ಬೆಂಗಳೂರು, ಜನವರಿ 9:ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಮೊಟಮ್ಮ ಮೇಲ್ಮನೆ ಪ್ರತಿಪಕ್ಷದ ನಾಯಕಿಯಾಗಿ ನೇಮಕವಾಗಿದ್ದಾರೆ.
ಈ ವರೆವಿಗೆ ಪ್ರತಿಪಕ್ಷದ ನಾಯಕರಾಗಿದ್ದ ವಿ.ಎಸ್. ಉಗ್ರಪ್ಪ, ಮೇಲ್ಮನೆ ಸದಸ್ಯತ್ವದಿಂದ ನಿವೃತ್ತರಾದ ನಂತರ ತೆರವಾಗಿದ್ದ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಮೋಟಮ್ಮ ಅವರನ್ನು ಕಾಂಗ್ರೆಸ್ ವರಿಷ್ಠರು ನೇಮಿಸಿದ್ದಾರೆ.
ಈ ತಿಂಗಳ 20 ರವರೆಗೆ ಮಾತ್ರ ತಾತ್ಕಾಲಿಕವಾಗಿ ವಿರೋಧಪಕ್ಷದ ನಾಯಕಿಯಾಗಿ ಮೋಟಮ್ಮ ಕಾರ್ಯನಿರ್ವಹಸಲಿದ್ದು, ಆನಂತರ ವಿರೋಧ ಪಕ್ಷದ ನಾಯಕನ ಸ್ಥಾನ ಜೆಡಿಎಸ್ ಪಾಲಾಗಲಿದೆ.
ಮೇಲ್ಮನೆಯಲ್ಲಿ ಜನವರಿ ೨೦ರವರೆಗೆ ಕಾಂಗ್ರೆಸ್ ಸದಸ್ಯರ ಸಂಖ್ಯೆ ೧೯ ಇದ್ದು ಆನಂತರ ನಾಮಕರಣಗೊಂಡಿದ್ದ ಪ್ರಕಾಶ್ ರಾಥೋಡ್, ಚಂದ್ರಶೇಖರ ಕಂಬಾರ ಹಾಗೂ ಮಲ್ಲಾಜಮ್ಮ ಅವರು ನಿವೃತ್ತಿಯಾಗಲಿದ್ದಾರೆ. ನಂತರ ಕಾಂಗ್ರೆಸ್ ಸದಸ್ಯರ ಸಂಖ್ಯೆ ೧೬ಕ್ಕೆ ಕುಸಿಯಲಿದೆ.
ಜನವರಿ ೨೦ರ ನಂತರ ಜೆಡಿಎಸ್ ಸದಸ್ಯರ ಸಂಖ್ಯೆ ೧೭ ಇದ್ದು, ಅದಕ್ಕಿಂತ ೧ ಸ್ಥಾನ ಕಡಿಮೆಯಾಗಲಿದೆ. ಸಭಾಪತಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರೂ ಕೂಡ ಅದು ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಕಾಂಗ್ರೆಸ್ ಅಧಿಕೃತವಾಗಿ ವಿಪಕ್ಷ ನಾಯಕನ ಸ್ಥಾನವನ್ನು ಕಳೆದು ಕೊಳ್ಳಲಿದೆ.
ಮೇಲ್ಮನೆಯಲ್ಲಿ ಹಾಲಿ ಜೆಡಿಎಸ್ ಪಕ್ಷದ ನಾಯಕರಾಗಿರುವ ಎಂ.ಸಿ. ನಾಣಯ್ಯ ಅವರು ಜ. ೨೦ ನಂತರ ವಿರೋಧ ಪಕ್ಷದ ನಾಯಕರಾಗುವುದು ಬಹುತೇಕ ಖಚಿತಗೊಂಡಿದೆ.
ವಿರೋಧ ಪಕ್ಷದ ನಾಯಕಿಯ ಸ್ಥಾನಕ್ಕೆ ತಮ್ಮನ್ನು ನೇಮಿಸಿರುವುದಕ್ಕೆ ಮೋಟಮ್ಮ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ, ಶಾಸಕರಾಗಿ, ಸಚಿವರಾಗಿ ಪಕ್ಷಕ್ಕೆ ಸಲ್ಲಿಸಿದ ಸೇವೆ ಅಲ್ಲದೆ, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸ್ವಂದಿಸಿರುವುದನ್ನು ಗುರುತಿಸಿ ಪಕ್ಷದ ವರಿಷ್ಠರು ನೀಡಿರುವ ವಿರೋಧ ಪಕ್ಷದ ನಾಯಕಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಜನ ವಿರೋಧಿನೀತಿಗಳನ್ನು ಬಯಲಿಗೆಳೆದು ಸದನದ ಒಳಗೆ-ಹೊರಗೆ ಜನಪರ ಹೋರಾಟ ನಡೆಸಲಿದ್ದೇನೆ. ಅಧಿಕಾರಿ ಎಷ್ಟು ದಿನ ಇರಲಿದೆ ಎನ್ನುವುದು ಮುಖ್ಯವಲ್ಲ. ಅಧಿಕಾರ ಇರುವಷ್ಟು ದಿನ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಮುಖ್ಯ ಎಂದರು.