ಹಾಯ್..
ಹೇಗಿದ್ದಿ ಅಂತ ನಾನು ಕೇಳುವ ಮುಂಚೆ ನೀನು ‘ಚೆನ್ನಾಗಿದ್ದೇನೆ’ ಅಂತ ಹೇಳುತ್ತೀಯಾ ಅನ್ನುವುದು ನನಗೆ ಗೊತ್ತು. ಅದುವೇ ನೀನು ಸದಾ ಚೆನ್ನಾಗಿದ್ದೀಯಾ ಅನ್ನುವುದನ್ನು ಪ್ರಕಟಪಡಿಸುತ್ತದೆ ಗೆಳತಿ. ನಿನಗೆ ಗೊತ್ತಿರಬಹುದು.ಕನ್ನಡದ ಖ್ಯಾತ ಕಾದಂಬರಿಗಾರ್ತಿ ವೈದೇಹಿಗೆ ಈ ವರ್ಷದ ಕೇಂದ್ರ ಸಾಹಿತ್ಯ ಆಕಾಡಮಿ ಪ್ರಶಸ್ತಿ ಬಂದಿರುವುದು. ಎಷ್ಟು ಸಂತಸದ ಸುದ್ದಿ ಅಲ್ವಾ? ಸುದ್ದಿಗಿಂತ ಇಡಿ ಮಹಿಳಾ ಸಮುದಾಯವೇ ಹೆಮ್ಮೆ ಪಡುವಂತಹ ಸಾಧನೆಯಲ್ಲವೇ? ತನ್ನ ಕ್ರೌಂಚಪಕ್ಷಿ ಕೃತಿಗೆ ಈ ಪ್ರಶಸ್ತಿ ಪಡೆದಿರುವ ಈ ಹಿರಿಯಕ್ಕಳಿಗೆ ನಾವೊಂದು ಸಲಾಂ ಹೊಡೆದು ಗೌರವ ಸೂಚಿಸುವುದಕ್ಕಿಂತ ಇವರ ಕೃತಿಯನ್ನು ಓದುವುದು ನಾವು ಅವರಿಗೆ ಕೊಡುವ ದೊಡ್ಡ ಗೌರವವಾಗಿದೆ ಗೆಳತಿ.
ಅದು ಬಿಡು. ನಿನ್ನಲ್ಲಿ ಹೇಳುವಂತಹ ಚೂರು ಚೂರು ಸಂಗತಿಗಳು ಸಾಕಷ್ಟಿವೆ.ಹೀಗಾಗಿ ನೆನಪಿನಂಗಳದಿಂದ ಇವನ್ನು ಶುಚಿಗೊಳಿಸುತ್ತಾ ಕೆಲವೊಂದು ಚೂರುಗಳನ್ನು ನಿನಗಾಗಿ ನಾನು ಹೆಕ್ಕಿ ಇಟ್ಟಿದ್ದೇನೆ. ನಿನ್ನಲ್ಲಿ ನಾನು ವೈದೇಹಿಯವರ ಕೃತಿಯನ್ನೆಲ್ಲಾವನ್ನು ಓದಿದ್ದೀಯಾ ಅಂತ ಕೇಳುವೇನು ಹೊರತು ಇವರ ಕೃತಿಯನ್ನು ಓದಲೇಬೇಕೆಂದು ಒತ್ತಡ ತರಲ್ಲ. ಕಾರಣ ನಿನಗೆ ಯಾರ ಕೃತಿ ಹೆಚ್ಚು ಸಂತಸ ನೀಡುತ್ತದೆ ಎಂಬುದು ನಿನಗೆ ಮಾತ್ರ ಗೊತ್ತು. ಹಾಗಾಗಿ ನಾವು ಓದುವುದನ್ನು ಇತರರಿಗೋಸ್ಕರ, ಒತ್ತಡದಿಂದ ಓದಬಾರದು.ಯಾಕೆಂದರೆ ಅದು ನಮ್ಮ ಇಷ್ಟಗನುಗುಣವಾಗಿರದ ಕಾರಣದಿಂದ ಆ ಓದು ವ್ಯರ್ಥವಾಗುತ್ತದೆ. ಹಾಗಾಗಿ ನಮ್ಮ ಓದು ನಮ್ಮ ಇಷ್ಟಗನುಗುಣವಾಗಿ ಇರಬೇಕು ಆಲ್ವಾ?
ಅದು ಬಿಡು. ಇತ್ತೀಚೆಗೆ ನಾನೊಂದು ಆಘಾತಕಾರಿ ಸಂಗತಿಯೊಂದನ್ನು ಕೇಳಿದೆ.ಅದೇನೆಂದು ಗೊತ್ತಾ? ಇತ್ತೀಚಿನ ಪತ್ರಿಕೆಗಳಲ್ಲಿನ ಮಹಿಳಾ ವಿಭಾಗಕ್ಕೆ ಬರೆಯುವ ಮಹಿಳಾ ಬರಹಗಾರರು ಕಡಿಮೆಯಾಗಿದ್ದಾರೆಂಬುದು. ಹೆಚ್ಚಾಗಿ ಮಹಿಳಾ ವಿಭಾಗಕ್ಕೆ ಬರಹಗಳ ಕೊರತೆ ಜೊತೆಗೆ ಮಹಿಳೆಯರ ಕಡೆಯಿಂದ ಬರೆಯುವವರು ಕಡಿವೆ ಇದ್ದಾರೆಂದು ಪತ್ರಕರ್ತ ಮಿತ್ರರೊಬ್ಬರು ಸಾಹಿತ್ಯ ಕಮ್ಮಟದಲ್ಲಿ ಹೇಳಿದಾಗ ಯಾಕೋ ಸಪ್ಪೆಯಾಯಿತು. ಕಾರಣ ಮಹಿಳಾ ಜಗತ್ತಿನ ಸುದ್ದಿಯನ್ನು ತಿಳಿಸಲು ಮಹಿಳೆಯರೇ ಇಲ್ಲದಿದ್ದರೆ ಹೇಗೆ? ಅಲ್ವಾ? ನೀವು ಸಾರಾ,ವೈದೇಹಿ, ಕಮಲ ಮುಂತಾದ ಮಹಿಳಾ ಸಾಹಿತಿಗಳು ಇದ್ದಾರೆಂದು ಬರೆಯುವುದನ್ನು ನಿಲ್ಲಿಸಿದರೆ ಮುಂದೆ ಮಹಿಳಾ ಬರಹಗಾರರು ಕಾಣೆಯಾಗುವ ಸಾಧ್ಯತೆ ಇದೆ ಗೆಳತಿ. ಹಾಗಾಗಿ ನೀನು ಸಾಹಿತ್ಯವನ್ನು ಇಷ್ಟಪಡು. ಒಂದಿಷ್ಟು ಹೊತ್ತನ್ನು ಬರೆಯಲು ಮೀಸಲಿಡು. ಹೆಚ್ಚಿನವರಿಗೆ ನಮ್ಮಲ್ಲಿ ಬರೆಯುವಂತಹ ಶಕ್ತಿಯಿದೆಯೆಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ ನಾವು ವಿವಿಧ ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಮಾತ್ರ ನಾವು ನಮ್ಮೊಳಗಿನ ಪ್ರತಿಭಾ ಶಕ್ತಿಯನ್ನು ಕಂಡುಹಿಡಿಯಬಹುದು ಗೆಳತಿ ಯೋಚಿಸು.
ಸಾಹಿತಿ ಹುಟ್ಟಿನಿಂದಲೇ ಹುಟ್ಟಿ ಬಂದದ್ದಲ್ಲ.ಕಾಲದ ಜೊತೆಗೆ ಬೆಳೆಯುತ್ತಾ ತಮ್ಮನ್ನು ತಾವು ಬೆಳೆದುಕೊಂಡು ಹುಟ್ಟಿ ಬರುವಂಥದ್ದು. ತಮ್ಮ ಪ್ರತಿಭೆಯ ವಿಕಸನಕ್ಕೆ ಪುರುಷರು ಅಡ್ಡಗಾಲಾಗುತ್ತಾರೆಂಬ ಅಪವಾದ ಪುರುಷರ ಮೇಲಿದೆಯಾದರೂ ಎಲ್ಲಾ ಪುರುಷರು ಮಹಿಳಾ ವಿರೋಧಿಯಾಗಿರಲು ಸಾಧ್ಯವಿಲ್ಲ. ಕೆಲವು ಪುರುಷರು ಸ್ತ್ರೀವಾದಿಗಳಾಗಿರುತ್ತಾರೆ. ಹಾಗಾಗಿ ನಾವು ನಮ್ಮಲ್ಲಿರುವ ಕೊರತೆಗಾಗಿ ಸಂಪೂರ್ಣವಾಗಿ ಪುರುಷರನ್ನು ಕಾರಣ ರನ್ನಾಗಿಸುವುದು ತಪ್ಪಾಗುತ್ತದೆ. ಅದೇನೇ ಇರಲಿ,ನಾವು ನಮ್ಮನ್ನು ತಮ್ಮ ಇಷ್ಟ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಿದರೆ ಅದುವೇ ನಾವು ಸಮಾಜಕ್ಕೆ ಕೊಡುವ ಕೊಡುಗೆ ಗೆಳತಿ.
ಹಾ: ಮತ್ತೊಂದು ವಿಷಯ ಗೊತ್ತಾ? ನೋವಿನ ಎಡೆಯಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ಹೇಳಲೇಬಾರದೆಂದಲ್ಲ. ಹಾಗಾಗಿ ಹೇಳುತ್ತಿದ್ದೇನೆ. ಇತ್ತೀಚಿಗೆ ಹೆಚ್ಚಿನ ಹುಡುಗಿಯರು ತಮ್ಮ ಪ್ರಾಣವನ್ನು ಕೈಯಾರೆ ಕೊಲ್ಲುತ್ತಿದ್ದಾರೆ ಎಂಬುದು. ಪ್ರೀತಿ ಪ್ರಕೃತಿದತ್ತವಾದುದು. ಹಾಗಾಗಿ ಹುಡುಗನ ಮೇಲೆ ಮೂಡಿದ ಪ್ರೀತಿ ಪ್ರೇಮವಾಗಿ ಕೊನೆಗೆ ಹುಡುಗ ಸೂಕ್ತ ಸ್ಪಂದನೆ ನೀಡದಿದ್ದಾಗ ತಮ್ಮ ಜೀವವನ್ನು ಕೈಯಾರೆ ಕೊಲ್ಲುವಂತಹ ನೀಚ ಕಾರ್ಯಕ್ಕೆ ಇಳಿಯುವುದು ಎಷ್ಟು ಸರಿ? ಈ ಹೊತ್ತು ಜಯಂತ್ ಕಾಯ್ಕಿಣಿಯವರು ಮುಂಗಾರು ಮಳೆಗೆ ಬರೆದ ಹಾಡೊಂದು ನೆನಪಾಗುತ್ತದೆ. ಕೊಲ್ಲು..ಗೆಳತಿ..ನನ್ನ ಹಾಗೆ ಸುಮ್ಮನೆ..ಎಂಬ ಹಾಡು ಯಾಕೋ ಇಂಥವರಿಗೆ ಹೇಳಲೇಬೇಕೆನಿಸುತ್ತದೆ. ಈ ಪದ್ಯದಲ್ಲಿ ಎಷ್ಟೊಂದು ಅರ್ಥವಿದೆ ನೋಡು. ಅಂದಹಾಗೆ ಮತ್ತೊಂದನ್ನು ನೆನಪಿಡು ಗೆಳತಿ. ದೇವರು ನೀಡಿದ ಜೀವವನ್ನು ಕೊಲ್ಲುವ ಶಕ್ತಿ ದೇವರಿಗಿದೆಯೇ ಹೊರತು ನಮಗಲ್ಲ. ಸಿನೆಮಾಗಳಲ್ಲಿ ಜೀವಗಳನ್ನು ಕೊಲ್ಲುವ ದೃಶ್ಯ ಗಳೆಲ್ಲಾ ಮನುಷ್ಯ ವಿಕಾರತೆಯನ್ನು ತೋರ್ಪಡಿಸುವಂತ ಹದು. ಹಾಗಾಗಿ ಸಿನೆಮಾ ಎಂಬ ಕಲ್ಪನಾಧಾರಿತ ದೃಶ್ಯ ಗಳನ್ನು ನೋಡಿ ನಾವು ವಿರೋಧಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದು ಮೂರ್ಖತನವಾಗುತ್ತದೆ ಅಲ್ವಾ ಗೆಳತಿ?
ಇದೊಂದು ಒಂದು ಕಡೆಯ ವಿಚಾರವಾದರೆ ಮತ್ತೊಂದು ಕಡೆ ರುಚಿಕಾಳ ಪ್ರಕರಣವನ್ನು ನೋಡಿದಾಗ ಇವತ್ತು ಮಹಿಳಾ ವರ್ಗ ಶೋಷಣೆಗೊಳಗಾಗುತ್ತಿರುವುದು ಕಾಣ ಬರುತ್ತದೆ.ಶೋಷಣೆಯ ಜೊತೆಗೆ ಬದುಕುತ್ತಿರುವ ಮಹಿಳಾ ಪರ ಧ್ವನಿಯೆತ್ತಲು ಮಹಿಳಾ ಹೋರಾಟಗಾರರು ಇದ್ದಾರೆ. ಆದರೆ ಕಡಿಮೆ.ಯಾಕೆ ಹೀಗಾಗುತ್ತಿದೆ? ಹೋರಾಟ ಅಂದಾಕ್ಷಣ ಲಾಠಿ,ಪೊಲೀಸು ಎಂಬ ಚಿತ್ರಣ ಇವತ್ತು ಮನೆಯೊಳಗಿಂದ ಹೆಣ್ಣೊಬ್ಬಳನ್ನು ಹೋರಾಟಗಿಳಿಯದಂತೆ ಮಾಡುತ್ತಿದೆ. ಮಾತ್ರವಲ್ಲ, ಹೋರಾಟ, ಚಳವಳಿಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುವಾಗ ಸಮಾಜ ಹೆಣ್ಣೊಬ್ಬಳನ್ನು ದುರುಗುಟ್ಟಿ ನೋಡುತ್ತದೆ.ಇದಕ್ಕೆ ಬೆದರಿದ ಸಹೋದರಿಯರು ಹೋರಾಟದ ಮಾರ್ಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಯಾಕೆ ಹೀಗಾಗುತ್ತಿದೆ? ಇಂತಹ ಗೊಡ್ಡು ಬೆದರಿಕೆಗೆ ಹೆದರಿದಿದ್ದಿದ್ದರೆ ಮೇಧಾ ಪಾಟ್ಕರ್, ಆರುಂಧತಿ ರಾಯ್, ಟೀಸ್ಟಾ ಇವತ್ತು ಮಹಿಳಾ ಹೋರಾಟಗಾರರ ನೆಲೆಯಲ್ಲಿ ನಾವು ನೋಡಲು ಸಾಧ್ಯವಿತ್ತೇ? ಇಲ್ಲ,ಗೆಳತಿ. ನಾವು ಗೊಡ್ಡು ಸಂಪ್ರದಾಯಕ್ಕೆ, ಗೊಡ್ಡು ಬೆದರಿಕೆಗಳಿಗೆ ಹೆದರಬಾರದು ಗೆಳತಿ.ನೋಡು..ನಿನ್ನಿಂದ ಸಮಾಜಕ್ಕೆ ಒಳಿತು ಆಗುವುದಾದರೆ ಯಾಕೆ ಚಳವಳಿಗಳಲ್ಲಿ ತೊಡಗಿಸಬಾರದು? ನಾವು ಯಾವತ್ತು ಶೋಷಿತರ, ಅಸ್ಪಶ್ಯರ ಪರವಾಗಿರಬೇಕು ಗೆಳತಿ. ಜೊತೆಗೆ ನೋವಿನೊಳಗೆ ಬಂಧಿಯಾಗಿರುವವರಿಗೆ ನಾವು ಪ್ರೀತಿ ಎಂಬ ದಿವ್ಯ ಔಷಧವನ್ನು ನೀಡಿ ನೋವಿನ ಮನಕ್ಕೆ ಸಾಂತ್ವನ ಹೇಳುವ ಜೀವವಾಗಬೇಕು ಗೆಳತಿ.
ನಮ್ಮನ್ನು ನೋಯಿಸಿದ ಮಾತ್ರಕ್ಕೆ ನಾವು ಸಮಾಜವನ್ನಾಗಲೀ, ಒಂದು ಜೀವವನ್ನಾಗಲೀ ನೋಯಿಸುವ ಬದಲು ಪ್ರೀತಿಸಬೇಕು. ಜೊತೆಗೆ ಪ್ರೀತಿಸುವ ಜೀವವನ್ನು ನಾವು ಯಾವತ್ತೂ ನೋಯಿಸಬಾರದು. ಹೀಗೆ ಮಾಡಿದರೆ ಮಾತ್ರ ನಾವು ಇತರರಿಗೆ ಮಾದರಿಯಾಗುತ್ತೇವೆ,ಯೋಚಿಸು. ಇತ್ತೀಚಿಗೆ ಒಂದು ಘಟನೆ ನಡೆಯಿತು.ಮೂರು ಮಕ್ಕಳ ತಂದೆಯೊಬ್ಬ(?) ತನ್ನ ಪ್ರಿಯತಮೆಯೊಂದಿಗೆ ಓಡಿ ಹೋಗಿ ತನ್ನ ಧರ್ಮದಿಂದ ಅವಳ ಧರ್ಮಕ್ಕೆ ಮತಾಂತರವಾಗಿ ತನ್ನನ್ನೇ ನಂಬಿದ ಹೆಂಡತಿ-ಮೂರು ಮಕ್ಕಳನ್ನು ಅನಾಥವನ್ನಾಗಿಸುವ ಇಂತಹ ಪುರುಷರು ಕಣೇ ಮಹಿಳೆಯರನ್ನು ಮತ್ತೆ ಮತ್ತೆ ಶೋಷಿಸುತ್ತಿರುವುದು. ಮದುವೆ ಎಂಬ ಬಾಂಧವ್ಯದ ಬಂಧಕ್ಕೊಳಗಾಗಿ ತನ್ನನ್ನೇ ನಂಬಿ ಬಂದ ಹೆಂಡತಿ ತನ್ನ ಮನೆಯನ್ನು ತೊರೆದು ಬಂದದ್ದು ತಪ್ಪೇ? ಹೀಗಾಗಿ ಮಹಿಳೆಯ ಪಾಲಿಗೆ ಪುರುಷನೊಬ್ಬ ರಾಕ್ಷಸನಾಗುವುದು. ಹೇ..... ಪುರುಷ ನಿನಗೆ ಹೆಣ್ಣು ಎಂಬುದು ಆಟದ ಸರಕಾಗಿ ಕಾಣುತ್ತಾಳೆಯೇ? ಉತ್ತರಿಸು.
ಇದು ನಮ್ಮ ಸದ್ಯದ ಪರಿಸ್ಥಿತಿ ಗೆಳತಿ. ಈಗ ಈ ಸಹೋದರಿಗೆ ಯಾರು ಗತಿ?ಒಮ್ಮೆ ಚಿಂತಿಸು ಗೆಳತಿ. ಯಾರನ್ನು ದೂರಬೇಕೊ,ಯಾರನ್ನು ಹಳಿಯಬೇಕೋ ಗೊತ್ತಾಗಲ್ಲ ಗೆಳತಿ, ಏನಾಗಿದೆ ನಮ್ಮ ಸಮಾಜಕ್ಕೆ? ಊಸರವಳ್ಳಿಯಂತೆ ಆಗಾಗ ಯಾಕೆ ತನ್ನ ಬಣ್ಣವನ್ನು ಬದಲಾಯಿಸುತ್ತೆ? ಕಾರಣ ಮಾತ್ರ ತಿಳಿಯುತ್ತಿಲ್ಲ. ಉತ್ತರ ಗೊತ್ತಾದ್ರೆ ತಿಳಿಸು.
-ಶಂಶೀರ್, ಬುಡೋಳಿ.
ಬುಡೋಳಿ ಮನೆ ಮತ್ತು ಅಂಚೆ
ಬಂಟ್ವಾಳ ತಾಲೂಕು
ದ.ಕ.ಜಿಲ್ಲೆ. ೫೭೪೨೫೩
೯೦೦೮೮೫೭೪೮೫