ಬಂಟ್ವಾಳ. ಏಪ್ರಿಲ್ ೧೫: ದೇಶದ ಏಕತೆ ಹಾಗೂ ಸಮಾನತೆಯ ಉಳಿವಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವೇ ನಮಗೆ ಸ್ಪೂರ್ತಿ, ನಾವು ಸಂಘಟಿತರಾಗಿ ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪ ತೊಡಬೇಕಾಗಿದೆ ಎಂದು ರಾಜ್ಯ ಗೃಹ ಸಚಿವ ವಿ.ಎಸ್.ಆಚಾರ್ಯ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್, ಕಂದಾಯ ಇಲಾಖೆ,ಬಂಟ್ವಾಳ ಪುರಸಭೆ,ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬಿಸಿ ರೋಡಿನ ಎಸ್.ಜೆ.ಎಸ್ ಆರ್ ವೈ ಸಭಾಂಗಣದಲ್ಲಿ ಬುಧವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜ್ಜೀವನ್ ರಾಂ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಾಗಿ ಅಂಬೇಡ್ಕರ್ ಶ್ರಮಿಸಿದವರು. ದೇಶದ ಒಳಿತಿಗಾಗಿ ಅವರು ಪ್ರತಿಪಾದಿಸಿದ ತತ್ವಗಳ ಅನಿಷ್ಠಾನಕ್ಕೆ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ .ಆ ಮೂಲಕ ಭಾರತ ಸರ್ವವಿಧದಲ್ಲೂ ಬಲಿಷ್ಠ ಗೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಬಿ.ರಮಾನಾಥ ರೈ ಯವರು ಮಾತನಾಡಿ, ಅಂಬೇಡ್ಕರ್ ವ್ಯಕ್ತಿತ್ವ,ಚಿಂತನೆ ಸಾರ್ವಕಾಲಿಕವಾದದ್ದು. ಇದರ ಅನುಷ್ಠಾನದೊಂದಿಗೆ ಶೋಷಣೆ ಮುಕ್ತ ಸಮಾಜ ನಿರ್ಮಾಣದ ಕನಸು ನನಸಾಗಬೇಕಾಗಿದೆ ಎಂದರು.
ಸಂಸದ ನಳಿನ್ ಕುಂಆರ್ ಕಟೀಲು,ಪುರಸಭಾಧ್ಯಕ್ಷೆ ಬಿ.ಯಶೋಧ. ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೈಡಾ ಸುರೇಶ್, ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ ಶೇಷಪ್ಪ, ಗೋಪಾಲ ಕಾಡುಮಠ, ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ವಸಂತ್ರಾಜ್ ಶೆಟ್ಟಿ ವೇದಿಕೆಯಲ್ಲಿದ್ದರು. ಅಂಬೇಡ್ಕರ್ ರವರ ಬದುಕು-ಬರಹದ ಬಗ್ಗೆ ಭಾನುಚಂದ್ರ ಕೃಷ್ಣಾಪುರ, ಬಾಬು ಜಗಜ್ಜೀವನ್ ರಾಂ ರವರ ಸಾಧನೆಗಳ ಬಗ್ಗೆ ಕೆ.ರುಕ್ಮಯ ಮಾತನಾಡಿದರು. ನಾಟಿ ವೈದ್ಯ ಪೂವಪ್ಪ ಏಮಾಜೆ, ಆದರ್ಶ ದಂಪತಿ ಶಂಕರ ಜಾನಕಿ, ಸೂಲಗಿತ್ತಿ ರಾಧಾ ರವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ತಃಶೀಲ್ದಾರ್ ಸಿ,ಎನ್.ಮಂಜುನಾಥ್ ಸ್ವಾಗತಿಸಿ, ಸಮಾಜ ಕಲ್ಯಾಣಾಧಿಕಾರಿ ರಾಮಚಂದ್ರ ವಂದಿಸಿದರು. ಶಿಕ್ಷಕ ಅಬ್ದುಲ್ ರಝಾಕ್ ಕಾರ್ಯಕ್ರಮ ನಿರ್ವಹಿಸಿದರು.