ಭಟ್ಕಳ: ಸತತ 2 ವರ್ಷಗಳ ಕಾಲ ಕೊರೊನದಿಂದ ಕಂಗೆಟ್ಟಿದ್ದ ರಮಜಾನ್ ಮಾರ್ಕೆಟ್ ಈ ವರ್ಷ ಅಡೆತಡೆಯಿಂದ ಮುಕ್ತವಾಗಿದೆ. ಭಟ್ಕಳ ಪುರಸಭೆ ಏಪ್ರಿಲ್ 4ರಿಂದ ಮೇ.3ರವರೆಗೆ ರಮಜಾನ್ ಮಾರ್ಕೆಟ್‌ಗೆ ಅನುಮತಿ ನೀಡಿದ್ದು, ಮೊದಲ 5 ದಿನದ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಕೊನೆಯ 2 ದಿನದ ವ್ಯಾಪಾರ ವಹಿವಾಟಿನ ಮೇಲೆ ವ್ಯಾಪಾರಿಗಳ ಗಮನ ಹರಿದಿದೆ.
ಕಳೆದ ಒಂದೂವರೆ ದಶಕದಿಂದ ಭಟ್ಕಳ ರಮಜಾನ್ ಮಾರ್ಕೆಟ್ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವ್ಯಾಪಾರಿಗಳು ರಮಜಾನ್ ಉಪವಾಸ 15 ದಿನಗಳು ಬಾಕಿ ಇರುವಾಗಲೇ ಭಟ್ಕಳಕ್ಕೆ ದೌಡಾಯಿಸುತ್ತಾರೆ. ಬಟ್ಟೆಬರೆ, ಅಲಂಕಾರಿಕಾ ಸಾಮಾನುಗಳು, ಬ್ಯಾಗ್ ಚಪ್ಪಲಿಯಿಂದ ಹಿಡಿದು ಹಲವು ರೀತಿಯ ಮನೆ ಬಳಕೆಯ ವಸ್ತುಗಳು ರಮಜಾನ್ ಪೇಟೆಯಲ್ಲಿ ಮಾರಾಟಕ್ಕೆ ಸಿಗುತ್ತವೆ. ಅಲ್ಲಲ್ಲಿ ವಿಭಿನ್ನ ತಿಂಡಿ ತಿನ್ನಿಸುಗಳ ಮಾರಾಟವೂ ಜೋರಾಗಿ ನಡೆಯುತ್ತದೆ. ಈ ರಮಜಾನ್ ಪೇ ಟೆಯ ವಿಶೇಷ ಎಂದರೆ ರಮಜಾನ್ ಪೇಟೆಗೆ ಮಾರಾಟಕ್ಕೆ ಬರುವ ಸರಕುಗಳೆಲ್ಲ ಮಧ್ಯಮ ವರ್ಗದ ಜನರನ್ನು ಆಕರ್ಷಿಸಿಸುವುದು. 1 ತಿಂಗಳ ರಮಜಾನ್ ಉಪವಾಸ ಮುಗಿಸಿ ಹಬ್ಬ ಆಚರಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಖರೀದಿ ಎನ್ನುವುದು ಹೊರೆಯಾಗದಿರಲಿ ಎಂದೇ ಭಟ್ಕಳದಲ್ಲಿ ರಮಜಾನ್ ಪೇಟೆಯನ್ನು ತೆರೆಯಲಾಗುತ್ತದೆ. ರಮಜಾನ್ ಪೇಟೆ ಕೇವಲ
ಒಂದು ಕೋಮಿನ ಜನರಿಗೆ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಭಟ್ಕಳ ಸುತ್ತಮುತ್ತಲಿನ ಹಳ್ಳಿಗಳು, ಹೊನ್ನಾವರ, ಪಕ್ಕದ ಕುಂದಾಪುರ ಶಿರೂರಿನಿಂದಲೂ ಜನರು ರಮಜಾನ್ ಪೇಟೆ ಯತ್ತ ಮುಖ ಮಾಡುತ್ತಿದ್ದಾರೆ.
• ಬಂದವರಿಗೆ ಬಿಸಿಲೇ ಭಾರ
ಈ ವರ್ಷ ರಮಜಾನ್ ಉಪವಾಸ ಬಿರು ಬಿಸಿಲಿನ ಅವಧಿಯಲ್ಲಿಯೇ ಬಂದಿದೆ.ಅದರಲ್ಲಿಯೂ ಈ ಬೇಸಿಗೆಯ ಬಿಸಿಲು ಜನರಿಗೆ ಯಮ ಯಾತನೆಯನ್ನು ನೀಡುತ್ತಿದೆ. ಬಿಸಿಲಿನ ಉರಿ ಎಷ್ಟಿದೆ ಎಂದರೆ ಬೆಳಿಗ್ಗೆ 10 ಗಂಟೆ ಯ ನಂತರ ಮನೆಯಿಂದ ಹೊರ ಬರಲೂ ಸಾಧ್ಯವಾಗುತ್ತಿಲ್ಲ. ಹಬ್ಬದ ಸಿದ್ಧತೆಯಲ್ಲಿ ತೊಡಗಿರುವ ಇಲ್ಲಿನ ಮುಸ್ಲಿಮರು ಹೊರಗೆ ಬಂದರೆ ಆಯಾಸ ತಣಿಸುವುದೇ ದೊಡ್ಡ ಸವಾಲು ಎಂಬಂತಾಗಿದೆ. ಆದ್ದರಿಂದ ಹಗಲಿನಲ್ಲಿ ಮೊದಲ ಐದು ದಿನ ರಮಜಾನ್ ಪೇಟೆ ಕಳಾಹೀನವಾಗಿರುವುದು ಕಂಡು ಬಂದಿದೆ. ಆದರೆ ಕಳೆದ ಒಂದೆರಡು ದಿನಗಳಿಂದ ಹೊತ್ತು ಮುಳುಗುತ್ತಿದ್ದಂತೆಯೇ ರಮಜಾನ್ ಪೇಟೆ ಚೇತರಿಸಿಕೊಳ್ಳುತ್ತಿದ್ದು, ಕೊನೆಯ 4 ದಿನದ ವ್ಯಾಪಾರ, ವಹಿವಾಟು ರಮಜಾನ್ ಪೇಟೆಗೆ ರಂಗು ತರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಪೊಲೀಸ್ ಕಾವಲು...
ತಾಲೂಕಿನ ಮುಖ್ಯ ರಸ್ತೆಯ ಸೀಮಿತ ಪ್ರದೇಶದಲ್ಲಿ ರಂಗೇರಿಸಿಕೊಳ್ಳುವ ರಮಜಾನ್ ಪೇಟೆಯಲ್ಲಿ ಪೊಲೀಸ್ ಕಾವಲು ಬಿಗಿಗೊಳಿಸ ಲಾಗಿದೆ. ಮಾರಿಕಟ್ಟೆ ಹಾಗೂ ಹಳೆಬಸ್ ನಿಲ್ದಾಣ ಪಕ್ಕದ ನಾಗಬನ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಓಡಾಡುವ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿ ರಮಜಾನ್ ಪೇಟೆಯಲ್ಲಿ ಓಡಾಡುವ ಜನರ ಮೇಲೆ ನಿಗಾ ವಹಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪೇಟೆಯಲ್ಲಿ ಗಸ್ತು ತಿರುಗುತ್ತ ಕಿಡಿಗೇಡಿಗಳ ಚಲನವಲನಗಳನ್ನು ಗಮನಿಸುತ್ತಿರುವುದು ಕಂಡುಬಂದಿದೆ.