ಧಾರವಾಡ : ಜಿಲ್ಲೆಯಲ್ಲಿ ಸಪ್ಟೆಂಬರ್ 12 ರಿಂದ 29, 2022 ರವರೆಗೆ ಕುಷ್ಠರೋಗ ಪತ್ತೆಗಾಗಿ ರಾಷ್ಟ್ರೀಯ ಕುಷ್ಠರೋಗ ಅಭಿಯಾನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.
ಅವರು ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಸಂಘ ಹಾಗೂ ಆರೋಗ್ಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.
ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ 21,37,184 ಜನಸಂಖ್ಯೆಯನ್ನು ಅಭಿಯಾನದಲ್ಲಿ ಒಳಪಡಿಸಲಾಗುವುದು. ಅಭಿಯಾನದಲ್ಲಿ ಜಿಲ್ಲೆಯ 4,41,867 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ, ಕುಷ್ಠರೋಗ ಪತ್ತೆಗೆ ಕ್ರಮವಹಿಸಲಿದ್ದಾರೆ.
ಅಭಿಯಾನ ಯಶಸ್ವಿಗಾಗಿ ಆರೋಗ್ಯ ಕಾರ್ಯಕರ್ತರ 1781 ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ 1014 ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಆ.25ರಿಂದ ಸೆ.8 ರವರೆಗೆ ನೇತ್ರದಾನ ಪಾಕ್ಷಿಕ: ನೇತ್ರದಾನ ಮಹತ್ವ ಸಾರುವ 37ನೇ ನೇತ್ರದಾನ ಪಾಕ್ಷಿಕ ದಿನಾಚರಣೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನೇತ್ರದಾನ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗುವುದು.
ನಾನು ಸಹ ನೇತ್ರದಾನಕ್ಕೆ ಸಿದ್ಧನಿದ್ದೇನೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಸ್ವತಃ ನೇತ್ರದಾನ ನೋಂದಣಿ ಅರ್ಜಿ ಭರ್ತಿ ಮಾಡಿ, ತಮ್ಮ ಒಪ್ಪಿಗೆ ಪತ್ರವನ್ನು ಜಿಲ್ಲಾ ಅಂಧತ್ವ ನಿವಾರಣಾ ಘಟಕದ ಅಧಿಕಾರಿ ಡಾ.ಎಸ್.ಬಿ. ಕಳಸೂರಮಠ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾ ಹಾಗೂ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳಿಗೂ ನೇತ್ರದಾನದ ಶ್ರೇಷ್ಠತೆ ಕುರಿತು ಮನವರಿಕೆ ಮಾಡಲಾಗುವುದು. ನೇತ್ರದಾನ ಶ್ರೇಷ್ಠ ದಾನವಾಗಿದ್ದು, ಸಾರ್ವಜನಿಕರಿಗೆ ಮಹತ್ವ ತಿಳಿಸಲು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಎರಡು ನೇತ್ರ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಎಪ್ರಿಲ್ ಮಾಹೆಯಿಂದ ಜುಲೈವರೆಗೆ ನೇತ್ರದಾನದಲ್ಲಿ ಒಟ್ಟು 164 ಕಾರ್ನಿಯಾಗಳು ಸಂಗ್ರಹವಾಗಿದ್ದು, ಬಳಕೆ ಆಗಿವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಸಹ ತಮ್ಮ ನೇತ್ರದಾನ ಮಾಡಲು ನೋಂದಣಿ ಮಾಡಿ ಒಪ್ಪಿಗೆ ಪತ್ರವನ್ನು ಜಿಲ್ಲಾ ಆರ್ಸಿಎಚ್ಓ ಡಾ.ಎಸ್.ಎಂ.ಹೊನಕೇರಿ ಅವರಿಗೆ ನೀಡಿದರು.
ಲಸಿಕಾರಣ: 18 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟವರಿಗೆ ನೀಡುವ ಕೋವಿಡ್ ರೋಗನಿರೋಧಕ ಲಸಿಕಾಕರಣವು ಉತ್ತಮ ಪ್ರಗತಿಯಾಗಿದ್ದು, ಶೇ.104.49 ರಷ್ಟು ಮೊದಲ ಡೊಸ್ ಹಾಗೂ ಶೇ.105.38 ರಷ್ಟು ಎರಡನೇಯ ಡೊಸ್ ಲಸಿಕೆ ನೀಡಲಾಗಿದೆ.
12 ರಿಂದ 14 ವರ್ಷದೊಳಗಿನ 60,020 ಮಕ್ಕಳಿಗೆ ಲಸಿಕಾರಣದ ನೀಡುವ ಗುರಿ ಹೊಂದಲಾಗಿತ್ತು. ಅದರಂತೆ 72,914 ಮಕ್ಕಳಿಗೆ (ಶೇ.121.48) ಮೊದಲ ಡೊಸ್ ಹಾಗೂ 55,152 ಮಕ್ಕಳಿಗೆ ( ಶೇ.91.89) ಎರಡನೆಯ ಡೊಸ್ ನೀಡಲಾಗಿದೆ.
15 ರಿಂದ 17 ವರ್ಷದೊಳಗಿನ 95,774 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಅದರಂತೆ ಮೊದಲ ಡೋಸ್ 83,863 (ಶೇ.87.56) ಮಕ್ಕಳಿಗೆ ಹಾಗೂ ಎರಡನೇ ಡೋಸ್ 77,440(ಶೇ.80.86) ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ 18 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟವರಿಗೆ ನೀಡುವ ಕೋವಿಡ್ ಮುಂಜಾಗ್ರತಾ ಲಸಿಕೆಯನ್ನು 13,51,993 ಜನರಿಗೆ ನೀಡುವ ಗುರಿ ಹೊಂದಲಾಗಿದೆ. ಆಗಸ್ಟ್ 24 ರವೆರೆಗೆ 2,17,154 ಜನರಿಗೆ ಮುಂಜಾಗ್ರತಾ ಲಸಿಕೆ ನೀಡಲಾಗಿದ್ದು, ಶೇ.16.06 ರಷ್ಟು ಪ್ರಗತಿ ಸಾಧಿಸಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂಜಾಗ್ರತಾ ಲಸಿಕೆಯನ್ನು ಪಡೆಯಬೇಕು. ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಮುಂಜಾಗ್ರತಾ ಲಸಿಕೆ ಹೊಂದುವುದು ಆರೋಗ್ಯ ದೃಷ್ಟಿಯಿಂದ ಅತ್ಯಂತ ಜರೂರಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಮ್ಮಿಕೊಳ್ಳುವ ಎಲ್ಲ ರೀತಿಯ ಆರೋಗ್ಯ ಅಭಿಯಾನದಲ್ಲಿ ಮಾಡುವ ಸಮೀಕ್ಷೆಗಳನ್ನು ಪೂರ್ಣಪ್ರಮಾಣದಲ್ಲಿ ಮಾಡಬೇಕು. ಪ್ರಾಥಮಿಕ ಆರೋಗ್ಯಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸಮೀಕ್ಷೆ ವರದಿ, ಕ್ರಿಯಾಯೋಜನೆ ಪ್ರತಿ ಲಭ್ಯವಿರಬೇಕು. ಹಿರಿಯ ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ, ಪರಿಶೀಲನೆಗಾಗಿ ವರದಿ ನೀಡಬೇಕು ಎಂದು ಹೇಳಿದರು.
ಮುಂಜಾಗ್ರತಾ ಲಸಿಕಾಕರಣದ ಶಿಬಿರಗಳನ್ನು ಸಾರ್ವಜನಿಕ ಕಾರ್ಯಕ್ರಮಗಳ ಹಾಗೂ ಹೆಚ್ಚು ಜನಸಂದಣಿ ಸೇರುವ ಪ್ರದೇಶಗಳಲ್ಲಿ ಆಯೋಜಿಸಬೇಕು. ಆರೋಗ್ಯ ಸಮೀಕ್ಷೆಗಳಲ್ಲಿ ನಿಖರತೆ ಹಾಗೂ ಸ್ಪಷ್ಟತೆ ಕಾಣಲು ಸಮೀಕ್ಷೆದಾರರಿಗೆ ಅಗತ್ಯ ತರಬೇತಿ ನೀಡಬೇಕೆಂದು ಅವರು ಹೇಳಿದರು.
ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಅವರು ಲಸಿಕಾಕರಣ, ತಾಯಿಮರಣ ಹಾಗೂ ವಿವಿಧ ಯೋಜನೆಗಳ ಕುರಿತು ಸಭೆಯಲ್ಲಿ ವರದಿ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಂದ್ರ ಕಾಪಸೆ, ಮಕ್ಕಳ ತಜ್ಞ ಡಾ.ಸಿ.ಆರ್.ನಾಡಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಸ್.ಬಿ.ಕಳಸೂರಮಠ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಯ್ಯನಗೌಡ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ.ನಿಂಬಣ್ಣವರ, ಧಾರವಾಡ ತಾಲೂಕಾ ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ, ಕಲಘಟಗಿ ತಾಲೂಕಾ ವೈದ್ಯಾಧಿಕಾರಿ ಡಾ.ಎನ್.ಬಿ ಕಾಲವಾಡ, ಕುಂದಗೋಳ ತಾಲೂಕಾ ವೈದ್ಯಾಧಿಕಾರಿ ಡಾ. ಬಾಗೀರಥಿ, ಡಾ. ರೂಪಾ ಕಿನಗಿ, ಡಾ.ಎಸ್.ಜಿ ಕುಪ್ಪವಾಡ, ಡಾ.ಎ.ಬಿ. ಸಾಲಿ, ಹಾಗೂ ವಿವಿಧ ತಾಲೂಕಾ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ಎಸ್.ಡಿ.ಎಂ.ಆಸ್ಪತ್ರೆಯ ಡಾ.ವಿವೇಕ ಹೊಸಕೇರಿ, ಡಾ.ಕಿರಣ ನಾಯಕ್ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಮತ್ತು ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.