ಶಿರಸಿ : ರಾಜ್ಯದ ಅತಿ ಹೆಚ್ಚು ಅರಣ್ಯ ಭೂಮಿಯನ್ನೊಳಗೊಂಡಿರುವ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಭಾನುವಾರ ಶಿರಸಿಯ ಮಾರಿಕಾಂಬಾ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಕುಮಟಾದಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಕೊಟ್ಟು ಅಡಿಗಲ್ಲು ಹಾಕಲು ನಾನೇ ಬರುತ್ತೇನೆಂದರು.
ಶಿರಸಿಯಲ್ಲಿ 250 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗುಣಗಾನ ಮಾಡಿದ ಸಿಎಂ ಬಹಳ ಕಷ್ಟದಿಂದ ಮೇಲೆಬಂದ ಕಾಗೇರಿ ಅವರ ಸರಳ ವ್ಯಕ್ತಿತ್ವವನ್ನ ವರ್ಣಿಸಿದರು
ಜಿಲ್ಲೆಯ ಅರಣ್ಯವಾಸಿಗಳನ್ನ ಸರ್ಕಾರ ಒಕ್ಕಲೆಬ್ಬಿಸಲ್ಲ. ಸುಪ್ರಿಮಕೋರ್ಟಿನಲ್ಲಿ ಅಫಿಡಾವಿಟ್ ಹಾಕುವುದಾಗಿ ಸಿಎಂ ಹೇಳಿದರು.
ಅಭುನಂದನೆ ಸ್ವೀಕರಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಮ್ಮ ಕುಟುಂಬದವರು ನೀಡಿದ ಸಂಸ್ಕಾರ, ತಂದೆತಾಯಿಯರ ಆಶೀರ್ವಾದದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ ಎಂದರು.
ಅಭಿನಂದನಾ ಸಮಾರಂಭದಲ್ಲಿ ಸಚಿವರಾದ ಶಿವರಾಮ ಹೆಬ್ಬಾರ್, ಸಿ ಸಿ ಪಾಟೀಲ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಆರ್ ವಿ ದೇಶಪಾಂಡೆ, ದಿನಕರ ಶೆಟ್ಟಿ, ಸುನೀಲ ನಾಯ್ಕ, ಗಣಪತಿ ಉಳ್ವೇಕರ, ಎಸ್ ವಿ ಸಂಕನೂರು ಸೇರಿದಂತೆ ಇತರರು ಇದ್ದರು.