ಭಟ್ಕಳ: ಯಾವುದೇ ಸಂದರ್ಭದಲ್ಲೂ ದಿಢೀರ್ ಆಗಿ ಯಾವುದೇ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸುತ್ತೇನೆ. ಹೀಗೆ ಬಂದ ಸಂದರ್ಭದಲ್ಲಿ ಕಡತಗಳು ವಿಲೇವಾರಿ ಆಗದೇ ಬಾಕಿ ಇದ್ದಲ್ಲಿ, ಜನರ ಕೆಲಸ ಆಗಲಿಲ್ಲ ಎಂದು ದೂರು ಕೇಳಿ ಬಂದಲ್ಲಿ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕುಂಟವಾಣಿ ಅಥವಾ ಮಾರುಕೇರಿಗೆ ಸ್ಥಳಾಂತರಿಸಿದರೆ ಜನತೆಗೆ ಅನುಕೂಲವಾಗಲಿದೆ ಎಂದರಲ್ಲದೇ, ಸರಕಾರಿ ಆಸ್ಪತ್ರೆಗೆ ಆಯುರ್ವೇದ ಔಷಧಿ ಬರುತ್ತಿಲ್ಲವಾಗಿದ್ದು, ಔಷಧಿ ಬರುವ ವ್ಯವಸ್ಥೆ ಮಾಡಬೇಕೆಂದರು. ಪಶು ಆಸ್ಪತ್ರೆಯಲ್ಲಿ ೮ ವೈದ್ಯರ ಹುದ್ದೆ ಇರಬೇಕಾಗಿದ್ದು, ೭ ಹುದ್ದೆ ಖಾಲಿ ಇದೆ. ಗ್ರಾಮಾಂತರ ಭಾಗದಲ್ಲಿರುವ ಪಶು ಆಸ್ಪತ್ರೆಯಲ್ಲೂ ಯಾವುದೇ ವೈದ್ಯರು ಇಲ್ಲವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಯಾವುದೇ ಕಾರಣಕ್ಕೂ ಭಟ್ಕಳ ಕ್ಷೇತ್ರದಲ್ಲಿ ಪವರ್ ಕಟ್ ಮಾಡುವುದು ಬೇಡ ಎಂದು ಹೆಸ್ಕಾಂ ಅಭಿಯಂತರರಿಗೆ ಸಚಿವರು ಸೂಚಿಸಿದರು. ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಸ್ಸುಗಳನ್ನು ಓಡಿಸಬೇಕು. ೨೦೧೭ರಲ್ಲಿ ಇದ್ದಂತೆ ಬಸ್ಸುಗಳನ್ನೂ ಓಡಿಸಬೇಕು. ಗ್ರಾಮಾಂತರ ಭಾಗ ಸೇರಿದಂತೆ ಮುಂಡಳ್ಳಿ-ಅಳ್ವೆಕೋಡಿಗೆ ಓಡಿಸುವ ಬಸ್ಸಿನಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಸಚಿವರು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.
ಒಂದೇ ವರ್ಷದಲ್ಲಿ ಅಧಿಕಾರಿಗಳು ವರ್ಗಾವಣೆ ಮಾಡಿಕೊಂಡಿರುವುದಕ್ಕೆ ಕಾರಣ ಹೇಳಿ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ನಿಮ್ಮಿಂದಲೇ ಅಧಿಕಾರಿಗಳು ವರ್ಗ ಮಾಡಿಕೊಂಡು ಹೋಗಿದ್ದಾರೆ ಎಂದರು. ಇದಕ್ಕೆ ಸಮಜಾಯಿಸಿ ನೀಡಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಬೀಳಗಿ, ನನ್ನ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡಲಾಗಿದೆ. ಇಲಾಖೆಯ ನೌಕರರ ವರ್ಗಾವಣೆಯಲ್ಲಿ ನನ್ನ ಪಾತ್ರ ಇಲ್ಲ. ನಾನೇನೂ ತಪ್ಪು ಮಾಡಿಲ್ಲ. ನಾನು ಪ್ರಾಮಾಣಿಕ ಅಧಿಕಾರಿ, ಸರ್ಕಾರದ ಆದೇಶದ ಪ್ರಕಾರ ಕೆಲಸ ಮಾಡುತ್ತಿದ್ದೇನೆ ಎಂದರು.
ಕಳೆದ ಮೂರು ವರ್ಷಗಳಿಂದ ಪಡಿತರ ಚೀಟಿ ವಿತರಿಸದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಪಡಿತರ ಚೀಟಗೆ ಸಂಬಂಧಿಸಿದಂತೆ ತ್ವರಿತವಾಗಿ ಕೆಲಸ ಮಾಡಬೇಕು. ಜನತೆಗೆ ತೊಂದರೆ ಆದರೆ ಸಹಿಸುವುದಿಲ್ಲ ಎಂದು ತಹಸೀಲ್ದಾರರಿಗೆ ಸೂಚಿಸಿದರು.
ಭಟ್ಕಳದಲ್ಲಿ ಗಾಂಜಾ, ಡ್ರಗ್ಸ, ಆಫೀಮು ಸೇವನೆ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಡಿವೈಎಸ್ಪಿ ಶ್ರೀಕಾಂತ ಅವರ ಬಳಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಗಾಂಜಾ, ಡ್ರಗ್ಸ ಪ್ರಕರಣ ಜಾಸ್ತಿಯಾಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಆರೋಪಿಗಳನ್ನು ಬಂಧಿಸಿದರಷ್ಟೇ ಸಾಲದು. ಇದರ ಹಿಂದೆ ಯಾರ ಕೈವಾಡ ಇದೆ. ಇವೆಲ್ಲವೂ ಎಲ್ಲಿಂದ ಸರಬರಾಜು ಆಗುತ್ತದೆ ಎನ್ನುವುದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಂದು ಸೂಚಿಸಿದರು.
ಸಭೆಯಲ್ಲಿ ಎಸಿ ಡಾ. ನಯನಾ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಹಾಗೂ ಭಟ್ಕಳ ತಾ.ಪಂ. ಆಡಳಿತಾಧಿಕಾರಿ ಸತೀಶ, ಡಿವೈಎಸ್ಪಿ ಶ್ರೀಕಾಂತ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ತಹಸೀಲ್ದಾರ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.