ಮಂಗಳೂರು: ಭೂಗತ ಡಾನ್ ರವಿಪೂಜಾರಿ ಸಹಚರರನ್ನು ಮಂಗಳೂರು ಡಿಸಿಐಬಿ ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸಿದ ಘಟನೆ ನಡೆದಿದೆ. ಆದರೆ ಅಧಿಕೃತವಾಗಿ ಪೊಲೀಸರು ಯಾವುದೇ ಮಾಹಿತಿಗಳನ್ನು ನೀಡುತ್ತಿಲ್ಲವಾದರೂ ಪೊಲೀಸರ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಪೊಲೀಸರು ಬಂಧಿಸಿದ ರವಿ ಪೂಜಾರಿ ಸಹಚರರ ನಿಖರ ಮಾಹಿತಿ ಲಭ್ಯವಾಗದಿ ದ್ದರೂ ಬಂಧಿತರಲ್ಲಿ ಇಬ್ಬರ ಗುರುತು ಪತ್ರಿಕೆಗೆ ದೊರೆತಿದೆ. ಒಬ್ಬಾತನನ್ನು ಪ್ರಶಾಂತ್ ಶೆಟ್ಟಿ ಉಡುಪಿ ಹಾಗೂ ಮತ್ತೊಬ್ಬ ಯುವಕನನ್ನು ಸುಧೀರ್ ಎಂದು ಗುರುತಿಸಲಾಗಿದೆ. ಇವರನ್ನು ಬೆಳ್ಮಣ್ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಕೊಲೆ, ಸುಲಿಗೆ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇವರು ಬೇಕಾದವರಾಗಿದ್ದು ಖಚಿತ ಮಾಹಿತಿ ಅನುಸರಿಸಿ ಇವರನ್ನು ಬಂಧಿಸಲಾಗಿದೆ. ಮೊದಲು ಉಗ್ರರ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ರವಿ ಪೂಜಾರಿ ಸಹಚರರಿದ್ದ ಜಾಗಕ್ಕೆ ದಾಳಿ ಮಾಡಿದ್ದರು ಎನ್ನಲಾಗಿದೆ. ಆದರೆ ತಾವು ದಾಳಿ ಮಾಡಿ ಉಗ್ರರಿದ್ದ ಜಾಗಕ್ಕಲ್ಲ, ಬದಲಾಗಿ ರವಿಪೂಜಾರಿ ಸಹಚರರಿದ್ದ ಪ್ರದೇಶಕ್ಕೆ ಎನ್ನುವುದು ಆನಂತರ ಪೊಲೀಸರಿಗೆ ಗೊತ್ತಾಯಿತು ಎನ್ನಲಾಗಿದೆ. ಬಂಧಿತ ರವಿ ಪೂಜಾರಿ ಸಹಚರರಿಂದ ಪಿಸ್ತೂಲ್ ಸೇರಿದಂತೆ ಮಾರಕ ಆಯುಧಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಂಧಿತ ಯುವಕರಲ್ಲಿ ಇಬ್ಬರ ಗುರುತು ಪತ್ತೆಯಾದರೂ ಉಳಿದ ಯುವಕರ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಉಳಿದ ಯುವಕರಲ್ಲಿ ಇಬ್ಬರೋ, ಮೂವರೋ ಇದ್ದಿರಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಬಂಧಿತರನ್ನು ತೀವ್ರ ವಿಚಾರಣೆ ಮಾಡಬೇಕಿರುವುದರಿಂದ ಪೊಲೀಸರು ಈ ಕುರಿತಾದ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ. ಜೊತೆಗೆ ಬಂಧಿತರು ರವಿಪೂಜಾರಿಯ ಸಹಚರರಾದ ಕಾರಣ ಅವರು ಉಗ್ರರಾಗುದಿಲ್ಲವೇ ಎಂಬ ಸಂಶಯ ವ್ಯವಸ್ಥೆಯ ಮನೋವೈಖರಿಯನ್ನು ತೋರಿಸುತ್ತದೆ.
ವರದಿ: ಅಶ್ರಫ್ ಮಂಜರಾಬಾದ್, ಸೌದಿ ಅರೇಬಿಯಾ.