ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ಗುರುವಾರದ ಅನಿಲ ಸೋರಿಕೆ ನಿಯಂತ್ರಣಕ್ಕೆ - ನಿಟ್ಟುಸಿರು ಬಿಟ್ಟ ಜನತೆ

ಬಂಟ್ವಾಳ: ಗುರುವಾರದ ಅನಿಲ ಸೋರಿಕೆ ನಿಯಂತ್ರಣಕ್ಕೆ - ನಿಟ್ಟುಸಿರು ಬಿಟ್ಟ ಜನತೆ

Sat, 27 Feb 2010 03:30:00  Office Staff   S.O. News Service

ಬಂಟ್ವಾಳ, ಫೆಬ್ರವರಿ 27: ಅಂತೂ ಇಂತೂ ಮಿತ್ತೂರು ಸುತ್ತಮುತ್ತಲಿನ ಜನತೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಗುರುವಾರ ಉಂಟಾಗಿದ್ದ ಭಾರೀ ಅನಿಲ ಸೋರಿಕೆಯಿಂದ ಜೀವ ಭಯದಿಂದಲೇ ಕಗ್ಗತ್ತಲಿನಲ್ಲಿ ರಾತ್ರಿ ಕಳೆದ ಮಿತ್ತೂರು ಆಸುಪಾಸಿನ ಜನ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದಿರಲಿ ಎಂದು ಮೊರೆಯಿಡುತ್ತಿದ್ದಾರೆ.

 

 

ಗುರುವಾರ ಸಂಜೆ ಮಿತ್ತೂರಿನ ಏಮಾಜೆಯಲ್ಲಿರುವ ಕೊಂಕಣ್ ಗ್ಯಾಸ್ ಫಿಲ್ಲಿಂಗ್ ಘಟಕದಲ್ಲಿ ಏಕಾ‌ಏಕಿ ಗ್ಯಾಸ್ ಸೋರಿಕೆ ಉಂಟಾಗಿದ್ದು ತಕ್ಷಣವೇ ಜಾಗೃತರಾದ ಅಲ್ಲಿನ ಸಿಬ್ಬಂದಿಗಳು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದರು ಹಾಗೂ ಅಪಾಯದ ಸೂಚನೆಯನ್ನು ಸೈರನ್ ಮೊಳಗಿಸುವ ಮೂಲಕ ನೀಡಿದ್ರು . ಅದಾದ ಕೆಲವೇ ಸಮಯದಲ್ಲಿ ಸಾಲು ಸಾಲಾಗಿ ಬಂದ ಅಗ್ನಿ ಶಾಮಕ ದಳದ ವಾಹನಗಳು ಸೋರಿಕೆಯಾಗುತ್ತಿರುವ ಗ್ಯಾಸ ಮೇಲೆ ನೀರು ಹಾಯಿಸುವ ಮೂಲಕ ಗ್ಯಾಸ್ ವಾತಾವರಣವನ್ನು ಸೇರುವುದನ್ನು ತಡೆಹಿಡಿಯುವ ಕಾರ್ಯ ನಡೆಸುತ್ತಿದ್ದರು .

ಸುಳ್ಯ,ಪುತ್ತೂರು ಪಾಂಡೆಶ್ವರ,ಕದ್ರಿ.ಕಾರ್ಕಳ,ಬೆಳ್ತಂಗಡಿ, ಮೂಡಬಿದ್ರೆಗಳಿಂದ ಬಂದ ೧೨ ಅಗ್ನಿ ಶಾಮಕ ದಳದ ಸುಮಾರು ೭೦ ಸಿಬ್ಬಂದಿಗಳು ಮಧ್ಯರಾತ್ರಿ ೧೨ ಗಂಟೆಯವರೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯಾನ್ನು ತಿಳಿಗೊಳಿಸಿದ್ದಾರೆ. ಇತ್ತ ಅಗ್ನಿ ಶಾಮಕದಳದ ಕಾರ್ಯಾಚರಣೆ ಭರದಿಂದ ನಡೆಯುತ್ತಿರುವ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಮಿತ್ತೂರು,ಪುತ್ತೂರು ಸುತ್ತಮುತ್ತ ವಿದ್ಯುತ್ ಕಡಿತಗೊಳಿಸಲಾಗಿತ್ತು. ಮನೆ,ಅಂಗಡಿ ಹೋಟೇಲ್ ಗಳಲ್ಲಿ ಯಾವುದೇ ರೀತಿಯ ಬೆಂಕಿ ಉರಿಸದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿತ್ತು.

 

ಕಗ್ಗತ್ತಲಲ್ಲೇ ರಾತ್ರಿ ಕಳೆದರು...

 

 

27-bnt2.jpg 

 

ಸೋರಿಕೆಯಾದ ಗ್ಯಾಸ್ ಮಿತ್ತೂರು ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬೆಂಕಿ ಉರಿಸದಂತೆ ಎಚ್ಚರಿಕೆ ನೀಡಲಾಗಿತ್ತು. ಇದರಿಂದಾಗಿ ಸಂಜೆ ೫ ಗಂಟೆಯ ಬಳಿಕ ಮಿತ್ತೂರು ಸುತ್ತಮುತ್ತಲಿನ ಪರಿಸರದ ಯಾವುದೇ ಮನೆಗಳಲ್ಲಿ ಒಲೆ ಉರಿಯಲಿಲ್ಲ. ವಿದ್ಯುತ್ ಕಡಿತಗೊಳಿಸಿದ್ದರಿಂದ ಮನೆಗಳು ಕಗ್ಗತ್ತಲ್ಲಿದು,ಕ್ಯಾಂಡಲ್ ಉರಿಸಿದರೂ ಭಾರೀ ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿತ್ತು. ರಾತ್ರಿ ಊಟಕ್ಕೆ ಸಿದ್ದತೆ ಮಾಡಿದ್ದವರು ಮನೆಯಂಗಳದ ಚಂದ್ರನ ಬೆಳಕಿನಲ್ಲಿ ಊಟಮಾಡಿದರೆ ಹಲವು ಮನೆಗಳಲ್ಲಿ ಉಪವಾಸಕ್ಕೇ ಶರಣು ಎಂದಿದ್ದರು. ಚಿಕ್ಕಪುಟ್ಟ ಮಕ್ಕಳಿದ್ದ ಮನೆಗಳಲ್ಲಿ ಹೆತ್ತವರು ಪಟ್ಟ ಪಾಡು ಹೇಳ ತೀರದು..ಮಿತ್ತೂರಿನ ತಳ್ಳುಗಾಡಿಗಳೆಲ್ಲಾ ನಿನ್ನೆ ರಾತ್ರಿ ಬೇಗನೇ ಮುಚ್ಚಿಕೊಂಡಿದ್ದರೆ, ಇನ್ನೂ ಕೆಲವು ಅಪಾಯದ ಹೆದರಿಕೆಯಿಂದ ವ್ಯವಹಾರ ಆರಂಭಿಸಲೇ ಇಲ್ಲ. ಘಟಕಕ್ಕೆ ತೀರಾ ಹತ್ತಿರದ ಮನೆ ಮಾಲಕ ವಾಮನ ನಾಯ್ಕರು ನಿನ್ನೆಯ ರಾತ್ರಿಯನ್ನು ಬಣ್ಣಿಸಿದ್ದು ಹೀಗೆ.. ಇದೇ ಮೊದಲ ಬಾರಿಗೆ ಇಂತಹ ಅನುಭವವಾಗಿದೆ. ಗ್ಯಾಸ ಸೋರಿಕೆಯಿಂದಾಗಿ ಕಣ್ಣು ಉರಿ ಬಂದಿತ್ತು.. ಇಂತಹ ಘಟನೆ ಮತ್ತೆ ಆಗುವುದು ಬೇಡ ಸಂಬಂಧಿಸಿದವರು ಸೂಕ್ತ ಭದ್ರತೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಅವರು.

 

 

ಯಾರೂ ಕೂಡ ಕನಸು ಮನಸಿನಲ್ಲೆ ನೆನೆಯದ ಘಟನೆಯೊಂದು ನಿನ್ನೆ ಮಿತ್ತೂರಿನಲ್ಲಿ ನಡೆದು ಹೋಗಿದೆ. ಊರವರ ಸಹಕಾರ, ಅಗ್ನಿ ಶಾಮಕದಳದ ಮಿಂಚಿನ ಕಾರ್ಯಾಚರಣೆ ಭಾರೀ ದುರಂತವನ್ನು ತಪ್ಪಿಸಿದೆ. ಗಾಳಿ ಮೂಲಕ ವ್ಯಾಪಕವಾಗಿ ಹರಡುತ್ತಿದ್ದ ಅನಿಲದ ದುರ್ವಾಸನೆ ಮಾಣಿ, ನೇರಳ ಕಟ್ಟೆ, ಮಿತ್ತೂರು,ಇಡ್ಕಿದು,ಅಳಕೆ ಮಜಲು ವರೆಗೆ ವ್ಯಾಪಿಸಿ ಭಾರೀ ಅಪಾಯ ಉಂಟಾಗುವ ಭೀತಿ ತಂದಿತ್ತು. ಆದರೆ ಸುಮಾರು ಏಳು ಗಂಟೆಗಳ ಕಾಲ ನಿರಂತರವಾಗಿ ನಡೆದ ಕಾರ್ಯಾಚರಣೆ ನಾಗರೀಕರಿಗೆ ನೆಮ್ಮದಿ ತಂದಿದೆ.

 

 

 27-bnt3.jpg

 

ಸುರಕ್ಷತಾ ಕ್ರಮ ಪಾಲಿಸದೇ ಇದ್ದುದು ಘಟನೆಗೆ ಕಾರಣ..

 

ಕಳೆದ ಹದಿಮೂರು ವರ್ಷಗಳಿಂದ ಈ ಘಟಕ ಏಮಾಜೆಯಲ್ಲಿ ಕಾರ್ಯಚರಿಸುತ್ತಿದ್ದರೂ, ಸೂಕ್ತ ಸುರಕ್ಷತಾ ಕ್ರಮವನ್ನು ಪಾಲಿಸದೇ ನಿರ್ಲಕ್ಷ ವಹಿಸಿರುವುದೇ ನಿನ್ನೆಯ ಅನಿಲ ಸೋರಿಕೆ ಗೆ ಕಾರಣ ಎಂದು ಹೇಳಲಾಗಿದೆ. ನಿನ್ನೆ ಸ್ಥಳದಲ್ಲಿ ತಡರಾತ್ರಿ ವರೆಗೂ ಸ್ಥಳದಲ್ಲಿ ಮೊಕ್ಕಾಂ ಹೂಡಿ, ಪರಿಶೀಲನೆ ನಡೆಸಿರುವ ಬಂಟ್ವಾಳ ತಾಲೂಕು ದಂಡಾಧಿಕಾರಿ ಸಿ.ಎನ್.ಮಂಜುನಾಥ್ ರವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೆಖಿಸಿದ್ದಾರೆ. ಸುಮಾರು ೧೯ ಮೆಟ್ರಿಕ್ ಟನ್ ಅನಿಲ ಸೋರಿಕೆಯಾಗಿದ್ದು, ಸುರಕ್ಷಾ ಕ್ರಮ ಕೈಗೊಂಡಿದ್ದರೆ ಆಗಿರುವ ನಷ್ಟವನ್ನು ತಡೆಯಬಹುದಿತ್ತ, ಎಂದು ತಿಳಿಸಿರುವ ಅವರು,ಮುಂದೆ ಅಧಿಕೃತ ಅನುಮತಿ ಸಿಗುವ ತನಕ ಸದ್ರಿ ಘಟಕದಲ್ಲಿ ಕಾರ್ಯಾರಂಭ ಮಾಡದಂತೆ ಮೌಖಿಕ ಸೂಚನೆ ನೀಡಲಾಗಿದೆಯೆಂದು ಹೇಳಿದ್ದಾರೆ.

 

೧೫ಲಕ್ಷ ರೂ ನಷ್ಟ..

 

ನಿನ್ನೆಯ ಘಟನೆಯಲ್ಲಿ ಕೊಂಕಣ ಗ್ಯಾಸ ಘಟಕಕ್ಕೆ ಸುಮಾರು ೧೫ ಲಕ್ಞಷರೂ ನಷ್ಟ ಸಂಭವಿಸಿದೆಯೆಂದು ಅದರ ಮಾಲಕ ಉದಯ ಭಟ್ ಹೇಳಿದ್ದಾರೆ. ಸುಮಾರು ೨೩ ಮೆಟ್ರಿಕ್ ಟನ್ ಅನಿಲ ಸೋರಿಕೆಯಾಗಿದ್ದು, ಅಗ್ನಿಶಾಮಕದಳ ಹಾಗೂ ನಾಗರೀಕರ ನೆರವಿನಿಂದ ಭಾರೀ ಅನಾಹುತ ತಪ್ಪಿದೆ ಎಂದು ತಿಳಿಸಿದ್ದಾರೆ.

 

ಈಗಾಗಲೇ ಸಾಕಷ್ಟು ಅಡುಗೆ ಅನಿಲದ ಸಿಲಿಂಡರ್‍ಗಳು ದಾಸ್ತಾನು ಇದ್ದು,ಗ್ರಾಹಕರಿಗೆ ಕೊರತೆಯಾಗದ ರೀತಿಯಲ್ಲಿ ಪೂರೈಕೆ ಮಾಡಲಾಗುವುದು, ಮೇಲಧಿಕಾರಿಗಳ ಸೂಚನೆಯಂತೆ ಶುಕ್ರವಾರ ಘಟಕದಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದ್ದು, ಅವರ ಸೂಚನೆಯಂತೆಯೇ ಮುಂದಿನ ದಿನಗಳಲ್ಲಿ ಕಾರ್ಯರಂಭಿಸಲಾಗುವುದು ಎಂದವರು ತಿಳಿಸಿದ್ದಾರೆ.


 

 


Share: