರೆ ಬಾಲದರೆ - ಅಂದರೆ ಬಾಲವಿರುವ ಪ್ರಾಣಿಗಳ ಮೇಲೆ ತೆರಿಗೆ, ಕ್ಷೌರಿಕನ ಮೇಲೆ ತೆರಿಗೆ, ವೇಶ್ಯಾವಾಟಿಕೆ ಮೇಲಿನ ತೆರಿಗೆ, ಎಲೆದೆರೆ - ಅಂದರೆ ವೀಳ್ಯದ ಎಲೆಗೆ ತೆರಿಗೆ..... ಹೀಗೆ ಅಲ್ಲಾವುದ್ದೀನ್ ಖಿಲ್ಜಿಯನ್ನು ಮೀರಿಸುವ ರೀತಿಯಲ್ಲಿ ತೆರಿಗೆ ಭಾರ ಹೊರಿಸಲಾಗಿತ್ತು. ವಿಜಯನಗರದಲ್ಲಿ ಭೂಕಂದಾಯದ ಪ್ರಮಾಣ ಎಷ್ಟಿತ್ತೆಂದರೆ ರೈತರು ತೆರಿಗೆ ಕೂಡಲು ಸಾಧ್ಯವಾಗದೇ ಭೂಮಿ ಬಿಟ್ಟು ತಪ್ಪಿಸಿಕೊಂಡು ಓಡುತ್ತಾರೆ. ನೀರಾವರಿ ಭೂಮಿಯಾದರೆ ಅರ್ಧ ಬೆಳೆ ಕೂಡಬೇಕಾಗುತ್ತಿತ್ತು.
ಜನಶಕ್ತಿ : ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಪಾಳೆಯಗಾರರ ಸ್ಥಿತಿ ಏನಿತ್ತು?
ಡಾ|| ವಸು : ತಮಿಳುನಾಡಿನ ಪಾಳೆಯಗಾರರು ತೆರಿಗೆ ಕೊಟ್ಟು ಕೊಟ್ಟು ಹೈರಾಣಾಗಿದ್ದರು. ಇದರಿಂದ ವಿಜಯನಗರಕ್ಕೆ ಅವರು ಹೆದರುತ್ತಿದ್ದರು. ಏಕೆಂದರೆ ಅವರ ಅಷ್ಟು ಕ್ರೂರವಾಗಿ ನಡೆದುಕೂಳ್ಳುತ್ತಿದ್ದರು. ಹಲವು ಪಾಳೆಯಪಟ್ಟುಗಳನ್ನು ಸೋಲಿಸಿ ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು.
ಬೆಂಗಳೂರಿನ ಪಾಳೇಯಗಾರ ಕೆಂಪೇಗೌಡ ನಾಣ್ಯ ಹೊರಡಿಸಿದ ಎನ್ನುವ ಕಾರಣಕ್ಕೆ ಆತನ ಕಣ್ಣುಗಳನ್ನು ಕಿತ್ತು ಜೈಲಿಗೆ ಹಾಕುತ್ತಾರೆ. ಚರಿತ್ರೆ ಬರೆಯುವಾಗ ಇದಾವುದೇ ವಿಚಾರವನ್ನು ಸೂಕ್ತರೀತಿಯಲ್ಲಿ ಗಮನಿಸಲಾಗುತ್ತಿಲ್ಲ. ಚಿತ್ರದುರ್ಗ, ಕೆಳದಿಗಳು ವಿಜಯನಗರಕ್ಕೆ ಅಧೀನವಾಗಿದ್ದವು. ತಮಿಳುನಾಡು ಸಹ ಅಧೀನವಾಗಿತ್ತು. ಈ ಅಂಶವನ್ನು ಮುಖ್ಯವಾಗಿ ನೋಡುತ್ತಿಲ್ಲ. ಬಹುಮನಿ ಸುಲ್ತಾನರನ್ನು ಮಾತ್ರ ಆಕ್ರಮಣಕಾರರು, ಖಳನಾಯಕರು ಎಂಬಂತೆ ಚಿತ್ರಿಸಲಾಗಿದೆ.
ಜನಶಕ್ತಿ : ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಪ್ರಭುತ್ವ, ಅದರ ಅಧಿಕಾರ ಹಂಚಿಕೆ ಹೇಗಿತ್ತು ?
ಡಾ|| ವಸು : ವಿಜಯನಗರ ಸಾಮ್ರಾಜ್ಯದಲ್ಲಿ ಪಾಳೇಯಪಟ್ಟುಗಳಿಗೆ `ಅಮರ ನಾಯಕ ಪದ್ದತಿ' ಎನ್ನಲಾಗುವ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಅಂದರೆ ಕುದುರೆಗಳು ಇತ್ಯಾದಿಗಳನ್ನು ಪಾಳೇಗಾರರು ವಿಜಯನಗರ ಸಾಮ್ರಾಟರಿಗೆ ನೀಡಬೇಕಾಗುತ್ತಿತ್ತು. ಇಂತಹ ಪಾಳೇಯ ಪಟ್ಟುಗಳವರು ಮಹಾನವಮಿ ಯಂದು ಬಂದು ಸಾಮ್ರಾಟರ ಪರವಾಗಿ ಬಲಪ್ರದರ್ಶನ ಮಾಡಬೇಕಿತ್ತು. ಉದಾಹರಣೆಗೆ : ಚಿತ್ರದುರ್ಗ ಪಾಳೇಯಗಾರರು ಹೀಗೆ `ಅಮರ ನಾಯಕ ಪದ್ದತಿ' ಒಪ್ಪಿಕೊಂಡವ ರಾಗಿದ್ದರು.
ಜನಶಕ್ತ : ವಿಜಯನಗರ ಸ್ಥಾಪನೆಯಾಗಿದ್ದು ಹಿಂದೂಧರ್ಮವನ್ನು ರಕ್ಷಿಸುವುದಕ್ಕಾಗಿ, ಹಿಂದೂ ಧರ್ಮವನ್ನು ಕಾಪಾಡುವುದಕ್ಕಾಗಿ ಎಂಬ ಪ್ರಾಚಾರವಿದೆ. ನೀವೇನನ್ನುತ್ತೀರಿ ?
ಡಾ|| ವಸು : ರಾಷ್ಟ್ರೀಯವಾದಿ ದೃಷ್ಟಿಕೋನದ ಇತಿಹಾಸಕಾರರಾದ ನೀಲಕಂಠ ಶಾಸ್ತ್ರಿಗಳು ವಿಜಯನಗರ ಸಾಮ್ರಾಜ್ಯವು ಹಿಂದೂ ಧರ್ಮ ಪ್ರತಿಷ್ಟಾಪನೆಗಾಗಿ ಹುಟ್ಟಿತು ಎಂದು ಪ್ರತಿಪಾದಿಸಿದ್ದಾರೆ. ರಾಜತ್ವದ ಹುಟ್ಟನ್ನು ನೋಡುವಾಗ ಮತ್ತು ವಂಶಪಾರಂಪರ್ಯವಾಗಿ ರಾಜತ್ವಕ್ಕೆ ಬರುವಾಗ ರಾಜರ ಮೂಲಭೂತ ಪ್ರಯತ್ನ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವುದಾಗಿರುತ್ತದೆ. ಅವರಿಗೆ `ಸಾಮ್ರಾಜ್ಯ' ಆಗುವ ಪರಿಕಲ್ಪನೆ ಇರುವುದಿಲ್ಲ. ರಾಜ್ಯ ಸ್ಥಾಪನೆ ಆದ ಮೇಲೆ ಧಾರ್ಮಿಕ ಅಂಗೀಕಾರ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತದೆ. ಧರ್ಮಾಧಿಕಾರಿಗಳು ಸಹ ರಾಜ ಪ್ರಭುತ್ವದ ಆಶ್ರಯ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.
ಹೀಗೆ ಜೈನರ, ಶ್ವೆವರು ರಾಜಾಶ್ರಯದಲ್ಲಿ ಬೆಳೆಯಲು ಪ್ರಯತ್ನಿಸಿದವರು. ರಾಜನಿಗೆ ರಾಜ ಧರ್ಮ ಮುಖ್ಯವಾಗುತ್ತದೆ. ರಾಜನ ವೈಯಕ್ತಿಕವಾದ ಧರ್ಮ ಎನ್ನುವುದು ಮುಖ್ಯ ವಾಗುವುದಿಲ್ಲ. ಮೊದಲ ಎರಡು ವಂಶಗಳು ಸಂಗಮ ಮತ್ತು ಸಾಳ್ವ ಇವು ಶೈವ ಪರಪಂರೆಗೆ ಸೇರಿದವು, ಅವು ಶೈವ ಧರ್ಮಕ್ಕೆ ಪ್ರಾಧಾನ್ಯತೆ ಕೊಟ್ಟವು. ಅದಲ್ಲೂ ವಿರೂಪಾಕ್ಷ ದೇವಾಲಯಕ್ಕೆ ಹಾಗೂ ಕನ್ನಡ ಪ್ರದೇಶದ ಕನ್ನಡಿಗರಿಗೆ ಆದ್ಯತೆ ಇತ್ತು. ಆನಂತರದ ಎರಡು ವೈಷ್ಣವ ಪರಂಪರೆಗೆ ಸೇರಿದವು. ಆಂಧ್ರ-ತೆಲುಗು ಪ್ರದೇಶಗಳು ಈ ಕಾಲದಲ್ಲಿ ಪ್ರಾಧಾನ್ಯತೆ ಪಡೆದವು. ಕೃಷ್ಣ ದೇವರಾಯನು ತೆಲುಗು ವೈಷ್ಣವ ಪರಂಪರೆಗೆ ಸೇರಿದ ಸಾಮ್ರಾಟ. ಶೈವರ ಕುರಿತು ಗೌರವಯುತವಾಗಿ ನಡೆದುಕೊಂಡರೂ, ಆದ್ಯತೆ ಕೊಟ್ಟಿದ್ದು ವಿಜಯ ವಿಠಲ ದೇವಸ್ಥಾನ ಹಾಗೂ ತಿರುಪತಿಗೆ. ಹಾಗೂ ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ.
ಜನಶಕ್ತಿ : ಬಹುಮನಿ ಸುಲ್ತಾನರು ವಿಜಯನಗರ ವೈಭವವನ್ನು ನಾಶಮಾಡಿ ಕೊಳ್ಳೆ ಹೊಡೆದರು ಎಂಬುದು ಸುಳ್ಳೇ?
ಡಾ