ಧಾರವಾಡ : ಸರಕಾರದ ಸೇವೆಗಳನ್ನು ಬಡವರು ಶ್ರೀಮಂತರೆನ್ನದೆ ಎಲ್ಲರೂ ಸಹ ಅವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಮ್. ಪುಷ್ಪಲತಾ ಹೇಳಿದರು.
ಧಾರವಾಡದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರಿನ ರಕ್ಷಣಾ ನಿರ್ದೇಶನಾಲಯ, ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೆರವು ಯೋಜನೆ ಯಡಿ ಅನುಪಾಲನಾ ಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಬೆಳೆದಂತಹ ಮಕ್ಕಳು ಉನ್ನತ ಹುದ್ದೆಯಲ್ಲಿ ಸೇರಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸರ್ಕಾರದ ಸೇವೆಗಳು ಬಡವ ಮತ್ತು ಶ್ರೀಮಂತರಿಗೆಂದು ಪ್ರತ್ಯೇಕವಾಗಿರುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ಅವಕಾಶಗಳಿರುತ್ತವೆ. ಅವುಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಎಲ್ಲ ಮಕ್ಕಳು ಜಗತ್ತಿಗೆ ಶಕ್ತಿಯನ್ನು ನೀಡುವಂತಹ ಬೆಳಕಾಗಬೇಕು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಯಾವುದೇ ಸಹಾಯ ಬೇಕಾದಲ್ಲಿ ತಕ್ಷಣ ನೀವು ಪ್ರಾಧಿಕಾರವನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದರು.
ವಿಶೇಷ ಅತಿಥಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಉಪನಿರ್ದೇಶಕಿ ಡಾ. ಹೆಚ್. ಹೆಚ್.ಕುಕನೂರ ಮಾತನಾಡಿ 18 ವರ್ಷವಾದರೂ ಕೂಡ ಬಾಲಮಂದಿರದ ಮಕ್ಕಳು ಇಂದಿಗೂ ನಮಗೆ ಮಕ್ಕಳೇ, ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಕೊಡದಿದ್ದರೆ ಭವಿಷ್ಯದಲ್ಲಿ ಆ ಮಕ್ಕಳು ತೊಂದರೆಗೆ ಸಿಲುಕುತ್ತಾರೆ. ಆದ್ದರಿಂದ ಎಲ್ಲ ಸಂಸ್ಥೆಯವರು ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾರ್ಗದರ್ಶಕರಾಗಿರಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಯಾವುದೇ ಮಗು ಯಾವುದೇ ಪರಿಸ್ಥಿತಿಯಲ್ಲಿ ಬಂದರೂ ಸಹ ಮಗುವನ್ನು ನಮ್ಮ ಮಗು ಎಂದು ಸ್ವೀಕರಿಸಬೇಕು. 16 ರಿಂದ 21 ವರ್ಷದ ಎಲ್ಲ ಮಕ್ಕಳೊಂದಿಗೆ ಸಹನೆಯಿಂದ ಸ್ನೇಹಿತರಂತೆ ವರ್ತಿಸಬೇಕು. ಮಕ್ಕಳಿಗೆ ಎಂದಿಗೂ ಅನಾಥ ಪ್ರಜ್ಞೆ ಮೂಡದಂತೆ ಸೇವೆ ಸಲ್ಲಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್. ಎಮ್. ಕಂಟೆಪ್ಪಗೌಡ್ರ, ಕಾರ್ಯಕ್ರಮದ ಉಪನ್ಯಾಸಕರಾದ ಸಿಸ್ಟರ ದುಲ್ಸಿನ್ ಕ್ರಾಸ್ತಾ, ಹರೀಶ ಜೋಗಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಚೈತ್ರಾ ಗುರಣ್ಣವರ, ಕಾವ್ಯಾ ಕೊಂಗವಾಡ, ಪಾಲಾಕ್ಷ ಗೌಡ ರಫಿಕ ಇವರು ಬಾಲಮಂದಿರದಲ್ಲಿ ಪುನರ್ವಸತಿ ಹೊಂದುತ್ತಿರುವಾಗಿನ ಹಾಗೂ ಸಂಸ್ಥೆಯಿಂದ ಬಿಡುಗಡೆ ಹೊಂದಿ ಪಡೆಯುತ್ತಿರುವ ಸೌಲಭ್ಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿಸ್ಟರ ಸೀಲಿನ್ ಹಾಗೂ ಗೀರಿಶ ಬೆಂಬಲ ವ್ಯಕ್ತಿ ಶಾಂತಿ ಸಂದೇಶ ಟ್ರಸ್ಟ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಮಕ್ಕಳ ಪಾಲನಾ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಹಾಗೂ ಬಾಲಮಂದಿರದಿಂದ ಬಿಡುಗಡೆಯಾದ ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾಂಸ್ಥಿಕ ರಕ್ಷಣಾಧಿಕಾರಿಗಳಾದ ಅಶ್ವಿನಿ ಉಳ್ಳಿಗೇರಿ ಹಾಗೂ ಅಸಾಂಸ್ಥಿಕ ರಕ್ಷಣಾಧಿಕಾರಿಗಳಾದ ಪ್ರಕಾಶ ಕೊಡ್ಲಿವಾಡ ಹಾಜರಿದ್ದರು. ಮಹಮ್ಮದ ಅಲಿ ತಹಶೀಲ್ದಾರ ನಿರೂಪಿಸಿದರು. ಪ್ರಕಾಶ ಕೊಡ್ಲಿವಾಡ ಸ್ವಾಗತಿಸಿದರು. ಕರೆಪ್ಪ ಕೌಜಲಗಿ ಇವರು ವಂದಿಸಿದರು.