ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಲವು ವಿಶೇಷತೆಗಳ ಜಾತ್ರೆ ಅದುವೇ ಭಟ್ಕಳದ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಜಾತ್ರೆ!

ಹಲವು ವಿಶೇಷತೆಗಳ ಜಾತ್ರೆ ಅದುವೇ ಭಟ್ಕಳದ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ ಜಾತ್ರೆ!

Tue, 17 Jan 2023 07:03:22  Office Staff   so news

ಭಟ್ಕಳ: ಉತ್ತರ ಕನ್ನಡ ಜಿಲ್ಲಾ ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಸುಪ್ರಸಿದ್ಧ ಶೇಡಬರಿ ಜಟಕಾ ಮಹಾಸತಿ ದೇವಿಯ ಜಾತ್ರೆಗೆ ಗಡಿ ದೇವರ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಶೇಡಿ ಎಂದರೆ ಮಣ್ಣಿನಿಂದ ಕೂಡಿರುವುದು. ಬರಿ ಎಂದರೆ ಇಳಿಜಾರು ಪ್ರದೇಶ. ಈ ಪ್ರದೇಶದಲ್ಲಿ ಪ್ರತಿಷ್ಠಾಪನೆಗೊಂಡ ದೇವಿಗೆ ಶೇಡಬರಿ ಮಹಾಸತಿ ದೇವಿ ಎಂದು ಕರೆಯುತ್ತಾರೆ. 
ಜಾತ್ರೆಯ ಮೊದಲ ದಿವಸ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ, ಕಾಣಿಕೆ ಹಾಗೂ ಪೂಜೆಗಳನ್ನು ಸಲ್ಲಿಸಿದ್ದಾರೆ. ಶೇಡಿಮರ ಏರುವ ಹರಕೆ ಹೊತ್ತವರು ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದ ಎದುರಿನಲ್ಲಿ ಶೃಂಗರಿಸಿದ್ದ ಶೇಡಿಮರದಲ್ಲಿ ಕುಳಿತು ಮೂರು ಸುತ್ತು ತಿರುಗಿದ ಬಳಿಕ ಶೇಡಿ ಮರದ ಮೇಲೆ ಕುಳಿತು ಅವರು ತಾವು ತಂದಿದ್ದ ಸಿಂಗಾರ ಹೂವು, ಬಾಳೆ ಹಣ್ಣನ್ನು ಕೆಳಗಡೆಯಿರುವ ಭಕ್ತರ ಮೇಲೆ ಎಸೆಯುವುದು ವಾಡಿಕೆ. 
ಮಕ್ಕಳಾಗದವರು, ಕಷ್ಟ ತೀರಿಸುವಂತೆ ಹರಕೆ ಹೊತ್ತ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ತಕ್ಷಣ ಶೇಡಬರಿ ಮರ ಏರಿ, ಒಂದು ಸುತ್ತು ತಿರುಗಿಸಿ ಹರಕೆ ಒಪ್ಪಿಸುವುದು ವಾಡಿಕೆ. ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ತಮ್ಮ ಸೇವೆ ಅರ್ಪಿಸಿ ಕೃತಾರ್ಥರಾದರು.
ಈ ದೇವಸ್ಥಾನಕ್ಕೆ 100 ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಜಾತ್ರೆಯ 7 ದಿನಗಳ ಮುನ್ನವೇ ದೇವಸ್ಥಾನದ ಸುತ್ತಲಿನ ನೂರಕ್ಕೂ ಹೆಚ್ಚು ಗಡಿ ದೇವರುಗಳಿಗೆ ಚರು ಹಾಕಿ ಸಂತುಷ್ಠಗೊಳಿಸಿ ಜಾತ್ರೆ ಆರಂಭಿಸುವುದು ವಾಡಿಕೆ. ಇದರಂತೆ 7 ದಿನಗಳ ಹಿಂದೆಯೇ ಈ ವಿಧಿವಿಧಾನಗಳನ್ನು ಶೇಡಬರಿ ಆಡಳಿತ ಮಂಡಳಿ ಅವರು ಪೂರೈಸಿ ಜಾತ್ರೆಗೆ ಅಣಿಗೊಳಿಸಲಾಗಿದೆ.


Share: