ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹವಾಮಾನ ಇಲಾಖೆಯಿಂದ 5 ರಾಜ್ಯಗಳಿಗೆ ಬಿಸಿ ಗಾಳಿಯ ಮುನ್ನೆಚ್ಚರಿಕೆ

ಹವಾಮಾನ ಇಲಾಖೆಯಿಂದ 5 ರಾಜ್ಯಗಳಿಗೆ ಬಿಸಿ ಗಾಳಿಯ ಮುನ್ನೆಚ್ಚರಿಕೆ

Fri, 29 Apr 2022 16:26:30  Office Staff   Vb

ಹೊಸದಿಲ್ಲಿ: ದೇಶದ ದೊಡ್ಡ ಭಾಗದಲ್ಲಿ ಸುಮಾರು 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗುವುದರೊಂದಿಗೆ “ಇದುವರೆಗಿನ ಅತಿ ಬೇಗೆಯ ಬೇಸಗೆ'ಗೆ ಸಾಕ್ಷಿಯಾಗಿರುವ ಭಾರತದ ಕನಿಷ್ಠ 5 ರಾಜ್ಯಗಳಲ್ಲಿ ಮುಂದಿನ 5 ದಿನಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ)ಮುನ್ನೆಚ್ಚರಿಕೆ ನೀಡಿದೆ.

ಮುಂದಿನ ಮೂರು ದಿನಗಳಲ್ಲಿ ವಾಯವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶ ಸುಮಾರು 2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಬಹುದು ಹಾಗೂ ಆನಂತರ ಉಷ್ಣಾಂಶ ಸುಮಾರು 2 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಬಹುದು ಎಂದು ಅದು ಹೇಳಿದೆ.

ರಾಜಸ್ಥಾನ, ದಿಲ್ಲಿ, ಹರ್ಯಾಣ, ಉತ್ತರಪ್ರದೇಶ ಹಾಗೂ ಒಡಿಶಾದ ವಿವಿಧ ಭಾಗಗಳಲ್ಲಿ 45 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗಿರುವುದರಿಂದ

ಈ ರಾಜ್ಯಗಳಲ್ಲಿ ಉಷ್ಣಮಾರುತದ ಮುನ್ನೆಚ್ಚರಿಕೆ ನೀಡಲಾಗಿದೆ. ಈ ತೀವ್ರ ಪರಿಸ್ಥಿತಿ ಮೇ ಮೊದಲ ವಾರದವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಆನಂತರ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಜೇನಮಣಿ ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಗಳಲ್ಲಿ ಉಷ್ಣಾಂಶ45 ಡಿಗ್ರಿ ಸೆಲ್ಸಿಯಸ್ ದಾಟುವು ದರೊಂದಿಗೆ ಕೇಂದ್ರ ಭಾರತದಲ್ಲಿ ತಾಪಮಾನ ಮೇಲ್ಮುಖವಾಗಿ ಸಾಗಲಿದೆ. ಈ ವಲಯದಲ್ಲಿ ಹಗಲು ಹೊತ್ತಿನಲ್ಲಿ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ತಲುಪುವುದರೊಂದಿಗೆ ಹವಾ ಮಾನ ಇಲಾಖೆ ನಿರೀಕ್ಷಿಸಿದಂತೆ ದಿಲ್ಲಿ ಇಂದು ಬೆಳಗ್ಗೆ ಇನ್ನೊಂದು ಬೇಗೆಯ ಮುಂಜಾನೆಗೆ ಸಾಕ್ಷಿಯಾಯಿತು. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ.

ದೇಶದ ದೊಡ್ಡ ಭಾಗದಲ್ಲಿ ಸೃಷ್ಟಿಯಾಗುವ ಉಷ್ಣ ಮಾರುತಗಳು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ವಿದ್ಯುತ್ ಬೇಡಿಕೆ ಏರಿಕೆಯಾಗಲು ಕಾರಣವಾಗಲಿದೆ. ಈಗಾಗಲೇ ಎರಡು ತಿಂಗಳಲ್ಲಿ ನಾಲ್ಕು ಬಾರಿ ಉಷ್ಣ ಮಾರುತವನ್ನು ಎದುರಿಸಿರುವ ಮಹಾರಾಷ್ಟ್ರದಲ್ಲಿ 20,000 ಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಕಲ್ಲಿದ್ದಲು ಕೊರತೆ ವರದಿಯಾಗಿದೆ. ರಾಜ್ಯದ ಪ್ರಮುಖ ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಎರಡು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಕಲ್ಲಿದ್ದಲು ಖಾಲಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಇಂಧನ ಸಚಿವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದರು.

ರಾಜಸ್ಥಾನ ಕಾರ್ಖಾನೆಗಳಿಗೆ 4 ಗಂಟೆಗಳ ವಿದ್ಯುತ್ ಕಡಿತವನ್ನು ಜಾರಿಗೊಳಿಸಿದೆ. ಇದರೊಂದಿಗೆ ತೀವ್ರ ಉಷ್ಣಮಾರುತ'ದ ನಡುವೆ ಏರಿಕೆಯಾಗುತ್ತಿರುವ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಲು ಕೈಗಾರಿಕೆ ಚಟುವಟಿಕೆಗೆ ಅಡ್ಡಿ ಉಂಟು ಮಾಡಿದ ಗುಜರಾತ್ ಹಾಗೂ ಆಂಧ್ರಪ್ರದೇಶದ ನಂತರದ ಸ್ಥಾನವನ್ನು ರಾಜಸ್ಥಾನ ಪಡೆದುಕೊಂಡಿದೆ. ರಾಜಸ್ಥಾನ ಗ್ರಾಮೀಣ ಪ್ರದೇಶದಲ್ಲಿ 4 ಗಂಟೆಗಳ ವಿದ್ಯುತ್ ಕಡಿತವನ್ನು ಜಾರಿಗೊಳಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರು ತೀವ್ರ ಬೇಗೆಯನ್ನು ಅನುಭವಿಸಬೇಕಾದ ಸ್ಥಿತಿ ಬಂದಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಹಾಗೂ ಕಾಶ್ಮೀರ, ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಮೂಲಕ ಅತಿ ತಾಪಮಾನ ದಾಖಲಾಗಿದೆ. ಏರಿಕೆಯಾಗುತ್ತಿರುವ ಉಷ್ಣಾಂಶ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಭಾಗಗಳಲ್ಲಿ ವಿದ್ಯುತ್‌ ಕಡಿತ ಹಾಗೂ ನೀರಿನ ಕೊರತೆಗೆ ಕಾರಣವಾಗಿವೆ.

ಒಡಿಶಾ ಮೂರನೇ ದಿನವಾದ ಬುಧವಾರ ಕೂಡ ಉರಿ ಬಿಸಿಲಿನಿಂದ ತತ್ತರಿಸಿದೆ. ಒಡಿಶಾದ 24 ಸ್ಥಳಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉಷ್ಣಮಾರುತದ ಕಾರಣಕ್ಕೆ ರಾಜ್ಯದ ಎಲ್ಲ ಶಾಲೆಗಳು ಎಪ್ರಿಲ್ 30ರ ವರೆಗೆ ಮುಚ್ಚಲಿವೆ. ತೀವ್ರ ಧಗೆಯ ಕಾರಣಕ್ಕೆ ನೆರೆಯ ಪಶ್ಚಿಮಬಂಗಾಳ ಶಿಕ್ಷಣ ಸಂಸ್ಥೆಗಳಿಗೆ ಬಹುಬೇಗ ಬೇಸಿಗೆ ರಜೆ ಘೋಷಿಸಿದೆ. ತೀವ್ರ ಬಿಸಿಲಿನ ಕಾರಣಕ್ಕೆ ಮೇ 2ರ ಒಳಗೆ ಶಾಲೆ ಹಾಗೂ ಕಾಲೇಜುಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.


Share: