ಚೆನ್ನೈ, ಅ. 29:ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ವಿರುದ್ಧ ಇದೀಗ ತಮಿಳುನಾಡಿನ ಕಾವೇರಿರಾಜಪುರಂ ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನಕರನ್ ಅವರು ಕಾವೇರಿರಾಜಪುರಂನಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು, ಬೇಲಿ ಹಾಕಿಕೊಂಡಿದ್ದಾರೆ ಎಂದು ನ್ಯಾಯಾಂಗ ಹೊಣೆಗಾರಿಕೆ ಎಂಬ ವಕೀಲರ ವೇದಿಕೆ ಆರೋಪಿಸಿತ್ತು. ದಿನಕರನ್ ೫೦೦ ಎಕರೆಗೂ ಅಧಿಕ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದು ನಿಜ ಎಂದು ತಿರುವಳ್ಳೂರು ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್ಗೆ ವರದಿ ನೀಡಿದ್ದರು.
ಈ ಬೆಳವಣಿಗೆಗಳ ನಂತರ ಒತ್ತುವರಿ ಜಮೀನಿನ ಬೇಲಿ ಕಿತ್ತೆಸೆಯಲಾಗಿದೆ. ಈ ಮೂಲಕ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಇದ್ದ ಸಾಕ್ಷ್ಯವನ್ನೇ ನಾಶ ಮಾಡಲಾಗಿದೆ ಎಂಬುದು ಗ್ರಾಮಸ್ಥರ ದೂರು.
ತಿರುವಳ್ಳೂರು ಜಿಲ್ಲೆಯ ಕನಕಮ ಚತಿರಂ ಪೊಲೀಸ್ ಠಾಣೆಯಲ್ಲಿ ಕಾವೇರಿರಾಜಪುರಂನ ೬೬ ಗ್ರಾಮಸ್ಥರು ಈ ದೂರು ಸಲ್ಲಿಸಿದ್ದಾರೆ. ಸಮುದಾಯ ಸೇವೆ ರಿಜಿಸ್ಟರ್ (ರಾಜಿ ಸಂಧಾನ ಏರ್ಪಡಿಸಿ ಇತ್ಯರ್ಥಪಡಿಸುವ)ನಲ್ಲಿ ಇದನ್ನು ಪೊಲೀಸರು ದಾಖಲಿಸಿದ್ದಾರೆ ಎಂದು ದೂರುದಾರರಲ್ಲಿ ಒಬ್ಬರಾದ ವಿ.ಎಂ. ರಾಮನ್ ಎಂಬುವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ನಡುವೆ, ದೂರು ದಾಖಲಿಸಿರುವ ಗ್ರಾಮಸ್ಥರಿಗೆ ರಶೀದಿ ನೀಡಲಾಗಿದೆ. ದೂರಿನನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೌಜನ್ಯ: ಕನ್ನಡಪ್ರಭ