ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸರ್ಕಾರ ಮಟ್ಟದ ಸಭೆಗೆ ಮೊಗೇರ ಸಮಾಜದವರನ್ನು ಆಹ್ವಾನಿಸುವಂತೆ ಸಮಾಜಕಲ್ಯಾಣ ಸಚಿವರಿಗೆ ಮನವಿ

ಸರ್ಕಾರ ಮಟ್ಟದ ಸಭೆಗೆ ಮೊಗೇರ ಸಮಾಜದವರನ್ನು ಆಹ್ವಾನಿಸುವಂತೆ ಸಮಾಜಕಲ್ಯಾಣ ಸಚಿವರಿಗೆ ಮನವಿ

Wed, 18 May 2022 06:01:45  Office Staff   SO NEWS

ಭಟ್ಕಳ:ಮೊಗೇರ ಸಮುದಾಯದವರಿಗೆ ಪರಿಶಿಷ್ಟ ಜಾತಿ ಸೌಲಭ್ಯ ನೀಡುವ ಕುರಿತು ಚರ್ಚಿಸಲು ಸಮಾಕಲ್ಯಾಣ ಸಚಿವರ ನೇತೃತ್ವದಲ್ಲಿ ಕರೆಯಲಾಗಿರುವ ಸರ್ಕಾರದ ಅಧಿಕಾರಿಗಳ ಉನ್ನತ ಮಟ್ಟದ ಸಭೆಗೆ ಮೊಗೇರ ಸಮುದಾಯದ ಮುಖಂಡರನ್ನೂ ಆಹ್ವಾನಿಸುವಂತೆ ಮೊಗೇರ ಸಮುದಾಯದವರು ಮನವಿ ಸಲ್ಲಿಸಿದ್ದಾರೆ.
ಮೇ 29 ರಂದು ಬೆಂಗಳೂರಿನಲ್ಲಿ ಸಭೆಯನ್ನು ಕರೆಯಲಾಗಿದ್ದು, ಈ ಸಭೆಗೆ ಮೊಗೇರ ಸಮುದಾಯದ ಮುಖಂಡರನ್ನೂ ಆಹ್ವಾನಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಮನವಿ ಮಾಡಿದ್ದಾರೆ.

ಪರಿಶಿಷ್ಟ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಕಳೆದ 55 ದಿನಗಳಿಂದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಎದುರು ಮೊಗೇರ ಸಮುದಾಯವರು ಶಾಂತ ರೀತಿಯಲ್ಲಿ ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಧರಣಿ ಸ್ಥಳಕ್ಕೆ ಈ ಹಿಂದೆ ಭೇಟಿ ನೀಡಿದ್ದ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಸರಕಾರದ ಮಟ್ಟದಲ್ಲಿ ಮೊಗೇರರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದರು. ಅದರಂತೆ ಮೇ 29 ರಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ, ಭಟ್ಕಳ ಶಾಸಕರು ಹಾಗೂ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗಿದೆ.

ಆದರೆ ಈ ಸಭೆಗೆ ಮೊಗೇರ ಸಮುದಾಯದ ಮುಖಂಡರನ್ನು ಆಹ್ವಾನಿಸಿಲ್ಲ. ಮೊಗೇರ ಸಮುದಾಯದ ಪ್ರಮುಖರನ್ನೊಳಗೊಂಡು ಸಭೆಯನ್ನು ನಡೆಸಿ, ಸಮಾಜದ ಕುಂದುಕೊರತೆಗಳನ್ನು ಆಲಿಸಿ, ಅಗತ್ಯ ಪರಿಹಾರಕ್ಕಾಗಿ ದೀರ್ಘ ಚರ್ಚೆಯನ್ನು ನಡೆಸಿ, ಮೊಗೇರ ಸಮಾಜಕ್ಕೆ ಆಗುತ್ತಿರುವ ತೊಂದರೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯಂತೆ ಸಭೆಗೆ ಆಹ್ವಾನಿಸುವಂತೆ ಕೇಳಿಕೊಂಡಿದ್ದಾರೆ.
ಸಚಿವರು ಭೇಟಿ ನೀಡಿದ ವೇಳೆ ತಿಳಿಸಿದಂತೆ ಕಳೆದೆರಡು ವಾರಗಳಿಂದಲೂ ಶಾಂತ ರೀತಿಯಲ್ಲಿ ಧರಣಿ ನಡೆಸಲಾಗುತ್ತಿದೆ. ಆದರೂ ಸಹ ಸಭೆಯ ಕುರಿತು ಸಚಿವರ ಕಡೆಯಿಂದಾಗಲೀ, ಇಲಾಖೆಯಿಂದಾಗಲೀ ಯಾವುದೇ ಮಾಹಿತಿ ಬಾರದಿರುವುದು ಬೇಸರ ಮೂಡಿಸಿದೆ.
ಈಗಾಗಲೇ ಧರಣಿ ಸತ್ಯಾಗ್ರಹ 55 ದಿನಗಳನ್ನು ಪೂರೈಸಿದ್ದು ಜನರು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದು ತೀವ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಹೀಗಾಗಿ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದು, ಕೂಡಲೇ ಸಭೆಯನ್ನು ಕರೆದು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ಇನ್ನು  ಮುಂಬರುವ ದಿನಗಳಲ್ಲಿ ಬೇಡಿಕೆ ಈಡೇರಿಕೆಗಾಗಿ ಮೊಗೇರ ಸಮಾಜದಿಂದ ತೀವ್ರ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಮೇ 25ರ ನಂತರ ಮೊಗೇರ ಸಮಾಜದ ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲೆಗಳಿಗೆ ಗೈರಾಗುವುದರ ಮೂಲಕ ತಮ್ಮ ಸೌಲಭ್ಯಕ್ಕಾಗಿ ಪ್ರತಿಭಟಿಸಲಿದ್ದಾರೆ.
ತೀವ್ರಸ್ವರೂಪದ ರಾಸ್ತಾ ರೋಖೋ ಚಳುವಳಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹಾಗೂ ಜೈಲ್ ಭರೋ ಚಳುವಳಿಯನ್ನು ಜೂನ್ ಮೊದಲ ವಾರದಲ್ಲಿ ಆಯೋಜಿಸಿದ್ದು ಜನಸಾಮಾನ್ಯರು ಜೈಲು ಸೇರಲಿದ್ದಾರೆ. ಜೊತೆಗೆ ರೈಲ್ ರೋಖೋ ಚಳುವಳಿಯನ್ನು ಚಳುವಳಿ ಪ್ರಾರಂಭಿಸುವುದು, ಧರಣಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆಗೂ ನಿರ್ಧರಿಸಲಾಗಿದೆ.

ಹೀಗಾಗಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ನಮ್ಮ ಸಮಾಜದ ಸಮಸ್ಯೆಗಳನ್ನು ಕೂಡಲೇ ಸಭೆ ಕರೆದು ಅಥವಾ ಸೂಕ್ತವಾದ ಆದೇಶವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮೊಗೇರ ಸಮುದಾಯವರು ಮನವಿಯಲ್ಲಿ ತಿಳಿಸಿದ್ದಾರೆ


Share: