ಬೆಂಗಳೂರು,ಜನವರಿ 30: ನಗರ ಹಾಗೂ ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಮೇಲಿರುವ ಪಡಿತರ ಕಾರ್ಡುದಾರರಿಗೆ ರಿಯಾಯ್ತಿ ದರದಲ್ಲಿ ಅಕ್ಕಿ ಮತ್ತು ಗೋಧಿ ನೀಡುವುದಾಗಿ ಆಹಾರ ಖಾತೆ ಸಚಿವ ಹರತಾಳು ಹಾಲಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೇ ಎಪಿಎಲ್ ಕಾರ್ಡುದಾರರಿಗೆ ತಲಾ ಹತ್ತು ಕೆಜೆಯಂತೆ ಅಕ್ಕಿ ಹಾಗೂ ಗೋಧಿಯನ್ನು ತಕ್ಷಣದಿಂದಲೇ ವಿತರಿಸಲಾಗುವುದು ಎಂದರು.
ಅಕ್ಕಿಯನ್ನು ೧೬.೫೦ ರೂ ದರದಲ್ಲಿ ಹಾಗೂ ಗೋಧಿಯನ್ನು ೧೨ ರೂ ದರದಲ್ಲಿ ಪಡಿತರ ಪದ್ಧತಿಯ ಮೂಲಕ ವಿತರಿಸಲಾಗುವುದು ಎಂದೂ ಅವರು ವಿವರಿಸಿದರು.
ಇದು ಕೇವಲ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಎಪಿಎಲ್ ಕಾರ್ಡುದಾರರಿಗೆ ಮಾತ್ರ ಅನ್ವಯವಾಗುತ್ತದೆ ಎಂದ ಅವರು, ಮಾರುಕಟ್ಟೆಯಲ್ಲಿ ಅಕ್ಕಿ ಹಾಗೂ ಗೋಧಿ ಬೆಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಇದಕ್ಕಾಗಿ ೮೬,೨೬೬ ಮೆಟ್ರಿಕ್ ಟನ್ ಅಕ್ಕಿ ಹಾಗೂ ೮೧೦೪ ಮೆಟ್ರಕ್ ಟನ್ ಗೋಧಿಯನ್ನು ಪಡಿತರ ಅಂಗಡಿಗಳಿಗೆ ನೀಡಲಾಗುವುದು ಎಂದೂ ಅವರು ಹೇಳಿದರು.
ನಗರ ಹಾಗೂ ಪಟ್ಟಣ ಪ್ರದೇಶಗಳ ಒಟ್ಟು ೫೨.೯೭ ಲಕ್ಷ ಕಾರ್ಡುದಾರರು ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದ ಅವರು,ಪ್ರಸಕ್ತ ನಮ್ಮಲ್ಲಿರುವ ಅಕ್ಕಿ ದಾಸ್ತಾನಿನ ಪ್ರಮಾಣ ಮುಂದಿನ ಎರಡು ತಿಂಗಳ ಅಗತ್ಯವನ್ನು ಪೂರೈಸಲಿದೆ ಎಂದು ಹೇಳಿದರು.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಹೇಳಿಕೆಯಿಂದಲೇ ಮಾರುಕಟ್ಟೆಯಲ್ಲಿ ಆಹಾತರ ಧಾನ್ಯಗಳ ಬೆಲೆ ಏರಿಕೆಯಾಗುತ್ತದೆಂಬ ಆತಂಕ ಸೃಷ್ಟಿಯಾಯಿತು ಎಂದು ಟೀಕಿಸಿದ ಅವರು,ಅಕ್ಕಿ,ಸಕ್ಕರೆ,ಗೋಧಿ,ಜೋಳ ಹಾಗೂ ಈರುಳ್ಳಿ ಸೇರಿದಂತೆ ಹಲವು ಆಹಾರ ಪದಾರ್ಥಗಳ ಕೊರತೆ ಇದೆ ಎಂದು ಅವರು ಹೇಳುತ್ತಾರೆ.ಅವರ ಈ ಹೇಳಿಕೆಯಿಂದ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.
ನನಗೆ ಅವರ ಬಗ್ಗೆ ಗೌರವವಿದೆ.ಆದರೆ ಅವರ ಈ ಹೇಳಿಕೆ ಸರಿಯಲ್ಲ ಎಂದ ಅವರು,ಪ್ರಧಾನಿಯವರು ಮುಂಬರುವ ಫೆಬ್ರವರಿ ಆರರಂದು ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.ಆ ಸಭೆಯಲ್ಲಿ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದರು.