ಕಾರವಾರ : ಸರಕಾರದ ಸವಲತ್ತುಗಳನ್ನು ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ, ಸರಕಾರವೇ ಜನರ ಮನೆಬಾಗಲಿಗೆ ಯೋಜನೆಯ ಲಾಭ ತಲುಪುವಂತೆ ಮಾಡುವ ದೃಷ್ಠಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಆಶೋತ್ತರಗಳಿಗೆ ಸ್ಪಂದಿಸುವುದಕ್ಕಾಗಿ ಜನರ ಹತ್ತಿರ ಸರಕಾರವೇ ಹೋಗಿ ಬದಲಾವಣೆ ತರುವ ದೃಷ್ಠಿಯಿಂದ ಈ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ. ಜನ ನೆಮ್ಮದಿಯಿಂದ ಇರಬೇಕು ಅವರಿಗೆ ಬೇಕಾದ ಸವಲತ್ತುಗಳನ್ನು ವಿಳಂಬಿಸದೇ ತಲುಪಿಸುವ ಕಾರ್ಯಕ್ಕಾಗಿ ಸರಕಾರವಿದೆ ಎಂಬ ಭರವಸೆ ಜನಸಾಮಾನ್ಯರಿಗೆ ಬರುವಂತಾಗಬೇಕು ಹಾಗಾಗಿ ಅಧಿಕಾರಿಗಳು ಜನರ ಅಹವಾಲುಗಳಿಗೆ ಸ್ಪಂದಿಸಲು ಇಂಥಹ ಕಾರ್ಯಕ್ರಮದ ಅವಶ್ಯಕತೆಯಿದೆ ಎಂದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಡವರ ಸಮಸ್ಯೆಗಳನ್ನು ಪರಿಹರಿಸುವ ದೃಷ್ಠಿಯಿಂದ ಕಡುಬಡವನಿಗೆ ಸರಕಾರದ ಸೌಲಭ್ಯಗಳು ಸಿಗಬೇಕೆಂಬ ಮೂಲ ಆಶಯದಂತೆ ಈ ಕಾರ್ಯಕ್ರಮ ಜಾರಿಗೊಂಡಿದೆ. ಅರ್ಹ ಫಲಾನುಭವಿಗಳ ಗುರುತಿಸಿ ಸೌಲಭ್ಯ ದೊರಕಿಸಿಕೊಡುವ ಸಲುವಾಗಿ ಅಧಿಕಾರಿಗಳನ್ನೆ ಜನರ ಬಳಿ ತರುವ ಕೆಲಸ ಮಾಡಲಾಗುತ್ತಿದೆ. ಜನ ನೆಮ್ಮದಿಯಿಂದ ಇದ್ದರೆ ಸರಕಾರದ ಶ್ರಮ ಸಾರ್ಥಕವೆಂದು ಹೇಳಿದರು.
ಬಳಿಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಬಡವರ ಬದುಕಿನಲ್ಲಿ ದೀಪ ಬೆಳಗಿಸುವ ಕಾರ್ಯವನ್ನು ಈ ಕಾರ್ಯಕ್ರಮದ ಮುಖಾಂತರ ಮಾಡಲಾಗುತ್ತಿದೆ. ಜನರ ಆರೋಗ್ಯ, ಜೀವ ರಕ್ಷಣೆ ಸರಕಾರದ ಮೂಲ ಕರ್ತವ್ಯವಾಗಿದೆ ಹಾಗಾಗಿ ವಿವಿಧ ಇಲಾಖೆಗಳ ಮೂಲಕ ಜನಸಾಮಾನ್ಯರ ಬದುಕು ಹಸುನಾಗುವಂತ ಯೋಜನೆಗಳನ್ನು ಜಾರಿಮಾಡಲಾಗಿದೆ. ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆ ಸರಕಾರದ ಹೃದಯದಂತಿದ್ದು ಜನರ ನಾಡಿಮಿಡಿತ ಅರಿತು ಕರ್ತವ್ಯ ನಿರ್ವಹಿಸಿ ಸರಕಾರದ ಯೋಜನೆಗಳು ಅರ್ಹರಿಗೆ ಸಿಗುವಂತೆ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ್, ಜನರ ಸಮಯ,ಹಣ, ಶ್ರಮ ಉಳಿಸುವ ಸಲುವಾಗಿ ಹಾಗೂ ಗ್ರಾಮೀಣ ಭಾಗದ ಜನರೂ ಅಭಿವೃದ್ಧಿಯ ಭಾಗಿದಾರರಾಗಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಡಿ ಆಯ್ಕೆಯಾದ 4820 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಿ ಪತ್ರ, ಸಹಾಯಧನದ ಚೆಕ್, ಅಚವೆ ಗ್ರಾಮದ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಲ್ಲಿ ಅನುಷ್ಠಾನಕ್ಕಾಗಿ ಒಂದು ಕೋಟಿ ಅನುದಾನವನ್ನು ಜಿಲ್ಲಾಧಿಕಾರಿಗಳ ಮೂಲಕ ನೀಡುವುದಾಗಿ ಸಚಿವ ಆರ್. ಅಶೋಕ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಎಮ್.ಎಲ್.ಸಿ ಶಾಂತಾರಾಮ ಸಿದ್ಧಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಉಪಸ್ಥಿತರಿದ್ದರು.