ಭಟ್ಕಳ: ನಗರದ ಸಾಗರ ರಸ್ತೆಯಲ್ಲಿರುವ ನಾಯಕ್ ಹೆಲ್ತ್ ಸೆಂಟರ್ನಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಭಟ್ಕಳದಲ್ಲಿ ಮಾನಸಿಕ ರೋಗದ ಚಿಕಿತ್ಸೆಗೆ ಪ್ರತಿ ಮಂಗಳವಾರ ಅನುವು ಮಾಡಿಕೊಡುವ ಮೂಲಕ ಇಲ್ಲಿನ ನಾಯಕ್ ಹೆಲ್ತ್ ಸೆಂಟರಿನ ಡಾ. ವಿಶ್ವನಾಥ ನಾಯಕ ಉತ್ತಮ ಕಾರ್ಯ ಮಾಡಿದ್ದಾರೆ. ಇದರಿಂದ ದೂರದ ಕುಂದಾಪುರ ಇಲ್ಲವೇ ಹೊನ್ನಾವರಕ್ಕೆ ಹೋಗುವುದನ್ನು ತಪ್ಪಿಸಿದಂತಾಗಿದೆ ಎಂದರು.
ಇಂದು ನಮ್ಮ ಶೈಕ್ಷಣಿಕ ಪದ್ಧತಿಯು ಚಿಕ್ಕ ಮಕ್ಕಳಿಗೆ ಒತ್ತಡದ ಬದುಕಾಗಿ ಬದಲಾಗುತ್ತಿದೆ. ಶಾಲೆಯಲ್ಲಿ, ಮನೆಯಲ್ಲಿ ಅವರಿಗೆ ಹೇರುವ ಒತ್ತಡವು ತಂದೆ ತಾಯಿಯರನ್ನೇ ದ್ವೇಷ ಮಾಡುವಲ್ಲಿಯ ತನಕ ಬಂದು ಬಿಡುತ್ತದೆ. ಅನೇಕ ಮಕ್ಕಳಿಗೆ ಮನೆಯಲ್ಲಿ ಓದುವ ಒತ್ತಡಕ್ಕೆ ತಮ್ಮ ಪಾಲಕರೇ ಕಾರಣ ಎನ್ನುವುದು ಮನಸ್ಸಿಗೆ ಬಂದಾಗ ಅವರು ಅನಗತ್ಯವಾಗಿ ಪಾಲಕರ ಮೇಲೆ ರೇಗುತ್ತಾರೆ ಎಂದ ಅವರು ಮಕ್ಕಳಿಗೆ ಪಾಠ ಮಾತ್ರವಲ್ಲ ಅವರ ವಯಸ್ಸಿಗೆ ತಕ್ಕಂತೆ ಆಟಕ್ಕೆ ಅವಕಾಶ ನೀಡಬೇಕಾಗಿದೆ ಎಂದರು.
ಮಾನಸಿಕ ಆರೋಗ್ಯ ಕೆಟ್ಟಿದ್ದರೂ ಸಹ ವೈದ್ಯರನ್ನು ಸಂಪರ್ಕಿಸಲು ಜನ ಹಿಂಜರಿಯುತ್ತಾರೆ. ಇದಕ್ಕೆ ಸಾಮಾಜಿಕ ಕಟ್ಟುಪಾಡುಗಳೇ ಕಾರಣವಾಗಿದ್ದು ಆದರೆ ಹಿಂದಿನAತೆ ಇಂದು ಇಲ್ಲ, ಮಾನಸಿಕ ವೈದ್ಯರಲ್ಲಿ ಹೋಗಿ ತಮ್ಮ ಸಂಕಷ್ಟಗಳನ್ನು ಹೇಳೀಕೊಂಡಾಗಲೇ ಅದಕ್ಕೆ ಪರಿಹಾರ ದೊರೆಯುವುದು ಎಂದರು.
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದ ಮಾನಸಿಕ ಆರೋಗ್ಯ ತಜ್ಞೆ ಡಾ. ಭವ್ಯಶ್ರೀ ನಾಯ್ಕ ಅವರು ಮಾನಸಿಕ ಕಾಯಿಲೆಗೆ ಅನೇಕ ಕಾರಣಗಳಿವೆ. ನಮ್ಮ ದೇಹದಲ್ಲಿ ಆಗುವ ರಸಾಯನಿಕ ಕ್ರಿಯೆಗಳಿಂದಲೂ ಕೆಲವೊಮ್ಮೆ ಚಿತ್ತವಿಕಲತೆ ಉಂಟಾಗಿ ಮಾನಸಿಕ ಕಾಯಿಲೆಗೆ ಕಾರಣವಾಗುತ್ತದೆ. ಒತ್ತಡಕ್ಕೆ ಒಳಗಾಗಿ ಮದ್ಯಪಾನ ಮಾಡುವುದು, ಮಾದಕ ದೃವ್ಯಗಳ ಬಳಕೆ ಮಾಡುವುದು ಇತ್ಯಾದಿಗಳೂ ಕೂಡಾ ಮಾನಸಿಕ ಕಾಯಿಲೆಯ ಒಂದು ಭಾಗವಾಗಿದೆ. ನಮ್ಮ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ೧೬ ಕೋಟಿ ಮದ್ಯ ವ್ಯಸನಿಗಳಿದ್ದು ಅವರಲ್ಲಿ ಸುಮಾರು ೩ ಕೋಟಿಯಷ್ಟು ಜನರು ನಿತ್ಯ ಮದ್ಯ ಸೇವನೆ ಮಾಡುವವರಾಗಿದ್ದಾರೆ. ಸುಮಾರು ೩ ಕೋಟಿ ಜನತೆ ಮಾದಕ ದ್ರವ್ಯ ವ್ಯಸನಿಗಳಾಗಿದ್ದರೆ ಅವರಲ್ಲಿ ೨೫ ಲಕ್ಷ ಯುವ ಜನತೆ ಇದ್ದಾರೆ. ಇದು ಇದೇ ರೀತಿ ಮುಂದುವರಿದರೆ ಮಾರಕ ಎಂದ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರಲ್ಲಿ ಮಾನಸಿಕ ಒತ್ತಡ ಜಾಸ್ತಿ ಇರುತ್ತದೆ. ಅವರಿಗೆ ಸಮಾಜದಲ್ಲಿ ಭದ್ರತೆ ದೊರೆಯುವುದು ಮುಖ್ಯವಾಗುತ್ತದೆ, ಅವರನ್ನು ನಾವು ನೋಡಿಕೊಳ್ಳುವ ರೀತಿ, ಕಷ್ಟಕ್ಕೆ ಸ್ಪಂಧಿಸುವ ರೀತಿ ಮುಖ್ಯವಾಗುತ್ತದೆ ಎಂದರು.
ಮಾನಸಿಕ ರೋಗಿಗಳನ್ನು ೧೯೬೦ರ ದಶಕದಲ್ಲಿ ಒಂಟಿಯಾಗಿ ಕೂಡಿ ಹಾಕುವುದು, ಸಾಮಾಜಿಕ ವ್ಯವಸ್ಥೆಯಿಂದ ದೂರ ಇಡುವ ಪದ್ದತಿ ಇತ್ತು, ಆದರೆ ಇಂದು ಮಾನಸಿಕ ಆರೋಗ್ಯವು ಸಾರ್ವತ್ರಿಕ ಮನವ ಹಕ್ಕಾಗಿದ್ದು ಅವರಿಗೂ ಕೂಡಾ ಸಮಾಜದಲ್ಲಿ ಸ್ಥಾನಮನಾ ಇದೆ ಎನ್ನುವುದು ಮುಖ್ಯವಾಗಿದೆ. ನಾವು ಇಂದು ಸೋಶಿಯಲ್ ಮೀಡಿಯಾದ ದಾಸರಾಗುತ್ತಿರುವುದು ಕೂಡಾ ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳಲು ಕಾರಣವಾಗಿದೆ. ಪ್ರತಿಯೊಬ್ಬರೂ ಕೂಡಾ ತಮ್ಮ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹೊನ್ನಾವರ ಸೈಂಟ್ ಇಗ್ನೇಶಿಯಸ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಪಿಲಿಫಾ ಎಸ್. ಉಪಸ್ಥಿತರಿದ್ದರು.
ನಾಯಕ ಹೆಲ್ತ್ ಸೆಂಟರಿನ ಸಿಬ್ಬಂದಿ ಪ್ರಾರ್ಥಿಸಿದರು, ನಾಯಕ ಹೆಲ್ತ್ ಸೆಂಟರಿನ ಮುಖ್ಯಸ್ಥ ಡಾ. ವಿಶ್ವನಾಥ ನಾಯಕ ಸ್ವಾಗತಿಸಿ ಮಾನಸಿಕ ಆರೋಗ್ಯ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವೇಂದ್ರ ವಂದಿಸಿದರು.