ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಮಾಜವನ್ನು ತಿದ್ದಬೇಕಾದರೆ ದಾರ್ಶನಿಕರಿಂದ ಸಾಧ್ಯ. ರಾಜಕೀಯದಿಂದ ಬದಲಾಗುವುದಿಲ್ಲ: ಬ್ರಹ್ಮಾನಂದ ಶ್ರೀ

ಸಮಾಜವನ್ನು ತಿದ್ದಬೇಕಾದರೆ ದಾರ್ಶನಿಕರಿಂದ ಸಾಧ್ಯ. ರಾಜಕೀಯದಿಂದ ಬದಲಾಗುವುದಿಲ್ಲ: ಬ್ರಹ್ಮಾನಂದ ಶ್ರೀ

Mon, 11 Sep 2023 12:47:26  Office Staff   SO News

ಭಟ್ಕಳ: ಶ್ರೀ ನಾರಾಯಣ ಗುರು ಜಯಂತ್ಯೋತ್ಸವ- 2023 ಬೃಹತ್ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮವು  ಶ್ರೀ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನ ಗುರುಮಠದ ಆಡಳಿತ ಮಂಡಳಿ, ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನ ಸಾರದಹೊಳೆ ಆಡಳಿತ ಮಂಡಳಿ ಮತ್ತು ನಾಮಧಾರಿ ಸಮಾಜ ಬಾಂಧವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಆಸರಕೇರಿ ನಿಚ್ಛಲಮಕ್ಕಿ ಸಭಾಭವನದಲ್ಲಿ ಧರ್ಮಸ್ಥಳ ಉಜಿರೆಯ ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಸಮಾಜವನ್ನುದ್ದೇಶಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು 'ನಾರಾಯಣ ಗುರುಗಳು ಈ ದೇಶ ಕಂಡಂತಹ ಅದ್ಬುತ ದಾರ್ಶನಿಕ ಹಾಗು ಆಧ್ಯಾತ್ಮಿಕ ಕ್ರಾಂತಿಯ ದ್ಯೋತ ಎನ್ನಬಹುದು. ಕಾರಣ ಈ ಆಧ್ಯಾತ್ಮಿಕ ಕ್ರಾಂತಿಯನ್ನು ದೇಶದ ಅನೇಕ ಪ್ರಾಂತ್ಯಗಳಲ್ಲಿ ಹೊಸ ಸಿದ್ದಾಂತಗಳಿಂದ ಯಾವುದೇ ವ್ಯಕ್ತಿಗೆ, ಸಮಾಜಕ್ಕೆ, ಮತ ಪಂಥಕ್ಕೆ ನೋವಾಗದ ರೀತಿಯಲ್ಲಿ ಸಮಾಜವನ್ನು ಎತ್ತಿ ಹಿಡಿದಿದ್ದಾರೆ. ಸಮಾಜವನ್ನು ತಿದ್ದಬೇಕಾದರೆ ದಾರ್ಶನಿಕರಿಂದ ಸಾಧ್ಯ. ರಾಜಕೀಯದಿಂದ ಬದಲಾಗುವುದಿಲ್ಲ ಎಂದ ಅವರು ಸಮುದ್ರದ ಅಲೆಗಳು ಈ ಜಗತ್ತಿನಲ್ಲಿ ಹೇಗೆ ನಿತ್ಯ ನಿರಂತರವೋ ಅದೇ ರೀತಿ ನಾರಾಯಣ ಗುರುಗಳ ಸಿದ್ದಾಂತ ಅವರ ಸಂದೇಶವು ಶಾಶ್ವತವಾಗಿರಲಿದೆ ಎಂದರು.

5 ನೇ ಶತಮಾನದಲ್ಲಿ ಶ್ರೀಮಂತ ಬಡವ ಎನ್ನುವುದು ಇರಲಿಲ್ಲವಾಗಿದ್ದು  8 ನೇ ಶತಮಾನದಿಂದ ಈ ಬೇದ ಭಾವವು ಜಾತಿ ಮತಗಳಿಂದ ಆರಂಭವಾಯಿತು. ನಂತರ 9ನೇ ಶತಮಾನದಲ್ಲಿ ಲಂಬೋಧರಿ ಎಂಬ ವರ್ಣವು ಜಾತಿಗಳ ನಡುವಿನ ಬೇದವನ್ನು ಸಮಾಜದಲ್ಲಿ ಸಂಪೂರ್ಣವಾಗಿ ಭದ್ರಗೊಂಡಿತು. ಇದು ಅಂದಿನ ಲಂಬೋದರಿಗಳಿಂದ ಈ ಬದಲಾವಣೆಯ ನಾಂದಿಯಾಯಿತು.
ನಾರಾಯಣ ಗುರುಗಳು 1925 ರಲ್ಲಿ ಸರ್ವ ಧರ್ಮ ಸಮ್ಮೇಳನ ಮಾಡಿ ಸಮಾಜದಲ್ಲಿ ಒಗ್ಗಟ್ಟು ಮೂಡಿಸಿದರು. ಅವರದ್ದು ಅದ್ವೈತ, ವಿದ್ಯೆ, ಜ್ಞಾನ ತುಂಬುವ ಕೆಲಸವನ್ನು ಮುಂದುವರೆಸಿದ ಅವರು ಜೀವನದುದ್ದಕ್ಕೂ ಇದನ್ನೆ ಸಾರಿದ್ದಾರೆ. ಹಾಗೂ ಇದರಿಂದಲೇ ಅವರು ಆಧ್ಯಾತ್ಮಿಕ ಕ್ರಾಂತಿಯತ್ತ ಜನರು ದಾರಿಗೆ ತಂದಿದ್ದಾರೆ ಎಂದರು.

ನಮ್ಮ ಸಮಾಜದ ಮಕ್ಕಳು ಭೌತಿಕವಾಗಿ ಬೆಳವಣಿಗೆಯಾಗಬೇಕು. ಉತ್ತಮ ಹುದ್ದೆಗಳಲ್ಲಿ ಸ್ಥಾನ ಪಡೆಯಬೇಕು. ಅಧಿಕಾರ ಸಂಪತ್ತು ನಿಮ್ಮದಾಗಿದ್ದರೆ ನಿಮ್ಮದೆ ಪಾಲಾಗಿರುತ್ತದೆ ಹೊರತು ಬೇರೆಯವರು ಅನುಭವಿಸಲು ಸಾಧ್ಯವಿಲ್ಲ‌. ಎಂದ ಅವರು ಪ್ರತಿ ಮನೆಗಳಿಗೆ ನಾರಾಯಣ ಗುರುಗಳ ಭಾವಚಿತ್ರದ ಜೊತೆಗೆ ಅವರ ಸಂದೇಶದ ಪುಸ್ತಕವು ಸಿಗಬೇಕು ಆಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ. 
ಈಗಿನ ರಾಜಕಾರಣಿಗಳು ನಾರಾಯಣ ಗುರುಗಳ ಪೋಟೋ ಇಡುತ್ತಿದ್ದಾರೆ ಆದರೆ ಇದರ ಜೊತೆಗೆ ಅವರ ಸಿದ್ದಾಂತವನ್ನು ಸಮಾಜದಲ್ಲಿ ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು.
ಗುರುಗಳ ಸಂದೇಶವನ್ನು ಮನನ ಮಾಡಿಕೊಂಡು ಜನರಿಗೆ ತಲುಪಿಸಬೇಕು. ನಾರಾಯಣ ಗುರುಗಳ ಅದ್ವೈತ ಸಿದ್ದಾಂತವನ್ನು ಅರಿತು ಧ್ಯಾನ ಮಾಡಿದ್ದಲ್ಲಿ ಮನಸ್ಸು ಪ್ರಪುಲ್ಲವಾಗಲಿದೆ. ನಾವುಗಳು ಬೇರೆ ಬೇರೆ ಜಾತಿ ಧರ್ಮ ಪಂಗಡ ರಾಜಕೀಯದ ಬಗ್ಗೆ ಮಾತನಾಡಿ ನಮ್ಮ ಮೆದುಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಒಳ್ಳೆಯ ಕೆಲಸ ಧರ್ಮದ ಹಾದಿಯಲ್ಲಿ ಸಾಗಿದರೆ ಅದು ನಾರಾಯಣ ಗುರುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಂತಾಗುತ್ತದೆ. ವಿದ್ಯೆ ಕಲಿತು ದುಡಿದು ನಿಮ್ಮದೇ ಸಂಸ್ಥೆ ಕಟ್ಟಿ ಇನ್ನಷ್ಟು ಜನರಿಗೆ ಉದ್ಯೋಗ ಕೊಟ್ಟು ಸಾರ್ಥಕವಾಗಿ ಬದುಕಬೇಕು.
ಸಮಾಜವನ್ನು ಒಗ್ಗಟ್ಟಿನಿಂದ ಕಟ್ಟಿ ಉಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಮಂಗಳೂರಿನ ಕೋಶಾಧಿಕಾರಿ  ಪದ್ಮರಾಜ್ ಆರ್. ಮಾತನಾಡಿ ' 27 ವರ್ಷದಿಂದ ಕುದ್ರೋಳಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಭಾಷಣಕ್ಕೆ ಮಾತ್ರ ನಾರಾಯಣ ಗುರುಗಳ ಸಂದೇಶ ಇರದೇ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮನ್ನು ಶೋಷಿತ ವರ್ಗವಾಗಿದ್ದು ಅಸ್ಪೃಶ್ಯತೆಯಿಂದ ನೋಡುತ್ತಿದ್ದ ವೇಳೆ ನಾರಾಯಣ ಗುರುಗಳು ಇದರ ವಿರುದ್ಧ ಕ್ರಾಂತಿ ಮಾಡಿದರು. ಅದು ಸಹ ಸಂಘರ್ಷ ರಹಿತ ಹೋರಾಟದಿಂದ ಮುಂದುವರೆದು ನಾವೇ ದೇವಸ್ಥಾನವನ್ನು ಕಟ್ಟಿ ನಾವುಗಳೆ ಪೂಜಿಸಬೇಕೆಂದು ಜನರಿಗೆ ಸಂದೇಶ ನೀಡಿದರು.

ಆ ಬಳಿಕ ಕರಾವಳಿ ಪ್ರದೇಶದಲ್ಲಿಯು ಸಹ ಜಾಲಪ್ಪ ನಾಯಕ ಎಂಬುವವರು ದೇವಸ್ಥಾನಕ್ಕೆ ತೆರಳಿದಾಗ ಅರ್ಚಕರ ಉತ್ತಮ ರೀತಿಯಲ್ಲಿ ಪೂಜೆ ಪುರಸ್ಕಾರ ಮಾಡಿಕೊಳ್ಳುತ್ತಾರೆ. ಆಬಳಿಕ ದೇವಸ್ಥಾನವನ್ನು ಶುದ್ದಗೊಳಿಸುತ್ತಾರೆ. 
ಆಗ ಸಾಹುಕಾರು ಕೊರಗಪ್ಪ ನಾಯಕ ನೇತ್ರತ್ವದಲ್ಲಿ ನಾರಾಯಣ ಗುರುಗಳನ್ನು ಭೇಟಿ ಮಾಡಿ ಮಂಗಳೂರು ಕುದ್ರೋಳಿ ಗೋಕರ್ಣನಾಥೇಶ್ವರ ಜಾಗವನ್ನು ಗುರುತಿಸಿ ಇದೊಂದು ಉತ್ತಮ ಕ್ಷೇತ್ರವಾಗುವ ಜಾಗ ಎಂದು ಹೇಳಿದ ಅವರ ಮಾತಿನಂತೆ ಈಗ ಕುದ್ರೋಳಿ ಐತಿಹಾಸಿಕ ಧಾರ್ಮಿಕ ಜಾಗವಾಗಿದೆ. 

ಸಂಘಟನೆಯನ್ನು ಅಂದಿನಿಂದ ಸಮಾಜ ಮಾಡಿಕೊಂಡು ಬಂದಿದೆ ಆದರೆ ಸಂಪೂರ್ಣ ಬದಲಾವಣೆ ಆಗಿದೆ ಎಂಬುದನ್ನು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 

ಹಿಂದುಳಿದ ವರ್ಗದ ಸಂಘಟನೆಯನ್ನು ನಮ್ಮವರಿಂದಲೇ ಬಿರುಕು ಮಾಡುವ ಕೆಲಸ ಮಾಡಿಕೊಳ್ಳಬೇಕಾಗಿದೆ. ನಾರಾಯಣ ಗುರು ಹಾಗೂ ಕೋಟಿ ಚೆನ್ನಯ್ಯ ಅಂತಹ ಶ್ರೇಷ್ಠರ ವಂಶದಿಂದ ಬಂದವರಾಗಿದ್ದು ನಮ್ಮ ಜ್ಞಾನವನ್ನು ಸಮಾಜದ ಒಗ್ಗಟ್ಟಿಗೆ ಬಳಸಿಕೊಳ್ಳಬೇಕು. 

ಅಂದಿನ ಸಮಯದಲ್ಲಿ ನಾರಾಯಣ ಗುರುಗಳು ಸಮಾಜದ ಅಸ್ಪರ್ಶತೆಯಿದ್ದ ಸಂಧರ್ಭದಲ್ಲಿ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಮನಗೊಳ್ಳಬೇಕು. ಕೇವಲ ದೇವಸ್ಥಾನವನ್ನು ಕಟ್ಟದೇ ಅವರಿಗೆ ಜ್ಞಾನ ವ್ರದ್ದಿಗಾಗಿ ಶಾಲೆಯನ್ನು ಕಟ್ಟಿ ಅವರು ಮುಂದೆ ಬೆಳೆದು ಬಡವರ ಕೆಲಸ ಮಾಡಬೇಕು. 
ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಂಘಟನೆಯ ಪೂರ್ವದಲ್ಲಿ ನಮ್ಮ ಮನೆಯನ್ನು ಕಟ್ಟಿಕೊಳ್ಳಬೇಕು ಆಗ ಸಮಾಜ ಕಟ್ಟಬೇಕು.

ಸೋಶಿಯಲ್ ಮಿಡಿಯಾ ಬಳಕೆ ಸಹ ಮಿತಿ ಇರಲಿ. ಸಮಾಜದಲ್ಲಿ ಸುಳ್ಳು ಸುದ್ದಿಗಳೆ ಪ್ರಚಲಿತದಲ್ಲಿದೆ. ಇದರ ಬಗ್ಗೆ ನಾವುಗಳು ಜಾಗರೂಕರಾಗಬೇಕು. 
ಅಂದು ವಿವೇಕಾನಂದರು ಕೇರಳವನ್ನು ಹುಚ್ಚರ ಸಂತೆ ಎಂದಿದ್ದ ಈಗ 100ಕ್ಕೆ 100 ಅಕ್ಷರಸ್ಥರಾಗಿರುವುದಕ್ಕೆ ನಾರಾಯಣ ಗುರುಗಳ ಸಾಧನೆ. 

ಹಿಂದು ಧರ್ಮ ಉಳಿಯಬೇಕಾದರೆ ಮುಖ್ಯ ಕಾರಣ ನಾರಾಯಣ ಗುರುಗಳು ಸಾಕ್ಷಿ. ವಿದ್ಯಾ ಮಂದಿರ ನಿರ್ಮಾಣ ಹಾಗೂ ದೇಗುಲಗಳಿಗೆ ಎಲ್ಲಾ ಜಾತಿಗಳ ಪ್ರವೇಶಕ್ಕೆ ನಾಂದಿ ಹಾಡಿದವರಿಂದಲೇ ಧರ್ಮ ಬಿಡುವ ಕೆಲಸ ನಿಂತಿದೆ.  ಒಂದು ಕಾಲದಲ್ಲಿ ರಾಜಕೀಯ ದೊಡ್ಡ ಶಕ್ತಿಯಾಗಿರುವ ನಮ್ಮ‌ ಸಮಾಜದಲ್ಲಿ ಈಗ ನಾಯಕರಿಲ್ಲ. ಜಾತಿ ವ್ಯವಸ್ಥೆ ಎಲ್ಲಾ ಕಡೆ ಇದೆ.‌ ಗೆದ್ದ ಮೇಲೆ ನಮ್ಮ ಸಮಾಜವನ್ನು ಮರೆಯಲಿದ್ದೇವೆ. ಈ ಹೋರಾಟ ಒಂದು 28 ಉಪಪಂಗಡಕ್ಕೆ ದಿಕ್ಸೂಚಿಯಾಗಿದೆ. ಪಕ್ಷ ಬೇದ ಮರೆತು ಸಮಾಜದ ಹೋರಾಟ ನಿಂತಿರುವ ಸಂದೇಶ ರಾಜ್ಯಕ್ಕೆ ಸಾರಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಕೊನೆಗಳಿಗೆಯಲ್ಲಿ ಸ್ಥಾಪನೆಯನ್ನು ಮಾಡಿದರು. 
ಕಾಂಗ್ರೆಸ್ ಪಕ್ಷವು ಪ್ರಣಾಳಿಕೆ ಯಲ್ಲಿ 250 ಕೋಟಿ ಹಣ ನೀಡಲಿದ್ದೇವೆ ಎಂದಿರುವವರು ಇನ್ನು ತನಕ ಭರವಸೆ ನೀಡಿದ್ದಾರೆ ಹೊರತು ನಿಗಮ ಸ್ಥಾಪನೆಗೆ ಮುಂದಾಗಬೇಕಾಗಿದೆ. ಚಂದ್ರಯಾನದ ರೂವಾರಿ ಶಿವನ ಸೋಮನಾಥನ ನಮ್ಮ ಸಮಾಜದವರು ಎಂಬುದನ್ನು ನಾವೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು‌. 

ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಗುರು ಮಠದ ಅಧ್ಯಕ್ಷ ಕ್ರಷ್ಣ ನಾಗಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿ ' ಕಳೆದ ಬಾರಿ ಸರಕಾರದೊಂದಿಗೆ ಆಚರಣೆ ಮಾಡಿದ್ದೇವೆ. ಆದರೆ ಈ ಬಾರಿ ಬದಲಾವಣೆ ಬಯಸಿ ನಾರಾಯಣ ಗುರು ಅವರ ಪರಿಚಯ ಅವರ ಹೋರಾಟ ತಿಳಿಯಬೇಕೆಂಬ ಉದ್ದೇಶ ನಮ್ಮದಾಗಿದೆ. 168 ವರ್ಷದ ಹಿಂದಿನ ಗುರುಗಳ ಬಗ್ಗೆ ನಾಮಧಾರಿ ಸಮಾಜಕ್ಕೆ ತಿಳಿಯಬೇಕಿದೆ. 
ಹಲ್ಲು ಕಿತ್ತ ಹಾವಿನಂತೆ ಸಮಾಜವು ಮುಂದುವರೆಯಬಾರದು ಈ‌ ನಿಟ್ಟಿನಲ್ಲಿ ಆರ್ಥಿಕ ಸದ್ರಡತೆ ಬೇಕಾಗಿದೆ. 28 ಉಪ ಪಂಗಡಕ್ಕೆ ಈ ನಾರಾಯಣ ಗುರು ನಿಗಮದಿಂದ ಉಪಯುಕ್ತವಾಗಬೇಕಾಗಿದೆ. 
ರಾಜಕೀಯಕ್ಕಾಗಿ ಈ ಹೋರಾಟ ಮುಂದುವರೆಯುತ್ತಿದೆ. ನಮ್ಮ ಸಮಾಜದ ಧಾರ್ಮಿಕ ಪದ್ದತಿಯಲ್ಲಿ ಬದಲಾವಣೆ, ನಮ್ಮ‌ಮಕ್ಕಳ ಭವಿಷ್ಯ ಉದ್ದಾರಕ್ಕಾಗಿ ಮಾತ್ರ ಎಂಬುದು ಎಲ್ಲರು ತಿಳಿಯಬೇಕಿದೆ. ಈ ಸಂಘಟನೆಯ ಉದ್ದೇಶ ಆಗಿದೆ. ಇನ್ನು ಮುಂದೆ ಜಿಲ್ಲಾ ಸಂಘವನ್ನು ರಚಿಸಿ ಹೋರಾಟದ ಕಿಚ್ಚು ನಡೆಸಲಿದ್ದೇವೆ ಎಂದರು. 

ಇದೇ ಸಂದರ್ಭದಲ್ಲಿ ಮನೆ ಮನೆಯಲ್ಲಿ ನಾರಾಯಣ ಗುರು ಭಾವಚಿತ್ರದ ಬಿಡುಗಡೆಯನ್ನು ಶ್ರೀಗಳು ನೆರವೇರಿಸಿದರು.

ಶ್ರೀ ನಾರಾಯಣ ಗುರು ಜಯಂತಿಯ ಅಂಗವಾಗಿ ಭಟ್ಕಳ ತಾಲೂಕಾ ನಾರಾಯಣ ಗುರು ಜಯಂತಿ ಆಚರಣಾ ಸಮಿತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮಾಜಿಕ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಪಾತ್ರ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆಯ ವಿಜೇತರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಸುಬ್ರಾಯ ಮಂಜು ನಾಯ್ಕ, ಸುಬ್ರಾಯ ನಾಯ್ಕ ತೆರ್ನಮಕ್ಕಿ, ನಾರಾಯಣ ಗುರು ಭಟ್ಕಳ ಸಮಿತಿ ಸಂಚಾಲಕ ಮನಮೋಹನ ನಾಯ್ಕ ಉಪಸ್ಥಿತರಿದ್ದರು. ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ ನಿರೂಪಿಸಿದರು. 

ಇದಕ್ಕೂ ಪೂರ್ವದಲ್ಲಿ ಬ್ರಹತ ಮೆರವಣಿಗೆಯು ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಗುರುಮಠ ಆಸರಕೇರಿಯಿಂದ ಸೋನಾರಕೇರಿ ಶಾಸಕರ ಮಾದರಿ ಶಾಲೆ ಮಾರ್ಗವಾಗಿ ಅಲ್ಲಿಂದ ಮೈಸುರು ಕೆಪೆ ರಸ್ತೆಯಿಂದ ಸಂಶುದ್ದೀನ್ ಸರ್ಕಲನಿಂದ ಪೊಲೀಸ್ ಸ್ಟೇಷನ್‌ ರಸ್ತೆ ಮೂಲಕ 
ವೆಂಕಟರಮಣ ದೇವಸ್ಥಾನ ಆಸರಕೇರಿಗೆ ತನಕ ಬ್ರಹತ ಮೆರವಣಿಗೆ ನಡೆಯಿತು. 
ಇಲ್ಲಿನ ಸಂಶುದ್ದೀನ್ ಸರ್ಕನಲ್ಲಿ ತಹಸೀಲ್ದಾರ ಮೂಲಕ ನಾಮಧಾರಿ ಸಮಾಜದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಮೆರವಣಿಗೆಯಲ್ಲಿ 3-4 ಸಾವಿರಕ್ಕೂ ಅಧಿಕ ನಾಮಧಾರಿ ಸಮಾಜದ ಜನರು ಪಾಲ್ಗೊಂಡರು. 
ಚಂಡೆ ವಾದ್ಯ, ಟ್ಯಾಬ್ಲೋ ಹಾಗೂ ವಿಶೇಷ ಆಕರ್ಷಣೆಯಾಗಿ ನಾರಾಯಣ ಗುರುಗಳ ವೇಷದಲ್ಲಿ ಓರ್ವ ಬಾಲಕ ಕಾಣಿಸಿಕೊಂಡಿದ್ದಾನೆ.
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳಿಗೆ ಮಹಿಳೆಯರು ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಂಡರು.


Share: