ಬೀದರ : ಡಾ.ಅಂಬೇಡ್ಕರ ಅವರು ಸಂವಿಧಾನ ರಚನೆ ಮಾಡುವಾಗ ಶ್ರೀ ಬಸವೇಶ್ವರರ ವಿಚಾರಧಾರೆಯ ಪ್ರೇರಣೆ ಪಡೆದರು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಹತ್ವದ ಬಿಕೆಡಿಬಿ ಸಭೆಯಲ್ಲಿ ಪಾಲ್ಗೊಳ್ಳಲು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಾ.ಅಂಬೇಡ್ಕರ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ ಅವರು ಅನೇಕ ನೋವುಗಳನ್ನು ಉಂಡರು. ಅದರಿಂದ ಅವರು ಕುಗ್ಗಲಿಲ್ಲ. ಆ ನೋವಿನ ಮೂಲಕ ಲಾಭ ಪಡೆದುಕೊಳ್ಳುವ ಪ್ರಯತ್ನವನ್ನು ಕೂಡ ಮಾಡಲಿಲ್ಲ. ಆದರೆ, ಇದೇ ರೀತಿಯ ಲಕ್ಷಾಂತರ ಜನರ ಬಗ್ಗೆ ಚಿಂತನೆ ಮಾಡಿ ಅವರ ರಕ್ಷಣೆ, ಅವರಿಗೆ ಸಮಾನತೆ, ಅವರಿಗೆ ಬದುಕುವಂತಹ ಒಂದು ಶಕ್ತಿಯನ್ನು ತುಂಬಿದ್ದು ಡಾ.ಅಂಬೇಡ್ಕರ ಅವರು ಎಂದರು.
ಒಂದು ಸಂದರ್ಭದಲ್ಲಿ ಮುಂಬಯಿ ಭಾಗದ ಶಿಕ್ಷಣ ಸಚಿವರಾಗಿದ್ದ ಹುಬ್ಬಳ್ಳಿಯ ಕಂಬಳಿಯವರು ಅಂಬೇಡ್ಕರ್ ಅವರಿಗೆ ಆಶ್ರಯ ನೀಡಿದ್ದರು. ಆ ಸಂದರ್ಭದಲ್ಲಿ ಕಂಬಳಿಯವರು ಬಸವಣ್ಣನವರ ವಿಚಾರಧಾರೆಗಳನ್ನು ಅಂಬೇಡ್ಕರ ಅವರಿಗೆ ತಿಳಿಸಿದರು. ಅದು ಅಂಬೇಡ್ಕರ ಅವರ ಮನದಾಳದಲ್ಲಿ ಉಳಿದು ಆ ವಿಚಾರಧಾರೆಗಳನ್ನು ಸಂವಿಧಾನದಲ್ಲಿ ಅಳವಡಿಸಲು ಶ್ರಮಿಸಿದರು. ಸಂವಿಧಾನ ರಚನೆಯ ಸಂದರ್ಭದಲ್ಲಿ ಸಮಾಜದ ಅತ್ಯಂತ ಕಟ್ಟಕಡೆಯ ಮನುಷ್ಯನು ಕೂಡ ಉದ್ಧಾರವಾಗಬೇಕು ಎನ್ನುವ ಸಂವಿಧಾನವನ್ನು ರಚನೆ ಮಾಡುವ ಪ್ರೇರಣೆಯನ್ನು ಪಡೆದರು. ಈ ಕಾರಣದಿಂದ 21 ಶತಮಾನದಲ್ಲಿ ಭಾರತವು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಎಲ್ಲರಿಗೂ ಸಮಾನ ಅವಕಾಶವಿರುವಂತಹ ಕಾರ್ಯ ಮಾಡಿದ ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರಋಣಿಯಾಗಿರೋಣ ಎಂದರು. ಇಂದು ನಾವು ಯಾವುದೇ ಸ್ಥಾನಮಾನ ಪಡೆದಿದ್ದರೂ, ಯಾವುದೇ ನೌಕರಿ ಹೊಂದಿದ್ದರೂ, ಏನೇ ಅವಕಾಶ ಪಡೆದಿದ್ದರೂ ಅದು ಪ್ರಜಾಪ್ರಭುತ್ವ ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದರು.
ನಮ್ಮ ಸಂವಿಧಾನವನ್ನು ಓದಿದಾಗ ಡಾ.ಅಂಬೇಡ್ಕರ್ ಅವರು ಮಾನವೀಯ ಮೌಲ್ಯಗಳನ್ನು ಬಹಳಷ್ಟು ಅರ್ಥಮಾಡಿಕೊಂಡಿದ್ದರು ಎಂದು ತಿಳಿಯುತ್ತದೆ. ಅವರ ದೂರದೃಷ್ಟಿ ವಿಶಿಷ್ಟವಾಗಿದೆ. ಹಲವಾರು ಜಾತಿ ಮತ ಪಂಥಗಳನ್ನು ಒಗ್ಗೂಡಿಸಲು ದೂರದೃಷ್ಟಿಯ ಕೆಲಸ ಮಾಡಿದ್ದರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬಸವಣ್ಣನವರ ವಿಚಾರಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ ಅವರ ವಿಚಾರಗಳು ಒಂದೇ ಆಗಿವೆ. ಇಬ್ಬರು ಮಹಾನ್ ಪುರುಷರು ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಅನಿಷ್ಠ ಪದ್ಧತಿಗಳ ವಿರುದ್ಧ ಅವರು ಹೋರಾಟ ಮಾಡಿದ್ದಾರೆ. ಶರಣರ ಎಲ್ಲ ವಿಚಾರಧಾರೆಗಳನ್ನು ಸಂವಿಧಾನದಲ್ಲಿ ತಂದು ಎಲ್ಲರೂ ಸಮಾನರಾಗಿ ಬಾಳುವ ಅವಕಾಶವನ್ನು ಕೊಟ್ಟಂತಹ ಅಂಬೇಡ್ಕರ ಅವರ ಮೂರ್ತಿಯನ್ನು ಅನಾವರಣ ಮಾಡುವ ಮೂಲಕ ಅವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು. ಅವರಿಂದ ಈ ದೇಶ ಒಕ್ಕೂಟವಾಗಿ, ಒಂದಾಗಿ ಉಳಿದಿದೆ ಎಂದರು.
ವಿದೇಶಗಳಲ್ಲಿ ಪ್ರಜಾಪ್ರಭುತ್ವ ಉಳಿಯುತ್ತಿಲ್ಲ. ಪಕ್ಕದ ರಾಷ್ಟçಗಳಲ್ಲಿ ಪ್ರಜಾಪ್ರಭುತ್ವ ಆಂತಕದಲ್ಲಿದೆ. ನಮ್ಮ ಭಾರತ ದೇಶವೊಂದರಲ್ಲೇ ಪ್ರಜಾಪ್ರಭುತ್ವವು ದಿನೇದಿನೆ ಗಟ್ಟಿಯಾಗುತ್ತ ಸಾಗುತ್ತಿದೆ. ನಮ್ಮ ಭಾರತದ ಸಂವಿಧಾನ ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅತ್ಯಂತ ಗೌರವದಿಂದ ಅಧಿಕಾರ ಹಸ್ತಾಂತರವಾಗುವ ಅವಕಾಶ ನಮ್ಮ ಸಂವಿಧಾನದಲ್ಲಿದೆ. ಈ ವ್ಯವಸ್ಥೆ ಬೇರೆ ಯಾವ ರಾಷ್ಟ್ರಗಳಲ್ಲೂ ಇಲ್ಲ. ಅಮೆರಿಕಾ ಸುಧಾರಿಸಿದ ರಾಷ್ಟ್ರ ಎಂದರೂ ಇತ್ತೀಚೆಗೆ ನಡೆದ ಅಧ್ಯಕ್ಷಿಯ ಚುನಾವಣೆಯಲ್ಲಿ ದೊಡ್ಡ ಗಲಾಟೆ ನಡೆಯಿತು. ಅಧಿಕಾರ ಬಿಟ್ಟುಕೊಡಲು ಅಲ್ಲಿ ತಯಾರಿರಲಿಲ್ಲ. ಆದರೆ, ನಮ್ಮ ಭಾರತದಲ್ಲಿ ಇಂತಹ ವ್ಯವಸ್ಥೆ ಇಲ್ಲ. ನಮ್ಮ ದೇಶದಲ್ಲಿ ಅಧಿಕಾರ ಹಸ್ತಾಂತರ ಶಾಂತ ರೀತಿಯಿಂದ ಆಗುತ್ತಿದ್ದರೆ ಅದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರು ರಚಿಸಿದ ಸಂವಿಧಾನವೇ ಕಾರಣ ಎಂದರು.
ಸಮಾಜದಲ್ಲಿ ಯಾವುದೇ ಒಂದು ವರ್ಗ ಮುಖ್ಯವಾಹಿನಿಗೆ ಬರದೇ ಹೋದರೆ ಆ ರಾಜ್ಯವಾಗಲಿ, ದೇಶವಾಗಲಿ ಎಂದಿಗೂ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಆ ವರ್ಗವು ಸಬಲೀಕರಣವಾಗಿ ಮುಖ್ಯವಾಹಿನಿಗೆ ಬಂದಾಗ ಇಡೀ ದೇಶವು ಅಭಿವೃದ್ಧಿ ಮತ್ತು ಸಮೃದ್ಧಿ ಹೊಂದಲು ಸಾಧ್ಯ ಎಂಬುದು, ಅಶಕ್ತರಿಗೆ ಶಕ್ತಿಯನ್ನು ತುಂಬುವಂತಹದ್ದು ಡಾ.ಅಂಬೇಡ್ಕರ್ ಅವರ ಆರ್ಥಿಕ ನೀತಿಯಾಗಿದ್ದು ನಾವು ಅದನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು ತಿಳಿಸಿದರು.