ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಿಂದುಳಿದ ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಸಿದ್ದರಾಮಯ್ಯ

ಹಿಂದುಳಿದ ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಲಿ: ಸಿದ್ದರಾಮಯ್ಯ

Wed, 02 Nov 2022 22:45:39  Office Staff   Vb

ಬೆಂಗಳೂರು: ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ. ಕುರುಬರ ಬಗ್ಗೆ ಬಿಜೆಪಿಯವರಿಗೆ ತುಂಬಾ ಪ್ರೀತಿ ಇದ್ದರೆ ಬಸವರಾಜ ಬೊಮ್ಮಾಯಿಯವರಿಂದ ರಾಜೀನಾಮೆ ಪಡೆದು, ಕೆ.ಎಸ್.ಈಶ್ವರಪ್ಪ ಅಥವಾ ಇನ್ಯಾರಾದರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಮಂಗಳವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಸಮಾವೇಶದಲ್ಲಿ ಪ್ರತಿಯೊಬ್ಬರು ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಿಯಾಗಿರಿಸಿಕೊಂಡು ಸುಳ್ಳು ಆರೋಪಗಳನ್ನು ಮಾಡಿ, ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುರಿ ಮತ್ತು ಉಣ್ಣೆ ಮಹಾಮಂಡಲ ರಚನೆ ಮಾಡಿದ್ದು ಹಿಂದಿನ ನಮ್ಮ ಸರಕಾರ ಎಂದ ಸಿದ್ದರಾಮಯ್ಯ, 1.75 ಲಕ್ಷ ರೂ. ಗಳಲ್ಲಿ ಶೇ.50ರಷ್ಟು ಹಣವನ್ನು ಎನ್‌ಡಿಸಿ ಮೂಲಕ ಸಾಲ, ಶೇ.25ರಷ್ಟು ಸರಕಾರದ ಸಬ್ಸಿಡಿ ಮತ್ತು ಉಳಿದ ಶೇ.25ರಷ್ಟು ಹಣವನ್ನು ಫಲಾನುಭವಿ ಹಾಕಬೇಕು. ಆದರೆ ಮುಖ್ಯಮಂತ್ರಿ ಬೊಮ್ಮಾಯಿಯವರು ತಮ್ಮ ಭಾಷಣದಲ್ಲಿ ಇದನ್ನು ಉಚಿತವಾಗಿ ಎಲ್ಲರಿಗೂ ನೀಡುತ್ತಿದ್ದೇವೆ ಎಂದಿದ್ದಾರೆ ಎಂದು ಆರೋಪಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬೀದರ್, ಯಾದಗಿರಿ, ಕಲಬುರಗಿಯಲ್ಲಿರುವ ಗೊಂಡ ಸಮುದಾಯ( ಕುರುಬ ಜಾತಿಯ ಜನ) ಹಾಗೂ ಕೊಡಗಿನ ಕುರುಬ ಸಮಾಜವನ್ನು ಎಸ್ ಟಿಗೆ ಸೇರಿಸಿ ಎಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದೆ. ಮೋದಿ ಪ್ರಧಾನಿಯಾಗಿ 8 ವರ್ಷ ಆಗಿದೆ, ಯಾಕಿನ್ನೂ ಅವರನ್ನು ಎಸ್‌ಟಿ ಪಟ್ಟಿಗೆ ಸೇರಿಸಿಲ್ಲ? ಬೆಸ್ತ ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದೆ. ಬಸವರಾಜ ಬೊಮ್ಮಾಯಿ ಈ ಸಮಾಜಗಳನ್ನು ಎಸ್‌ಟಿಗೆ ಸೇರಿಸಲಿ ಎಂದು ಅವರು ಆಗ್ರಹಿಸಿದರು.

ನರೇಂದ್ರ ಮೋದಿ ಸಾಮಾನ್ಯ ವರ್ಗದಲ್ಲಿರುವ ಆರ್ಥಿಕವಾಗಿ ದುರ್ಬಲ ಜನರಿಗೆ ಸ್ವಯಂ ಪ್ರೇರಿತವಾಗಿ ಶೇ.10ರಷ್ಟು ಮೀಸಲಾತಿ ನೀಡಿದರು. ಇದು ಸಂವಿಧಾನದ 15 ಮತ್ತು 16ನೇ ಆರ್ಟಿಕಲ್‌ಗೆ ವಿರುದ್ಧವಾಗಿದೆ. ರಾಜ್ಯದಿಂದ ಹಿಂದುಳಿದ ಜಾತಿಗಳಿಗೆ ಶಿಫಾರಸು ಮಾಡಿರುವ ಮೀಸಲಾತಿಯನ್ನು ನೀಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಅರಸು ಅಭಿವೃದ್ಧಿ ನಿಗಮಕ್ಕೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ: ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸರಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ, ನಮ್ಮ ಸರಕಾರ ಏನು ಮಾಡಿದೆ ಎನ್ನುವುದನ್ನು ನಾನು ಹೇಳುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆ ಆಗಲಿ ಎಂದು ಸಿದ್ದರಾಮಯ್ಯ ಹೇಳಿದರು.

ಅರಿವು, ವಿದ್ಯಾಸಿರಿ, ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಗಜೀವನ್ ರಾಮ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡಲಾಗಿದೆ. ಮಡಿವಾಳ ಅಭಿವೃದ್ಧಿ ನಿಗಮಕ್ಕೆ ನಯಾಪೈಸೆ ಅನುದಾನ ನೀಡಿಲ್ಲ ಎಂದು ಅವರು ಕಿಡಿಗಾರಿದರು.

40 ಇಂದಿರಾ ಕ್ಯಾಂಟೀನ್‌ಗಳನ್ನು ನಿಲ್ಲಿಸಲಾಗಿದೆ. ಬಡವರು, ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗಾಗಿ ಇದ್ದ ಕ್ಯಾಂಟೀನ್‌ಗಳನ್ನು ನಿಲ್ಲಿಸಿದ್ದಾರೆ ಎಂದರೆ ಈ ಸರಕಾರ ಬಡವರ ಪರವಾಗಿ ಇಲ್ಲ ಎಂದು ಅರ್ಥ ಎಂದು ಅಭಿಪ್ರಾಯಪಟ್ಟರು.

ಕೆ.ಆರ್.ಪುರ ಪೊಲೀಸ್ ಇನ್‌ಸ್ಪೆಕ್ಟರ್ ನಂದೀಶ್ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಅಥವಾ ಗೃಹಸಚಿವರು ಅಥವಾ ಸ್ಥಳೀಯ ಶಾಸಕ ಯಾರೇ ಆಗಲಿ ಲಂಚ ಪಡೆದು ವರ್ಗಾವಣೆ ಮಾಡಿದ್ದರೆ ಅವರು ರಾಜೀನಾಮೆ ನೀಡಲೇಬೇಕು ಎಂದು ಅವರು ಆಗ್ರಹಿಸಿದರು.

ಪಿ ಎಸ್ಸೈ ನೇಮಕಾತಿ ಹಗರಣದಿಂದ ಅನ್ಯಾಯಕ್ಕೀಡಾದ ವಿದ್ಯಾರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರನ್ನು ತಳ್ಳಿ ಹೊರಹಾಕಲಾಗಿದೆ. ಈ ಬಿಜೆಪಿಯವರಿಗೆ ಮಾನವೀಯತೆ ಇಲ್ಲ. ಹಿಟ್ಲರ್ ವಂಶಸ್ತರಾದ ಬಿಜೆಪಿಯವರಲ್ಲಿ ಮಾನವೀಯತೆ ಇರುತ್ತಾ? ಸರ್ವಾಧಿಕಾರದಲ್ಲಿ ನಂಬಿಕೆ ಇರುವುದರಿಂದಲೇ ಇವರು ಹಿಟ್ಲರ್ ನನ್ನು ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲು ಒಬ್ಬ ಜೋಕರ್, ಅಂಥವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದು ಅವರು ಹೇಳಿದರು.


Share: