ಹಳಿಯಾಳ: ನಿರಂತರ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ತಮ ಮನೆ ಗೋಡೆ ಮೇಲೆ ಕುಸಿದು ಬಿದ್ದ ಪರಿಣಾಮ ಸಿಹಿ ನಿದ್ರೆಯಲ್ಲಿದ್ದ ತಾಯಿ, ಮಗಳು ಮೃತಪಟ್ಟ ದುರ್ಘಟನೆ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ರುಕ್ಮಿಣಿ ವಿಠಲ ಮಾಚಕ(37)ಮತ್ತು ಶ್ರೀದೇವಿ ವಿಠಲ ಮಾಚಕ(13) ಮೃತಪಟ್ಟ ದುರ್ದೈವಿಗಳು. ಮನೆ ಗೋಡೆಯ ಕೆಳೆಗೆ ಸಿಕ್ಕು ಉಸಿರುಗಟ್ಟಿ ಜಿವಂತ್ ಸಮಾಧಿಯಾಗಿದ್ದಾರೆ.
ಮೃತರ ಮನೆ ಪಕ್ಕದಲ್ಲಿ ಸಹದೇವ ಹಾಗೂ ಶಾಂತಾರಾಮ, ಜಾದವ್ ಎಂಬವರಿಗೆ ಸೇರಿದ್ದ ಮನೆ ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಜಾದವ್ ಸಹೋದರರ ಮನೆಯ ಗೋಡೆ ಪಕ್ಕದ ಮನೆಯವರ ಗೋಡೆ ಮೇಲೆ ಕುಸಿದ ಪರಿಣಾಮ ತಾಯಿ ಹಾಗೂ ಮಗಳು ಮೃತಪಟ್ಟಿದ್ದಾರೆ.
ಮೃತಪಟ್ಟ ರುಕ್ಕಿಣಿ ಅವರ ಕುಟುಂಬ ಕಡು ಬಡತನದಿಂದ ಕೂಡಿದ್ದು ಮೃತರು ಕೃಷಿ ಕೂಲಿಕಾರರಾಗಿ ಕೆಲಸ ನಿರ್ವಹಿಸುತ್ತಾ ಕುಟುಂಬದ ಹೊಣೆ ಹೊತ್ತಿದ್ದರು.
ಮಗಳು ಶ್ರೀದೇವಿ ತಂದೆ, ತಾಯಿ, ಅಜ್ಜಿ, ಹಾಗೂ ಇಬ್ಬರೂ ಸಹೋದರರ ಪ್ರೀತಿಗೆ ಪಾತ್ರಳಾಗಿದ್ದಳು. ಗ್ರಾಮದಲ್ಲಿರುವ ಭೇಟಿ ಸರಕಾರಿ ಪಬ್ಲಿಕ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ರುಕ್ಕಿಣಿ ಪತಿ ವಿಠಲ್ ಮಾಚಕ ಕೃಷಿ ಹಾಗೂ ಕೂಲಿ ಕೆಲಸ ಮಾಡುತ್ತಾ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ ಗಾಯಕವಾಡ, ಸಿಪಿಐ ರಂಗನಾಥ್ ನೀಲಮ್ಮನವರ, ಪಿಎಸ್ಐ ಶಿವಾನಂದ ನಾವದಗಿ, ಉಮಾಬಸರಕೊಡ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಬೇಟೆ ನೀಡಿ ಪರಿಶೀಲಿಸಿದ್ದಾರೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.