ಬಳ್ಳಾರಿ : ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪೋಷಣಾ ಮಾಹೆ ಅಭಿಯಾನದ ಅಂಗವಾಗಿ ಪೋಷಣಾ ಅಭಿಯಾನ, ವೃಕ್ಷಾರೋಪಣ ಮತ್ತು ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ರಮೇಶ್ ಬಿ.ಕೆ. ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಗೃಹವಿಜ್ಞಾನಿ ಡಾ.ಶಿಲ್ಪಾ ಅವರು ಪೋಷಣಾ ಅಭಿಯಾನದ ಧ್ಯೇಯೋಧ್ಯೇಶಗಳನ್ನು ವಿವರಿಸಿದರು.ದೇಶದ ಅಭಿವೃದ್ಧಿಗೆ ಪೋಷಣೆ ಹೇಗೆ ಪಾತ್ರವಾಗಬಲ್ಲದೆಂದು ತಿಳಿಸಿಕೊಟ್ಟರು.
ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಅವರು ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮಾಡಲು ಹಲವಾರು ಯೋಜನೆಗಳು ಕೃಷಿ ಇಲಾಖೆಯಿಂದ ಲಭ್ಯವಿರುತ್ತವೆ. ಇವುಗಳ ಸದುಪಯೋಗಪಡೆದುಕೊಳ್ಳಲು ಸ್ತೀಶಕ್ತಿ ಸಂಘಗಳು ಮುಂದಾಗಬೇಕು ಎಂದು ಹೇಳಿದರು.
ಇಪ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ಸಿದ್ದಾರೂಢ ಪಾಟೀಲ್ ಅವರು ಆರೋಗ್ಯದಲ್ಲಿ ತರಕಾರಿಗಳ ಉಪಯುಕ್ತತೆ ಬಗ್ಗೆ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಸುಮಾರು 110 ಜನ ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.
ಪರಮದೇವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರಮಾದೇವಿ, ರೂಪನಗುಡಿ ಕೃಷಿ ಅಧಿಕಾರಿ ರೇಖಾ, ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರವಿ.ಎಸ್, ಆತ್ಮ ಯೋಜನೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೂಡ್ಲಿಗಿ ತಾಲ್ಲೂಕಿನ ರಾಮಸಾಗರಹಟ್ಟಿಯಲ್ಲಿ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.