ಪಂ.ಬಂಗಾಳ : ಮಾವೋವಾದಿ ಹಿಂಸಕಾಂಡದಲ್ಲಿ ಬಲಿಯಾದವರು ರಕ್ತಪಾತದ ಬೆಲೆ ತೆತ್ತು, ಮಾನವ ಜೀವಗಳ ಬಲಿಗೊಟ್ಟು, ಭಯೋತ್ಪಾದನೆ ಮತ್ತು ಅರಾಜಕತೆಯನ್ನು ಹರಡಿ ಶಾಂತಿಗೆ ಮತ್ತು ಸಾಮಾನ್ಯ ಸ್ಥಿತಿಗೆ ಹಾಗೂ ಭಾರತದ ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುವ ಕೃತ್ಯ, ದುಷ್ಟ ಚುನಾವಣಾ ಅಜೆಂಡಾ ಸಫಲವಾಗಲು ನಮ್ಮ ದೇಶದ ಹಿತದ ಮತ್ತು ನಮ್ಮ ಜನತೆಯ ಭವಿಷ್ಯದ ದೃಷ್ಟಿಯಿಂದ ಬಿಡಲಾಗದು.ಮಾವೋವಾದಿಗಳು ಪಶ್ಚಿಮ ಬಂಗಾಲದ ಪಶ್ಚಿಮ ಮಿದ್ನಾಪುರದ ಸಿಲ್ದಾದಲ್ಲಿ ಈಸ್ಟ್ ಫ್ರಂಟಿಯರ್ ರೈಫಲ್ಸ್ (ಇಎಫ್ಆರ್) ಶಿಬಿರದ ಮೇಲೆ ದಾಳಿ ಮಾಡಿ ಹಿಂಸಾಕಾಂಡವನ್ನೇ ಹರಿಯಬಿಟ್ಟಿದ್ದಾರೆ. ದಾಳಿಯ ವೇಳೆ ಶಿಬಿರದಲ್ಲಿದ್ದ 36 ಸೈನಿಕರಲ್ಲಿ 24 ಮಂದಿಯ ಸಾಮೂಹಿಕ ಹತ್ಯಾಕಾಂಡ ನಡೆದಿದೆ, ಏಳು ಮಂದಿ ಗಾಯಗೊಂಡಿದ್ದಾರೆ. ಆ ಪ್ರದೇಶದಲ್ಲಿ ಭಯೋತ್ಪಾದನೆ ನಡೆಸುವುದಲ್ಲದೆ ಶಸ್ತ್ರಾಗಾರವನ್ನು ಲೂಟಿ ಮಾಡುವುದು ಮತ್ತು ಅಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿಯನ್ನು ಮತ್ತೆ ನೆಲೆಗೊಳಿಸಲು ಕೇಂದ್ರೀಯ ಮತ್ತು ರಾಜ್ಯ ಪಡೆಗಳು ನಡೆಸುವ ಜಂಟಿ ಕಾರ್ಯಾಚರಣೆಗಳನ್ನೆಲ್ಲಾ ಕಡೆಗಣಿಸುತ್ತೇವೆ ಎಂದು ಯಾವುದೇ ಮುಲಾಜಿಲ್ಲದ ರಕ್ತ-ಸಿಕ್ತ ಹೇಳಿಕೆಯನ್ನು ಪ್ರಸ್ತುತಪಡಿಸುವುದು ಇದರ ಪ್ರಧಾನ ಉದ್ದೇಶವಿರುವಂತೆ ಕಾಣುತ್ತದೆ. ಸುಮಾರು 40 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮಾವೋವಾದಿಗಳು ಲೂಟಿ ಮಾಡಿದ್ದಾರೆ.ಈ ದಾಳಿ ನಡೆದದ್ದು ಅಲ್ಲಿಯ ವಾರದ ಸಂತೆಯ ದಿನ-ನಡು ಹಗಲಿನಲ್ಲೇ. ಶಿಬಿರದ ಬಳಿಯೇ ಸಂತೆ ನಡೆಯುತ್ತಿತ್ತು. ಸಂತೆಯಲ್ಲಿ ವಾರದ ಖರೀದಿಗೆಂದು ಸಾವಿರಾರು ಮಂದಿ ನೆರೆದಿದ್ದುದರಿಂದ ಪ್ರತಿದಾಳಿ ನಡೆಸಿದರೆ ಅಪಾರ ಸಾವು ನೋವುಗಳಾಗಬಹುದು ಎಂಬ ಭಯದಿಂದ ಸೈನಿಕರು ಪ್ರತಿದಾಳಿ ನಡೆಸಲಾಗಲಿಲ್ಲ ಎಂದು ಪಶ್ಚಿಮ ಬಂಗಾಲ ಪೋಲೀಸ್ ಮಹಾನಿರ್ದೇಶಕರು ಹೇಳಿದ್ದಾರೆ. ಗುಪ್ತ ಮಾಹಿತಿಯ ಅಭಾವದಿಂದ ಅಥವ ಬೇರೆ ಯಾವುದೇ ಕಾರಣದಿಂದ ಇದನ್ನು ತಡೆಯಲಾಗಲಿಲ್ಲವೆ ಎಂದು ಕಂಡು ಹಿಡಿಯಲು ಪಶ್ಚಿಮ ಬಂಗಾಲ ಸರಕಾರ ಅಧಿಕೃತ ತನಿಖೆಗೆ ಆದೇಶ ನೀಡಿದೆ. ಈ ದಾಳಿ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಅರಾಜಕತೆ ಹರಡುತ್ತಿರುವ ಬುದ್ಧಿಹೀನ ಹಿಂಸಾಚಾರವನ್ನು ಕೊನೆಗೊಳಿಸಲೇ ಬೇಕೆಂಬ ದೃಢ ನಿರ್ಧಾರ ದ್ವಿಗುಣಗೊಂಡಿದೆ.ಮಾವೋವಾದಿಗಳ ಈ `ಉತ್ತರ'ಫೆಬ್ರುವರಿ 9ರಂದು ಕೇಂದ್ರ ಗೃಹಮಂತ್ರಿಗಳು ಪಶ್ಚಿಮ ಬಂಗಾಲ, ಒರಿಸ್ಸಾ, ಜಾರ್ಖಂಡ, ಮತ್ತು ಬಿಹಾರದ ಮುಖ್ಯಮಂತ್ರಿಗಳ ಸಭೆಯನ್ನು ಕೊಲ್ಕತ್ತಾದಲ್ಲಿ ಕರೆದಿದ್ದರು. ಮಾವೋವಾದಿ ಹಿಂಸಾಚಾರವನ್ನು ಎದುರಿಸಲು ಸಂಬಂಧಪಟ್ಟ ರಾಜ್ಯಗಳ ಪಡೆಗಳೊಂದಿಗೆ ಕೇಂದ್ರೀಯ ಪಡೆಗಳು ಆರಂಭಿಸಬೇಕಾದ ಜಂಟಿ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಲು ಇದನ್ನು ಕರೆಯಲಾಗಿತ್ತು. ಮಾವೊವಾದಿ ತಂಡಗಳು ಒಂದು ರಾಜ್ಯದಲ್ಲಿ ದಾಳಿ ನಡೆಸಿ ಪೋಲೀಸ್ ಮತ್ತು ಅರೆಸೈನಿಕ ಪಡೆಗಳಿಂದ ತಪ್ಪಿಸಿಕೊಳ್ಳಲು ಪಕ್ಕದ ರಾಜ್ಯಕ್ಕೆ ಗಡಿ ದಾಟಿ ಹೋಗುತ್ತಿವೆ ಎಂಬುದೀಗ ಸ್ಪಷ್ಟವಾಗಿದೆ. ಕಾನೂನು-ವ್ಯವಸ್ಥೆ ರಾಜ್ಯ ವಿಷಯವಾದ್ದರಿಂದ ಒಂದು ರಾಜ್ಯದ ಪಡೆಗಳು ಇನ್ನೊಂದು ರಾಜ್ಯದಲ್ಲಿ ಸ್ಪಷ್ಟ ಅನುಮತಿಯಿಲ್ಲದೆ ಕಾರ್ಯಚರಣೆ ನಡೆಸುವಂತಿಲ್ಲ. ಮಾವೋವಾದಿಗಳು ತಮ್ಮ ಹಿಂಸಾಕೃತ್ಯಗಳನ್ನು ಎಸಗಲು ಇದರ ಉಪಯೋಗ ಪಡೆಯುವುದನ್ನು ತಪ್ಪಿಸಲು ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಸಂಯೋಜನೆಯಿಂದ ಈ ಪಿಡುಗನ್ನು ಎದುರಿಸುವುದು ಅಗತ್ಯವಾಗಿತ್ತು. ಇಎಫ್ಆರ್ ಶಿಬಿರದ ಮೇಲಿನ ಈ ದಾಳಿಯ ನಂತರ ಮಾವೋವಾದಿ ತಂಡಗಳು ಜಾರ್ಖಂಡದಲ್ಲಿರುವ ತಮ್ಮ ಅಡಗುತಾಣಗಳಿಗೆ ಮರಳಿದವು ಎಂದು ಮಾಧ್ಯಮಗಳ ವರದಿಗಳಿಂದ ತಿಳಿದು ಬರುತ್ತದೆ.ಫೆಬ್ರುವರಿ 9ರ ಸಭೆಯ ನಂತರ ಕೇಂದ್ರ ಗೃಹಮಂತ್ರಿಗಳು ಮಾವೋವಾದಿಗಳಿಗೆ `ನೀವು ಹಿಂಸಾಚಾರ ನಿಲ್ಲಿಸಿದಿರೆಂದರೆ ನಾವು ನಿಮ್ಮೊಂದಿಗೆ ಮಾತಾಡಲು ಸಿದ್ಧ' ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. `ಅವರು ನನ್ನ ಹಿಂದಿನ ಮನವಿಗಳನ್ನು ತಿರಸ್ಕರಿಸಿದ್ದರಿಂದ ನಾವು ಕಾಯರ್ಾ ಚರಣೆಗಳನ್ನು ಮುಂದುವರೆಸಲೇಬೇಕಾಯಿತು. ಮತ್ತೆ ಮನವಿಯನ್ನು ತಿರಸ್ಕರಿಸಿದರೆ ಮತ್ತೆ ಕಾರ್ಯಾಚರಣೆಗಳನ್ನು ಆರಂಭಿಸುತ್ತೇವೆ' ಎಂದು ಅವರು ಹೇಳಿದ್ದಾರೆ. ಇಎಫ್ಆರ್ ಶಿಬಿರದ ಮೇಲೆ ಈ ಘಾತುಕ ದಾಳಿಯ ಮೂಲಕ ಮಾವೋವಾದಿಗಳು ಈ ಮನವಿಯನ್ನೂ ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ. ಪ್ರಧಾನ ಮಂತ್ರಿಗಳು ಈ ಹಿಂದೆ ಹಲವು ಬಾರಿ ಸಂಸತ್ತಿನಲ್ಲೂ, ಸಾರ್ವಜನಿಕವಾಗಿಯೂ ಮಾವೋವಾದಿ ಹಿಂಸಾಚಾರ ಭಾರತದ ಆಂತರಿಕ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆ ಎಂದಿದ್ದಾರೆ. ದೇಶದ ಮತ್ತು ಜನತೆಯ ಹಿತದೃಷ್ಟಿಯಿಂದ ಇದನ್ನು ನೇರವಾಗಿ ಎದುರಿಸಬೇಕಾದ ಸಮಯವೀಗ ಬಂದಿದೆ.
ತೃಣಮೂಲಿಗಳ ಸರಸ
ಇಷ್ಟಾದರೂ ತೃಣಮೂಲ ಕಾಂಗ್ರೆಸ್ ಈಗಲೂ ಮಾವೋವಾದಿಗಳೊಂದಿಗೆ ಸರಸ ಮುಂದುವರೆಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಏಕೆಂದರೆ ಸ್ವತಃ ಮಾವೋವಾದಿ ಮುಖಂಡರೇ ಈ ದಾಳಿಯನ್ನು ತಾವೇ ನಡೆಸಿದ್ದು, ವಿವಿಧ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರದ ಜಂಟಿ ಕಾರ್ಯಾಚರಣೆಗಳಿಗೆ ಇದು ತಮ್ಮ ಉತ್ತರ ಎಂದು ಸಾರ್ವಜನಿಕವಾಗಿಯೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದರೂ ತೃಣಮೂಲ ಕಾಂಗ್ರೆಸಿನ ಮುಖ್ಯಸ್ಥೆ ಈ ದಾಳಿಗೆ ಮಾವೋವಾದಿಗಳು ಹೊಣೆ ಎಂದು ಹೆಸರಿಸಲು ಇಷ್ಟಪಡುತ್ತಿಲ್ಲ. ತೃಣಮೂಲ ಕಾಂಗ್ರೆಸಿನ ಈ ಮೆದು ನಿಲುವಿಗೆ ಮಾವೋವಾದಿಗಳೂ ಕತಜ್ಞತೆಯಿಂದ ಸ್ಪಂದಿಸಿದ್ದಾರೆ. `ಮಾವೋವಾದಿಗಳು ತೃಣಮೂಲ ಕಾಂಗ್ರೆಸಿನ ಮೇಲೆ ಗುರಿಯಿಡುವುದಿಲ್ಲ, ದಾಳಿ ಮಾಡುವುದಿಲ್ಲ' ಎಂದು ಅವರ ವಕ್ತಾರ ಮಾಧ್ಯಮಗಳ ಕೆಲವು ವಿಭಾಗಗಳಿಗೆ ತಿಳಿಸಿದ್ದಾನೆ. ಈ ಇಎಫ್ಆರ್ ಶಿಬಿರದ ಮೇಲಿನ ದಾಳಿಯ ಎರಡು ದಿನಗಳ ಮೊದಲು ಪಶ್ಚಿಮ ಮಿದ್ನಾಪುರದ ಮಾವೋವಾದಿ ಮುಖಂಡ `ತೃಣಮೂಲ ನಿರ್ವಾಹಕರ ಮೇಲೆ ಯಾವುದೇ ರೀತಿಯ ಕಾರ್ಯಾಚರಣೆ ಅಥವಾ ಶಿಕ್ಷೆಯಿರುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ' ಎಂದು ಪ್ರಕಟಿಸಿದ. ಕೆಲವು ದಿನಗಳ ಹಿಂದೆ ಮಾವೋವಾದಿ ಮುಖಂಡ ಕಿಶನ್ ಜಿ ತೃಣಮೂಲ ಕಾಂಗ್ರೆಸಿಗೆ ಬೆಂಬಲ ನೀಡುತ್ತಾ ಪಶ್ಚಿಮ ಮಿದ್ನಾಪುರದಿಂದ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುವ ತೃಣಮೂಲ ಮುಖಂಡರ ಯತ್ನವನ್ನು ಸ್ವಾಗತಿಸಿದ್ದರು ಎಂದು ಫೆಬ್ರುವರಿ 17ರ `ಏಶ್ಯನ್ ಏಜ್' ಪತ್ರಿಕೆ ವರದಿ ಮಾಡಿತ್ತು. ಈಗಂತೂ ತೃಣಮೂಲ ಕಾಂಗ್ರೆಸ್ ಮಾವೋವಾದಿಗಳ ವಿರುದ್ಧ ಭದ್ರತಾ ಪಡೆಗಳ ಎಲ್ಲಾ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ಬಹಿರಂಗವಾಗಿಯೇ ಕರೆ ನೀಡಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಮೂಲಕ ಅವರು ಜನಗಳಲ್ಲಿ ಭಯ ಹುಟ್ಟಿಸುವುದನ್ನು ಮುಂದುವರೆಸಿ ಹಿಂಸಾಚಾರಗಳ ಮೂಲಕ ಅವರು ಎಡರಂಗವನ್ನು 2011ರ ವಿಧಾನಸಭ ಚುನಾವಣೆಗಳಲ್ಲಿ ವಿರೋಧಿಸುವಂತೆ ಬೆದರಿಸಬಹುದು ಎಂಬುದು ಅವರ ಲೆಕ್ಕಾಚಾರ.
ಸ್ವಲ್ಪ ಮೊದಲು ಕೇಂದ್ರ ಗೃಹಮಂತ್ರಿಗಳು ತೃಣಮೂಲ ಕಾಂಗ್ರೆಸಿನ ಆಗ್ರಹಕ್ಕೆ ಸಹಾನುಭೂತಿ ವ್ಯಕ್ತಪಡಿಸಿದಂತೆ ಕಂಡಿತ್ತು. ಫೆಬ್ರುವರಿ 9 ರಂದು ಅವರು `ಆಕೆಗೆ ಜಂಟಿ ಕಾರ್ಯಾಚರಣೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂದು ಆತಂಕವಿದೆ. ಇದು ನೈಜ ಆತಂಕವೇ. ನಾವು ಅವರ ಆತಂಕವನ್ನು ಗಮನಿಸಬೇಕು ಮತ್ತು ಅದರಂತೆ ವರ್ತಿಸಬೇಕು' ಎಂದಿದ್ದರು. ಇತ್ತೀಚಿನ ಈ ಘಾತುಕ ದಾಳಿಯಿಂದ ಮಾವೋವಾದಿಗಳು ತಮ್ಮ ಹಿಂಸಾಚಾರವನ್ನು ಶಾಶ್ವತಗೊಳಿಸಲು ಕಟಿಬದ್ಧರಾಗಿದ್ದಾರೆ, ತೃಣಮೂಲ ಕಾಂಗ್ರೆಸಿನ ನಿಲುವಿನಿಂದಾಗಿ ಅವರಿಗೆ ತಮ್ಮ ಮಾರಣಾಂತಿಕ ದಾಳಿಗಳನ್ನು ಮುಂದುವರೆಸುವಲ್ಲಿ ಬಹಳಷ್ಟು ಸಮಾಧಾನ ಮತ್ತು ತೃಪ್ತಿ ದೊರಕಿದೆ ಎಂಬುದು ಸ್ಪಷ್ಟ. ಒಬ್ಬ ಕೇಂದ್ರ ಮಂತ್ರಿ ಮಾವೋವಾದಿ ಹಿಂಸಾಚಾರ ಭಾರತದ ಆಂತರಿಕ ಭದ್ರತೆಗೆ ಅತ್ಯಂತ ಗಂಭೀರ ಬೆದರಿಕೆ ಎಂಬ ಪ್ರಧಾನ ಮಂತ್ರಿಗಳ ಸಾರ್ವಜನಿಕ ಹೇಳಿಕೆಗಳನ್ನೇ ಉಲ್ಲಂಘಿಸಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಪಕ್ಷ ಮತ್ತು ಯುಪಿಎ-2 ಜನಗಳಿಗೆ ವಿವರಿಸಬೇಕಾಗಿದೆ.ದುಷ್ಟ ಚುನಾವಣಾ ಅಜೆಂಡಾ
ಒಂದೆಡೆ ತೃಣಮೂಲಿಗಳ ವಿರುದ್ಧ ಯಾವುದೇ ಕ್ರಮ ಅಥವಾ ಶಿಕ್ಷೆ ಕೈಗೊಳ್ಳವುದಿಲ್ಲ ಎಂದು ನಿರ್ಧರಿಸಿರುವ ಮಾವೋವಾದಿಗಳು ಕಳೆದ ಸಾರ್ವತ್ರಿಕ ಚುನಾವಣೆಗಳ ನಂತರ ಇದುವರೆಗೆ 168 ಸಿಪಿಐ(ಎಂ) ಕಾರ್ಯಕರ್ತರ ಕಗ್ಗೊಲೆ ನಡೆಸಿದ್ದಾರೆ. ಈ ಎಲ್ಲಾ ಸಂಗಾತಿಗಳು ಮಾವೋವಾದಿಗಳು ತಾವು ಯಾವ ವರ್ಗಗಳ ಹಿತಗಳನ್ನು ಎತ್ತಿ ಹಿಡಿಯುತ್ತೇವೆ ಎಂದು ಹೇಳುತ್ತಿದ್ದಾರೋ ಅವೇ ಶೋಷಿತ, ದಮನಿತ ವರ್ಗಗಳಿಗೆ ಸೇರಿದವರೇ. ಸಿಪಿಐ(ಎಂ)ನ ಪ್ರಮುಖ ಕಾರ್ಯಕರ್ತರ ಮೇಲೆ ಗುರಿಯಿಟ್ಟು ಕೊಲ್ಲುವುದು ಸಾರ್ವಜನಿಕರನ್ನು ಭಯಭೀತಗೊಳಿಸಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸಿನ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸುವ ಆಟದ ಭಾಗ. ತೃಣಮೂಲ ಕಾಂಗ್ರೆಸ್ ಅಪಾರ ಪ್ರಮಾಣದಲ್ಲಿ ಮಾನವ ಜೀವಗಳ ಬಲಿಗೊಟ್ಟು, ಅರಾಜಕತೆ ಹರಡಿ ತನ್ನ ಇಂತಹ ಒಂದು ದುಷ್ಟ ಚುನಾವಣಾ ಅಜೆಂಡಾವನ್ನು ಅನುಸರಿಸುತ್ತಿದೆ.
ಈ ಹಿಂದೆ ಜನವರಿ 15ರಂದು ತೃಣಮೂಲ ಕಾಂಗ್ರೆಸಿನ ಮುಖ್ಯಸ್ಥೆ ತಾನು ಮಾವೋವಾದಿಗಳಿಗೆ ಮಾತುಕತೆಯ ಮೇಜಿಗೆ ಬರಲು ಏಳು ದಿನಗಳ ಗಡುವು ಕೊಡುವುದಾಗಿ ಒಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು.`ಇಲ್ಲವಾದರೆ ಶಾಂತಿ ಮತ್ತು ಕಾನೂನಿನ ಆಳ್ವಿಕೆಯನ್ನು ಮತ್ತೆ ನೆಲೆಗೊಳಿಸಲು ಪಾದಯಾತ್ರೆ ಅರಂಭಿಸುತ್ತೇನೆ' ಎಂದಿದ್ದರು. ನಂತರ ಆರು ವಾರಗಳೇ ಕಳೆದರೂ ಯಾವ ಪಾದಯಾತ್ರೆಯನ್ನೂ ಕೈಗೊಳ್ಳಲಿಲ್ಲ. ಅದು ಕೇವಲ ಸಾರ್ವಜನಿಕ ತೋರಿಕೆಗೆ ಅಷ್ಟೇ ಎಂಬುದು ಸ್ಪಷ್ಟ. `ಅಗತ್ಯ ಬಿದ್ದರೆ ನಾನು ನಿಮ್ಮ ಬೇಡಿಕೆಗಳನ್ನು, ಲಾಲ್ಗಡ್ನಿಂದ ಜಂಟಿ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂಬ ಬೇಡಿಕೆಯನ್ನು ಕೂಡಾ ಕೇಂದ್ರ ಸರಕಾರ ಒಪ್ಪಿಕೊಳ್ಳುವಂತೆ ಮಾಡಲು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ' ಎಂದೂ ಅದೇ ಸಭೆಯಲ್ಲಿ ಹೇಳಿರುವುದು (ಟೆಲಿಗ್ರಾಫ್, ಜನವರಿ 16) ಅವರ ನಿಜ ಹುನ್ನಾರವನ್ನು ಹೊರಗೆಡಹಿತ್ತು.ಈ ರೀತಿ ರಕ್ತಪಾತದ ಬೆಲೆ ತೆತ್ತು, ಮಾನವ ಜೀವಗಳ ಬಲಿಗೊಟ್ಟು, ಭಯೋತ್ಪಾದನೆ ಮತ್ತು ಅರಾಜಕತೆಯನ್ನು ಹರಡಿ ಶಾಂತಿಗೆ ಮತ್ತು ಸಾಮಾನ್ಯ ಸ್ಥಿತಿಗೆ ಹಾಗೂ ಭಾರತದ ಆಂತರಿಕ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುವ ಕೃತ್ಯ ಸಫಲವಾಗಲು ನಮ್ಮ ದೇಶದ ಹಿತ ಮತ್ತು ನಮ್ಮ ಜನತೆಯ ಭವಿಷ್ಯದ ದೃಷ್ಟಿಯಿಂದ ಬಿಡಲಾಗದು. ಈ ಪ್ರದೇಶಗಳಿಗೆ ಶಾಂತಿ ಮತ್ತು ಸಾಮಾನ್ಯ ಸ್ಥಿತಿ ಮರಳುವಂತಾಗಲು ಮತ್ತು ಆಂತರಿಕ ಭದ್ರತೆಗೆ ಬೆದರಿಕೆಗಳನ್ನು ನೇರವಾಗಿ ಎದುರಿಸಲು ಕೇಂದ್ರೀಯ ಪಡೆಗಳೊಡನೆ ಜಂಟಿ ಕಾರ್ಯಾಚರಣೆಗಳನ್ನು ಮತ್ತು ಸಂಬಂಧಪಟ್ಟ ನಾಲ್ಕು ರಾಜ್ಯಗಳ ಸಂಯೋಜಿತ ಕ್ರಿಯೆಗಳನ್ನು ತೀವ್ರಗೊಳಿಸಲೇಬೇಕು.
ಸೌಜನ್ಯ: ಜನಶಕ್ತಿ