ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸದಾಶಿವಗಢ ಕೋಟೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ

ಸದಾಶಿವಗಢ ಕೋಟೆಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ

Sat, 29 Oct 2022 03:18:19  Office Staff   SO News

ಕಾರವಾರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಹಾಗೂ ಗ್ರಾಮ ಪಂಚಾಯತ ಚಿತ್ತಾಕುಲಾ ಇವರ ಸಂಯುಕ್ತಾಶ್ರಯದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ  ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು. 

ಕಾರವಾರದ ಸದಾಶಿವಗಡ ಕೋಟೆಯ ಜಂಗಲ್ ರೆಸಾರ್ಟ್ ಆವರದಲ್ಲಿ ಶುಕ್ರವಾರ  ನಡೆದ ಕೋಟಿ ಕಂಠ ಗಾಯನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.  ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹಾಗೂ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ ಅವರು ಕನ್ನಡಾಂಬೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ‌ ಕುವೆಂಪುರವರ ನಾಡಗೀತೆ, ಬಾರಿಸು ಕನ್ನಡ ಡಿಂಡಿಮವ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಡಾ. ಡಿ. ಎಸ್. ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ, ಹಂಸಲೇಖರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ 6 ಪ್ರಭಾವ  ಬೀರುವ ಹಾಡುಗಳನ್ನು ಹಾಡಲಾಯಿತು.

ಕಾರ್ಯಕ್ರಮಕ್ಕೆ ಗಣ್ಯರನ್ನು ಸಾಂಪ್ರದಾಯಕ 
ಹಾಗೂ ಕಹಳೆ ವಾದ್ಯದ ಮೂಲಕ ಬರಮಾಡಿಕೊಳ್ಳಲಾಯಿತು. ಶಾಲಾ ಮಕ್ಕಳು ಧರಿಸಿದ್ದ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಹಾಗೂ ಇನ್ನಿತರ ಕನ್ನಡದ ವೀರರ ವೇಷ ಭೂಷಣಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ನಾಡನುಡಿ ಕನ್ನಡವನ್ನು ಪ್ರೀತಿಸುತ್ತೇವೆ. ಮತ್ತು ಗೌರವಿಸುತ್ತೇವೆ ಎಂಬ ಪ್ರತಿಜ್ಞಾ ವಿಧಿಯನ್ನು ಗಣ್ಯರ ಸಮ್ಮುಖದಲ್ಲಿ ಬೋಧಿಸಲಾಯಿತು.

ನಾಡಪ್ರಭು ಕೆಂಪೇಗೌಡರ 108 ಅಡಿಗಳ ಕಂಚಿನ ಭವ್ಯ ಪ್ರಗತಿಯ ಪ್ರತಿಮೆಯನ್ನು ಅನಾವರಣ ಮಾಡಲು "ಬನ್ನಿ ನಾಡ ಕಟ್ಟೋಣ" ಎಂಬ ಐತಿಹಾಸಿಕ ಅಭಿಯಾನವನ್ನು ಸಾರುವ ವಾಹನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಪಂಚಾಯತನ ಸಿ ಇ ಓ ಪ್ರಿಯಾಂಗಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ ಪೆನ್ನೇಕರ, ಕಾರವಾರ ಉಪ ವಿಭಾಗೀಯ ಅಧಿಕಾರಿ ಜಯಲಕ್ಷ್ಮಿ ರಾಯಕೋಡ, ತಹಸೀಲ್ದಾರ ನಿಶ್ಚಲ ನರೋನ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಪಾಲಕರು ಶಿಕ್ಷಕರು ಇದ್ದರು.


Share: