ಭಟ್ಕಳ, ಅಕ್ಟೋಬರ್ 31 : ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 25 ನೇ ವರ್ಷದ ಪುಣ್ಯ ತಿಥಿ ಕಾರ್ಯಕ್ರಮವನ್ನು ಭಟ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಇಲ್ಲಿಯ ಸತ್ಕಾರ ಹೊಟೆಲ್ ಸಭಾ ಭವನದಲ್ಲಿ ಕೈಗೊಳ್ಳಲಾಯಿತು.
ಈ ಸಮಯದಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಶಾಸಕ ಜೆ.ಡಿ.ನಾಯ್ಕ, ದೇಶದ ಇಂದಿನ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಶ್ರೇಯಸ್ಸು ಇಂದಿರಾ ಗಾಂಧಿಯವರಿಗೆ ಸಲ್ಲಬೇಕು. ಅವರ ಚಿಂತನೆಗಳು ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಹೇಳಿದರು. ಪಕ್ಷದ ಹಿರಿಯ ಮುಖಂಡ ಎಮ್.ಎಸ್.ನಾಯ್ಕ ಮಾತನಾಡಿ, ಕಾಂಗ್ರೆಸ್ ಹಾಗೂ ದೇಶದ ಅಭಿವೃದ್ಧಿಯಲ್ಲಿ ಇಂದಿರಾಗಾಂಧಿಯವರ ತ್ಯಾಗ ಅಪಾರ ಎಂದು ಅವರ ಗುಣಗಾನ ಮಾಡಿದರು. ರಾಮಾ ಮೊಗೇರ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಇಂದಿರಾಗಾಂಧಿಯವರ ಹೋರಾಟ ಅನನ್ಯವಾಗಿದ್ದು, ಬಡವರ ಪರವಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ವಿವರಿಸಿದರು, ವೇದಿಕೆಯ ಮೇಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಾಯ ನಾಯ್ಕ, ತಾಲೂಕು ಪಂಚಾಯತ ಸದಸ್ಯ ಈರಪ್ಪ ಗರ್ಡೀಕರ, ಯುವ ಕಾಂಗ್ರೆಸ್ ಅಧ್ಯಕ್ಷ ಶೈಲೇಂದ್ರ ಗೌಡ, ಹಿರಿಯ ಮುಖಂಡ ಸೋಮಯ್ಯ ಗೊಂಡ ಮುಂತಾದವರು ಉಪಸ್ಥಿತರಿದ್ದರು.