ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರದ ಬಳಿ ಚರ್ಚ್‌ಗೆ ಕಲ್ಲೆಸೆತ

ಕುಂದಾಪುರದ ಬಳಿ ಚರ್ಚ್‌ಗೆ ಕಲ್ಲೆಸೆತ

Sat, 13 Feb 2010 20:29:00  Office Staff   S.O. News Service

ಕುಂದಾಪುರ, ಫೆಬ್ರವರಿ೧೪: ಉಡುಪಿ ಜಿಲ್ಲೆಯಲ್ಲಿ ಚರ್ಚ್ ಮೇಲಿನ ದಾಳಿ ಪ್ರಕರಣ ಮರುಕಳಿಸಿದ್ದು, ಕಳೆದ ರಾತ್ರಿ ಕೋಟೇಶ್ವರ ಸಮೀಪದ ಕಟ್ಕೇರಿಯ ಕಾರ್ಮೆಲೈಟ್ -ದರ್ಸ್ ಚರ್ಚ್‌ನ ಆವರಣದಲ್ಲಿದ್ದ ಗ್ರೋಟ್ಟೊಗೆ ದುಷ್ಕರ್ಮಿಗಳು ಕಲ್ಲೆಸೆದು ಅದರೊಳಗಿದ್ದ ಬಾಲ ಯೇಸು ಪ್ರತಿಮೆಯನ್ನು ಹಾನಿಗೊಳಿಸಿದ್ದಾರೆ.

 

 

 14-kun1.jpg

14-kun3.jpg

ಭಕ್ತರು ಇಂದು ಬೆಳಗ್ಗೆ ರವಿವಾರದ ವಿಶೇಷ ಪ್ರಾರ್ಥನೆಗೆಂದು ಚರ್ಚ್‌ಗೆ ಆಗಮಿಸಿದ ವೇಳೆ ಈ ಘಟನೆ ಬೆಳಕಿಗೆ ಬಂತು. ಘಟನೆಯಿಂದ ಗ್ರೊಟ್ಟೋವಿನ ಮೂರು ಸುತ್ತಿನಲ್ಲಿದ್ದ ಗಾಜು ಸಂಪೂರ್ಣ ಪುಡಿಯಾಗಿದ್ದು, ಬಾಲಯೇಸು ಮೂರ್ತಿಯ ಬಲ ಕಣ್ಣು ಭಾಗ ಹಾಗೂ ಬಲ ಕೈ ಮುರಿದು ಬಿದ್ದಿದೆ. ಚರ್ಚ್‌ನಲ್ಲಿ ಯಾರೂ ಇಲ್ಲದ ವೇಳೆ ಮಧ್ಯರಾತ್ರಿಯ ಸುಮಾರಿಗೆ ಚರ್ಚ್‌ನ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು ಗ್ರೋಟ್ಟೊವಿನ ಹತ್ತಿರದಿಂದಲೇ ಕಲ್ಲೆಸೆದು ಹಾನಿ ಉಂಟುಮಾಡಿದ್ದಾರೆ. ಇದರಿಂದಾಗಿ ಮೂರ್ತಿಗೆ ಹೆಚ್ಚಿನ ಹಾನಿ ಉಂಟಾಗಿದೆ. 

14-kun4.jpg

14-kun5.jpg

14-kun6.jpg

14-kun7.jpg

14-kun8.jpg 

 

 ಬೆಳಗ್ಗೆ ಚರ್ಚ್‌ಗೆ ಧರ್ಮಗುರು ಬೋನಿಪಾಸ್ ಡಿಸೋಜ ಮೊದಲು ಇದನ್ನು ಗಮನಿಸಿ ಮೂರ್ತಿಯನ್ನು ಅಲ್ಲಿಂದ ಸ್ಥಳಾಂತರಿಸಿ ಒಳಗಿರಿಸಿದರನ್ನೆಲಾಗಿದೆ. ಆದರೆ ಚರ್ಚ್‌ನ ಪ್ರಾರ್ಥನೆಗೆಂದು ಆಗಮಿಸಿದವರು ಖಾಲಿಯಾದ ಗ್ರೋಟ್ಟೊವನ್ನು ಗಮನಿಸಿ ಧರ್ಮಗುರುಗಳನ್ನು ವಿಚಾರಿಸಿದಾಗ ಅವರು ನಡೆದುದನ್ನು ಹೇಳಿದರೆನ್ನಲಾಗಿದೆ. ವಿಷಯವನ್ನು ಮುಚ್ಚಿಡುವ ಬದಲು ಪೊಲೀಸರ ಗಮನಕ್ಕೆ ತರಲು ಒತ್ತಾಯಿಸಿದಾಗ, ಪೊಲೀಸರಿಗೆ ಮಾಹಿತಿಯನ್ನು ನೀಡಲಾಯಿತು ಎಂದು ತಿಳಿದುಬಂದಿದೆ. ವಿಚಾರ ಹಬ್ಬುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಚರ್ಚ್‌ಗೆ ಧಾವಿಸಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

 

 

ಚರ್ಚ್ ಮೇಲೆ ದಾಳಿ: ಯಡಿಯೂರಪ್ಪ ಅಭಯ

ರಾಜ್ಯದಲ್ಲಿ ಕ್ರೈಸ್ತ ಸಮುದಾಯ ಆತಂಕದ ವಾತಾವರಣದಲ್ಲಿ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದಾರೆ.

 

ರವಿವಾರ ನಗರದ ಸಂತ ಜೋಸೆಫರ ದೇವಾಲಯದ ಬಳಿ ಇರುವ ಬ್ರಿಯ್ಯಾಂಡ್ ವೃತ್ತದಲ್ಲಿ ಪೀಟರ್ ಬ್ರಿಯ್ಯಾಂಡ್ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು. ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ವಿಧ್ವಂಸಕಾರಿ, ಪ್ರಚೋದನಕಾರಿ ದುಷ್ಟ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಹೊರಟಿವೆ. ಇಂತಹ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಧರ್ಮಕ್ಷೇತ್ರಗಳು ಹಾಗೂ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದರೆ ತನಗೆ ನೋವಾಗುತ್ತದೆ. ಇದನ್ನು ಎಂದೂ ಸಹಿಸುವುದಿಲ್ಲ. ಇಂತಹ ಕೃತ್ಯಗಳನ್ನು ತಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ನುಡಿದರು.

ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕೆಲವು ಶಕ್ತಿಗಳು ಜಾತಿಯ ವಿಷ ಬೀಜ ಬಿತ್ತಿ, ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಈ ಮೂಲಕ ಸರಕಾರಕ್ಕೆ ಕೆಟ್ಟ ಹೆಸರು ತರಲು ಪಿತೂರು ನಡೆಸುತ್ತಿವೆ. 

ಇಂತಹ ಕೃತ್ಯಗಳಿಗೆ ಇನ್ನುಮುಂದೆ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳನ್ನು ಸಮಾನವಾಗಿ ನೋಡುತ್ತಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಆಡಳಿತ ನೀಡುತ್ತೇವೆ ಎಂದು ಅವರು ತಿಳಿಸಿದರು. ನಾಡಿನಲ್ಲಿ ವಿವಿಧ ಜಾತಿ, ಧರ್ಮದವರು ಏಕತೆ, ಸಮನ್ವಯ ಭಾವನೆಯಿಂದ ಬಾಳುತ್ತಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ಧರ್ಮದವರೂ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಿಟ್ಟು ಮುನ್ನಡೆಯಬೇಕಾದ ಅವಶ್ಯಕತೆ ಇದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಪೂಜ್ಯ ಪೀಟರ್ ಬ್ರಿಯಾಂಡ್‌ರ ಸಾಧನೆ ಹಾಗೂ ಸಮಾಜ ಸೇವೆಗಾಗಿ ಬ್ರಿಯಾಂಡ ವೃತ್ತ ಎಂದು ಹೆಸರಿಡಲಾಗಿತ್ತು. ಈಗ ವೃತ್ತದಲ್ಲಿ ಅವರ ಪ್ರತಿಮೆ ಅನಾವರಣ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಅವರು ಧರ್ಮ ಗುರುವಾಗಿ ಹಾಗೂ ಪಾಲಿಕೆಯ ಸದಸ್ಯರಾಗಿ ಸಲ್ಲಿಸಿದ ಸಮಾಜ ಸೇವೆ ಎಂದು ಮರೆಯಲು ಸಾಧವಿಲ್ಲ ಎಂದು ಯಡಿಯೂರಪ್ಪ ನುಡಿದರು.

 

ಮೂರ್ತಿಗೆ ಹಾನಿ

ಎರಡನೆ ದಾಳಿ: ಕೋಟೇಶ್ವರದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಕಟ್ಕೇರಿಯ ಈ ಬಾಲ‌ಏಸು ದೇವಾಲಯಕ್ಕೆ ಆಸುಪಾಸಿನ ೬೦ರಿಂದ ೭೦ ಕುಟುಂಬಗಳು ಪ್ರಾರ್ಥನೆಗೆ ಬರುತ್ತಿವೆ. ಈ ಹಿಂದೆ ರಾಜ್ಯಾದ್ಯಂತ ಚರ್ಚ್‌ಗಳ ಮೇಲೆ ದಾಳಿ ನಡೆದ ಸಂದರ್ಭದಲ್ಲೂ ಈ ಚರ್ಚ್‌ನ ಗ್ರೊಟ್ಟೊಗೆ ಕಲ್ಲೆಸೆದು ಹಾನಿಗೊಳಿಸಲಾಗಿತ್ತು. ಆದರೆ ಅಂದು ಕೇವಲ ಅದರ ಒಂದು ಗ್ಲಾಸ್ ಮಾತ್ರ ಚೂರಾಗಿತ್ತು. ಇದೀಗ ಎರಡನೆ ಬಾರಿಗೆ ದಾಳಿ ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಉಂಟಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಕ್ರೈಸ್ತ ಬಾಂಧವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಚರ್ಚ್‌ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಕುಂದಾಪುರ ವೃತ್ತ ನಿರೀಕ್ಷಕ ಮದನ್ ಗಾಂವ್ಕರ್ ಹಾಗೂ ಎಸ್‌ಐ ದಿನೇಶ್ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

ಪೊಲೀಸರ ಯತ್ನ!

ಈ ಮೂಲಕ ಪೊಲೀಸರು ಇಡೀ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ. ಚರ್ಚ್‌ನ ಆಡಳಿತ ಮಂಡಳಿಯವರು ಠಾಣೆಗೆ ದೂರು ನೀಡುವ ಮೊದಲೇ ಆಗಮಿಸಿದ ಪೊಲೀಸರು ಗ್ರೊಟ್ಟೊವಿನ ಗಾಜನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು. ಬಳಿಕ ಅದರೊಳಗಿದ್ದ ಮೂರ್ತಿಯನ್ನು ತೆಗೆದು ಹೊಸ ಮೂರ್ತಿಯನ್ನು ಇರಿಸಲಾಯಿತು.

 

ಮಾಧ್ಯಮದವರು ಸ್ಥಳಕ್ಕೆ ಆಗಮಿಸುವ ವಿಚಾರ ತಿಳಿದ ಪೊಲೀಸರು ಹಾನಿಗೊಳಗಾದ ಮೂರ್ತಿಯನ್ನು ಜೀಪಿನಲ್ಲಿ ಇರಿಸಿದರೆನ್ನಲಾಗಿದೆ. ಅವರ ಆಗಮನವಾಗುತ್ತಿದ್ದಂತೆಯೇ ಮೂರ್ತಿಯನ್ನು ಜೀಪಿನಲ್ಲಿ ಠಾಣೆಗೆ ಸಾಗಿಸಲಾಯಿತು. ಮಾಧ್ಯಮದವರಿಗೆ ಹಾನಿಯಾಗಿರುವ ಮೂರ್ತಿಯ ಫೋಟೊ ದೊರೆಯಬಾರದೆಂಬ ಉದ್ದೇಶದಿಂದ ಪೊಲೀಸರು ಈ ಕೆಲಸ ಮಾಡಿರಬಹುದೆಂದು ದೂರಲಾಗಿದೆ. ಮೂರ್ತಿಯನ್ನು ಹೆಚ್ಚಿನ ತನಿಖೆಗಾಗಿ ಹಾಗೂ ನ್ಯಾಯಾಲಯಕ್ಕೆ ಹಾಜರು ಪಡಿಸುವ ಉದ್ದೇಶದಿಂದ ಠಾಣೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಚರ್ಚ್‌ನವರು ದೂರು ನೀಡುವ ಮೊದಲೇ ಮೂರ್ತಿಯನ್ನು ಪೊಲೀಸರೇ ತೆಗೆದುಕೊಂಡು ಹೋಗಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

 

ಸಹಮತ ಖಂಡನೆ: ಕುಂದಾಪುರದ ಸಹಮತ ಸಂಘಟನೆ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಘಟನೆಯ ಕುರಿತು ದೂರು ದಾಖಲಾಗುವ ಮೊದಲೇ ಕುಂದಾಪುರದ ಪೊಲೀಸ್ ಅಧಿಕಾರಿಗಳು ಹಾನಿಗೊಂಡ ಪ್ರತಿಮೆಯನ್ನು ಕ್ರೈಸ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವ ರೀತಿಯಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ಠಾಣೆಗೆ ಸಾಗಿಸಿರುವುದು ಸರಿಯಲ್ಲ

ಎಂದು ಹೇಳಿಕೆಯಲ್ಲಿ ಆಕ್ಷೇಪಿಸಿದೆ.

 

ಡಾ.ಮೊರಾಸ್ ಕಿಡಿ

ಕಿಡಿಗೇಡಿಗಳು ಇಂತಹ ಕೃತ್ಯಗಳನ್ನು ಎಸಗಿದ್ದಾರೆ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ ಇದುವರೆಗೂ ಯಾವೊಬ್ಬನನ್ನೂ ಬಂಧಿಸಿಲ್ಲ ಎಂದು ಮೊರಾಸ್ ಅತೃಪ್ತಿ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪನವರಿಗೆ ಪ್ರಾರ್ಥನಾ

ಮಂದಿರಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯುವಂತೆ ಮನವಿ ಮಾಡಿದ್ದೇನೆ. ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮೊರಾಸ್ ತಿಳಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೊರಾಸ್, ಕ್ರೈಸ್ತ ಧರ್ಮದವರು ಜಾತಿ, ಮತ, ಭೇದವಿಲ್ಲದೆ ರಾಜ್ಯದಲ್ಲಿ ಸ್ಥಾಪಿಸಿರುವ ವಿವಿಧ ಸಂಸ್ಥೆಗಳ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ. ಇದನ್ನು ಯಾರೇ ವಿರೋಧಿಸಲಿ, ಅಡ್ಡಿಪಡಿಸಲಿ ಈ ಸೇವೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೀಟರ್ ಬ್ರಿಯ್ಯಾಂಡ್‌ರ ಪ್ರತಿಮೆ ಅನಾವಣರಗೊಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ಜಮೀರ್ ಅಹಮ್ಮದ್ ಖಾನ್, ಮಾಜಿ ನಗರಸಭಾ ಸದಸ್ಯ ಚಂದ್ರಶೇಖರ್, ಶ್ರೇಷ್ಠ ಗುರು ಸಿ.ಫ್ರಾನ್ಸಿಸ್, ಎಸ್.ಜಯನಾಥನ್ ಮುಂತಾದವರು ಉಪಸ್ಥಿತರಿದ್ದರು.

 

 


Share: