ಬೆಂಗಳೂರು,ಜನವರಿ 27: ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿರುವ ಕೆ.ಎಸ್.ಈಶ್ವರಪ್ಪ ಅವರಿಂದ ತೆರವಾಗುತ್ತಿರುವ ಸಚಿವ ಸ್ಧಾನಕ್ಕೆ ಶೋಭಾಕರಂದ್ಲಾಜೆ ಅವರನ್ನು ತರಲು ಸ್ವತ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಲಾಬಿ ನಡೆಸಿದ್ದು, ಇದಕ್ಕೆ ಪಕ್ಷದ ವಲಯದಲ್ಲಿ ಪ್ರತಿರೋಧ ವ್ಯಕ್ತವಾಗಿದೆ.
ಈಶ್ವರಪ್ಪ ಅವರು ಇದೇ ೨೮ ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ನಂತರ ಸಚಿವ ಸ್ಧಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಧಾನಕ್ಕೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಅವರಿಂದ ತೆರವಾಗುವ ಸ್ಧಾನಕ್ಕೆ ಶೋಭಾಕರಂದ್ಲಾಜೆ ಅವರನ್ನು ನೇಮಿಸಲು ಯಡಿಯೂರಪ್ಪ ಅವರಿಂದ ತೆರೆಮರೆಯ ಪ್ರಯತ್ನ ಮುಂದುವರೆದಿದೆ.
ಈಶ್ವರಪ್ಪ ಅವರ ಸ್ಧಾನಕ್ಕೆ ಆನೇಕಲ್‌ನ ನಾರಾಯಣ ಸ್ವಾಮಿ, ಮೈಸೂರಿನ ಎ. ರಾಮದಾಸ್, ಶಂಕರಲಿಂಗೇಗೌಡ, ಚಿಕ್ಕಮಗಳೂರಿನ ಸಿ.ಟಿ. ರವಿ ಅವರು ಪ್ರಯತ್ನ ನಡೆಸಿದ್ದು, ಸಚಿವ ಸ್ಧಾನದ ಮಾಲೆ ಯಾರಿಗೆ ಬೀಳಲಿದೆ ಎಂಬುದು ನಿಗೂಢವಾಗಿದೆ.
ಆದರೆ ಯಡಿಯೂರಪ್ಪ ಮಾತ್ರ ಶೋಭಾಕರಂದ್ಲಾಜೆ ಅವರ ಪರವಾಗಿ ವಕಾಲತ್ತು ವಹಿಸಿದ್ದು, ಇತ್ತೀಚೆಗೆ ಡಾಲರ್‍ಸ್ ಕಾಲೋನಿಯಾ ತಮ್ಮ ನಿವಾಸದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ವಿಚಾರವನ್ನು ಅವರು ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ.
ಶೋಭಾಕರಂದ್ಲಾಜೆ ಅವರಿಗೆ ತೀರಾ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ಅಗತ್ಯವಿದೆ ಎಂದು ಹೇಳಿದಾಗ ಇದಕ್ಕೆ ಸಂಸದ ಅನಂತ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರು. ನೀವು ಸರ್ಕಾರವನ್ನು ಯಾವ ಹಂತಕ್ಕೆ ಕೊಂಡೊಯ್ಯಬೇಕು ಎಂದು ಆಲೋಚಿಸಿದ್ದೀರಿ ಎಂದು ಪ್ರಶ್ನಿಸಿದ್ದರೆಂದು ಉನ್ನತ ಮೂಲಗಳು ತಿಳಿಸಿವೆ.
ನಿಮಗೆ ಬೇಕಾದವರನ್ನು ಮಂತ್ರಿಮಾಡಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಅವರೊಬ್ಬರನ್ನೇ ಮಂತ್ರಿಮಂಡಲಕ್ಕೆ ಸೇರ್ಪಡೆಮಾಡಿಕೊಳ್ಳುವುದು ಸಾಧುವಲ್ಲ. ಮಂತ್ರಿಮಂಡಲವನ್ನು ಸಮಗ್ರವಾಗಿ ಪುನರ್ ರಚನೆ ಮಾಡುವ ಸಂದರ್ಭದಲ್ಲಿ ಬೇಕಾದರೆ ಮಾಡಿ ಎಂದು ಅನಂತ್ ಕುಮಾರ್ ಹೇಳಿದ್ದಾಗಿ ಇದೇ ಮೂಲಗಳು ತಿಳಿಸಿವೆ.
ಇಷ್ಟೆಲ್ಲಾ ವಿರೋಧದ ನಡುವೆಯೂ ಶೋಭಾಕರಂದ್ಲಾಜೆ ಅವರು ಮಂತ್ರಿಯಾಗುವ ಪ್ರಯತ್ನವನ್ನು ಮಾತ್ರ ಕೈಬಿಟ್ಟಿಲ್ಲ. ಪಕ್ಷದ ರಾಷ್ಟ್ರಮಟ್ಟದ ನಾಯಕರ ಮೇಲೆ ಒತ್ತಡ ಹೇರುವುದನ್ನು ಮಾತ್ರ ನಿಲ್ಲಿಸಿಲ್ಲ. ಹಾಗಾಗಿ ಈ ಬಾರಿ ಈಶ್ವರಪ್ಪ ಅವರಿಂದ ತೆರವಾಗುವ ಸ್ಧಾನಕ್ಕೆ ಇನ್ನಿಲ್ಲದ ಪೈಪೋಟಿ ಎದುರಾಗಿದ್ದು, ಇದು ಸ್ವತ: ಯಡಿಯೂರಪ್ಪ ಅವರಿಗೆ ತಲೆನೋವು ಉಂಟುಮಾಡಿದೆ.