ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಾಥರಸ್ ಪ್ರಕರಣ: ಆರೋಪಿಗಳ ಖುಲಾಸೆ, ದಲಿತ-ಬಹುಜನ ಆದಿವಾಸಿ-ವಿಮುಕ್ತ ಆಕ್ರೋಶ

ಹಾಥರಸ್ ಪ್ರಕರಣ: ಆರೋಪಿಗಳ ಖುಲಾಸೆ, ದಲಿತ-ಬಹುಜನ ಆದಿವಾಸಿ-ವಿಮುಕ್ತ ಆಕ್ರೋಶ

Sun, 12 Mar 2023 18:16:04  Office Staff   Vb

ಹೊಸದಿಲ್ಲಿ: ಹಾಥರಸ್‌ನಲ್ಲಿ 2020 ಸೆಪ್ಟೆಂಬರ್‌ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಖುಲಾಸೆಗೊಳಿಸಿ ಉತ್ತರಪ್ರದೇಶದ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ದಲಿತ -ಬಹುಜನ-ಆದಿವಾಸಿ-ವಿಮುಕ್ತ(ಡಿಬಿಎವಿ)ದ ಹೋರಾಟಗಾರರು ಖಂಡಿಸಿದ್ದಾರೆ.

ನ್ಯಾಯ ಸಮ್ಮತ ವಿಚಾರಣೆಗೆ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ವಿಳಂಬಿಸದೆ ಮೇಲ್ಮನವಿ ಸಲ್ಲಿಸುವಂತೆ ಸಾಮಾಜಿಕ ಹೋರಾಟಗಾರರ ಗುಂಪು ಉತ್ತರ ಪ್ರದೇಶ ಸರಕಾರಕ್ಕೆ ಮನವಿ ಮಾಡಿದೆ.

ಪ್ರಕರಣದಲ್ಲಿ ಸಂತ್ರಸ್ತೆ ವಾಲ್ಮೀಕಿ ಸಮುದಾದ 19 ವರ್ಷದ ಯುವತಿ, ಆರೋಪಿಗಳೆಲ್ಲರೂ ಪ್ರಬಲ ಜಾತಿಯಾದ ಠಾಕೂರ್ ಸಮುದಾಯಕ್ಕೆ ಸೇರಿದವರು. ಆದುದರಿಂದ ನ್ಯಾಯದ ದಾರಿ ತಪ್ಪಿಸಿರುವುದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್‌ ಅಧೀಕ್ಷಕರ ವಿರುದ್ಧ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರರು ಕೋರಿದ್ದಾರೆ.

“ಅಂತರ್‌ರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನ ಈ ತೀರ್ಪು ಹೊರಬಿದ್ದಿದೆ. ಆದರೆ, ದಮನಿತ ಜಾತಿಯ ಮಹಿಳೆಯರು ಈ ದಿನವನ್ನು ಆಚರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ಇದರ ಬದಲು ಜಾತಿವಾದದಿಂದ ಪೀಡಿತವಾದ ಸಮಾಜದಲ್ಲಿ ನಮ್ಮ ಸ್ತ್ರೀತ್ವಕ್ಕೆ ಗೌರವ ಸಿಗಲಾರದು ಎಂದು ನಮಗೆ ಆಗಾಗ ನೆನಪಿಸಲಾಗುತ್ತಿದೆ'' ಎಂದು ಹೇಳಿಕೆ ತಿಳಿಸಿದೆ.


Share: