ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಾಲಾ ಮಕ್ಕಳ ಸುರಕ್ಷತೆಗೆ ಸವಾಲೊಡ್ಡಿರುವ ಭಟ್ಕಳದ ಅಪೂರ್ಣ ಯುಜಿಡಿ ಕಾಮಗಾರಿ

ಶಾಲಾ ಮಕ್ಕಳ ಸುರಕ್ಷತೆಗೆ ಸವಾಲೊಡ್ಡಿರುವ ಭಟ್ಕಳದ ಅಪೂರ್ಣ ಯುಜಿಡಿ ಕಾಮಗಾರಿ

Sun, 25 Jun 2023 02:13:17  Office Staff   SOnews

ರಸ್ತೆ ದುರಸ್ತಿ ಕಾರ್ಯ ತುರ್ತಾಗಿ ಕೈಗೊಳ್ಳದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ನಾಗರೀಕ ಹೋರಾಟ ಸಮಿತಿ

ಭಟ್ಕಳ: ಭಟ್ಕಳ ನಗರ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡಿರುವ ಯುಜಿಡಿ(ಒಳಚರಂಡಿ) ಕಾಮಾಗಾರಿ ಎರಡು ಮಳೆಗಾಲ ಕಳೆದರೂ ಇದುವರೆಗೂ ಪೂರ್ಣವಾಗದೆ ಭಟ್ಕಳ ಹಾಗೂ ಜಾಲಿ ಪ.ಪಂ ವ್ಯಾಪ್ತಿಯಲ್ಲಿ ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸಿದೆ.

ಈ ಬಾರಿ ಮಳೆಗಾಲ ಸ್ವಲ್ಪ ತಡವಾಗಿ ಆರಂಭಗೊಂಡರೂ ಈಗದು ವೇಗಪಡೆದುಕೊಂಡಿದೆ. ಶುಕ್ರವಾರ ಮತ್ತು ಶನಿವಾರ ನಿರಂತರವಾಗಿ ಮಳೆ ಬೀಳುತ್ತಿದೆ. ಇದರಿಂದಾಗಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿನ ಹದಗೆಟ್ಟ ರಸ್ತೆಗಳು ಈ ಎರಡು ದಿನದ ಮಳೆಗೆ ಮತ್ತಷ್ಟು ಹದಗೆಟ್ಟು ಹೋಗಿದ್ದು ಶಾಲಾ ವಹಾನ ಸೇರಿದಂತೆ ಸಾರ್ವಜನಿಕರು ನಡೆದಾಡಲು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಶನಿವಾರ ಬೆಳಗಿನ ಜಾವ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ನಗರದ ಖಾಸಗಿ ಶಾಲಾ ವಾಹನವೊಂದು ಜಾಲಿ ಪಪಂ ವ್ಯಾಪ್ತಿಯ ಹಿಂದೂ ಕಾಲೋನಿಯ ಮುಝಮ್ಮಿಲ್ ಮಸೀದಿ ಬಳಿ ರಸ್ತೆಯಲ್ಲಿ ಎರಡು ಚಕ್ರಗಳು ನೆಲದಲ್ಲಿ ಹುದುಗಿಕೊಂಡಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಶಾಲಾ ಮಕ್ಕಳಿಗೆ ಇದರಿಂದಾಗಿ ತುಂಬ ತೊಂದರೆಯುಂಟಾಗಿದ್ದು ಆ ರಸ್ತೆಯಲ್ಲಿ ಯಾವುದೇ ವಹಾನಗಳು ಸಂಚರಿಸಲು ಭಯಪಡುವಂತಾಗಿದೆ. ಶಾಲಾ ವಹಾನ ಓಡಾಟ ಇಲ್ಲದೆ ಇರುವುದಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಈ ಅಪೂರ್ಣ ಕಾಮಗಾರಿಯೂ ದೊಡ್ಡ ಸವಾಲನ್ನು ಒಡ್ಡಿದಂತಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಆರಂಭವಾದ ಅಪೂರ್ಣ ಯುಜಿಡಿ ಯೋಜನೆ ವಿಳಂಬ ಹಾಗೂ ಅಸಮರ್ಪಕ ಪ್ರಗತಿಯಿಂದ ನಲುಗಿದ್ದು, ಪರಿಣಾಮವಾಗಿ, ಒಳಚರಂಡಿ ವ್ಯವಸ್ಥೆಯು ಅಪೂರ್ಣವಾಗಿಯೆ ಉಳಿದುಕೊಂಡಿದೆ. ಇದು ಮಳೆಗಾಲದಲ್ಲಿ ನೀರು ಮತ್ತು ಕೆಸರು ರಸ್ತೆಗಳಿಗೆ ಕಾರಣವಾಗುತ್ತಿದೆ. ಪಾದಚಾರಿಗಳಿಗೆ ಮತ್ತು ವಾಹನ ಚಾಲಕರಿಗೆ ಗಂಭೀರವಾದ ಸುರಕ್ಷತಾ ಅಪಾಯಗಳನ್ನು ಉಂಟುಮಾಡುತ್ತದೆ, ಅಪೂರ್ಣ ಯುಜಿಡಿ ಕಾಮಗಾರಿಯಿಂದಾಗಿ ರಸ್ತೆಯ ಮಧ್ಯಭಾಗದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದ್ದು ಇದರಿಂದಾಗಿ ವಹಾನಗಳು ನೆಲದಲ್ಲಿ ಹುದುಗಿಕೊಳ್ಳುತ್ತಿವೆ. ಶನಿವಾರ ಹಲವಾರು ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಟೆಂಪೋ ರಸ್ತೆಯಲ್ಲಿ ಹುದುಗಿಕೊಂಡಿದ್ದು,  ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಅಪೂರ್ಣ ಯುಜಿಡಿ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಳಂಬವು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಮಾತ್ರವಲ್ಲದೆ ಸಮುದಾಯದ ಯೋಗಕ್ಷೇಮಕ್ಕೆ ಧಕ್ಕೆ ತಂದಿದೆ ಎಂದು ಹೇಳುತ್ತಿದ್ದಾರೆ. ಇದಲ್ಲದೆ, ಶಾಲೆಯ ಟೆಂಪೋವನ್ನು ಒಳಗೊಂಡ ಘಟನೆಯು ಈ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗುವ ಮಕ್ಕಳಿಗೆ ಗಮನಾರ್ಹ ಅಪಾಯವನ್ನು ಎತ್ತಿ ತೋರಿಸುತ್ತಿದ್ದು ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

sk2.jpg

Satish Kumar Naik

ಈ ಕುರಿತಂತೆ ಭಟ್ಕಳದ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್, ಭಟ್ಕಳಲ್ಲಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಕಾಂಕ್ರೀಟ್ ರಸ್ತೆಯನ್ನು ಯುಜಿಡಿ ಕಾಮಗಾರಿ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಅಗೆದು ರಸ್ತೆಯನ್ನು ಹಾಳು ಮಾಡಿದ್ದಾರೆ. ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿರುವ ಈ ಒಳಚರಂಡಿ ಕಾಮಗಾರಿ ಕೇವಲ ಕಾಟಚಾರಕ್ಕೆ ನಿರ್ಮಾಣ ಮಾಡುವಂತೆ ತೋರುತ್ತಿದೆ. ತಾಲೂಕಿನ ಜಾಲಿ ಹಾಗೂ ನಗರ ಪ್ರದೇಶದಲ್ಲಿ ಕಾಂಕ್ರಿಟ್ ರಸ್ತೆ ಅಗೆದು ಅದರಲ್ಲಿ ಮಣ್ಣು ತುಂಬಿ ಹಾಗೆ ಬಿಟ್ಟು ಹೋಗಿದ್ದರಿಂದಾಗಿ ಶಾಲಾ ವಹಾನಗಳು ಸೇರಿದಂತೆ ಎಲ್ಲ ರೀತಿಯ ವಹಾನಗಳು ಮಣ್ಣಿನಲ್ಲಿ ಹುದುಗಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿ ಆದಷ್ಟು ಬೇಗನೆ ಪೂರ್ಣಗೊಳಿಸದೆ ಇದ್ದಲ್ಲಿ ನಾಗರೀಕ ಹೋರಾಟ ಸಮಿತಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಭಟ್ಕಳದ ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಸರಿಪಡಿಸಲು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಕಾರ್ಯಚರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ವರದಿ: ಎಂ.ಆರ್.ಮಾನ್ವಿ

Share: