ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಪಡಿತರಕ್ಕಾಗಿ ಮುಂದುವರೆದ ಮಹಿಳೆಯರ ಪ್ರತಿಭಟನೆ

ಭಟ್ಕಳ: ಪಡಿತರಕ್ಕಾಗಿ ಮುಂದುವರೆದ ಮಹಿಳೆಯರ ಪ್ರತಿಭಟನೆ

Fri, 15 Jan 2010 03:28:00  Office Staff   S.O. News Service
ಭಟ್ಕಳ, ಜನವರಿ 15:ತಾಲೂಕಿನಲ್ಲಿ ಪಡಿತರಕ್ಕಾಗಿ ಮಹಿಳೆಯರ ಪ್ರತಿಭಟನೆ ತೀವೃಗೊಂಡಿದೆ. ತಹಸೀಲ್ದಾರ ಕಚೇರಿಗೆ ಬುಧವಾರವೂ ಮುತ್ತಿಗೆ ಹಾಕಿದ ನಾರಿಯರು ಪಡಿತರ ಚೀಟಿ ವಿತರಣೆ ಕುರಿತಂತೆ ಅಸಮರ್ಪಕ ಸರ್ವೇ ನಡೆಸಲಾಗಿದೆ ಎಂದು ಆಪಾದಿಸಿ ಗ್ರಾಮ ಲೆಕ್ಕಿಗರೋರ್ವರನ್ನು ಹಿಡಿದೆಳೆದಾಡಿದ ಘಟನೆ ನಡೆದಿದೆ.
 ಜನರ ಸಮಸ್ಯೆಯ ಕುರಿತಂತೆ ಅಧಿಕಾರಿಗಳು ನಿರ್ಲಿಪ್ತ ಭಾವನೆಯನ್ನು ತಳೆದಿದ್ದಾರೆ. ಅಧಿಕಾರಿಗಳ ಅಸಮರ್ಪಕ ಸರ್ವೇ ಕಾರ್ಯವೇ ಇದಕ್ಕೆಲ್ಲ ಕಾರಣ ಎಂದು ಮಹಿಳೆಯರು ಆಪಾದಿಸಿದರು. ಇಲಾಖೆಯ ವತಿಯಿಂದ ಈ ಹಿಂದೆ ನೀಡಲಾಗುತ್ತಿದ್ದ ಆಹಾರವನ್ನು ಇದೀಗ ಅನ್ಯಾಯವಾಗಿ ನಿಲ್ಲಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡಲು ಯಾರೂ ಇಲ್ಲದೇ ಹೋದರೂ ತಮ್ಮ ಹೆಸರು ಎಪಿ‌ಎಲ್ ಫಲಾನುಭವಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ತಮ್ಮ ದಿನಗೂಲಿಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಮಹಿಳೆಯರು ಅಳಲನ್ನು ತೋಡಿಕೊಂಡರು. ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಕಾಣಿಸಿಕೊಂಡ ಗ್ರಾಮಲೆಕ್ಕಿಗರೋರ್ವರನ್ನು ಸುತ್ತುವರೆದ ಪ್ರತಿಭಟನಾಕಾರರು ಅವರನ್ನು ಎಳೆದಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪೊಲೀಸರ ಮಧ್ಯೆ ಪ್ರವೇಶದೊಂದಿಗೆ ಗ್ರಾಮಲೆಕ್ಕಿಗರನ್ನು ಆಕ್ರೋಶಿತರಿಂದ ಪಾರು ಮಾಡಲಾಯಿತು. ಆಹಾರ ನಿರೀಕ್ಷಕ ಶಂಕರಪ್ಪ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮತ್ತೊಮ್ಮೆ ಮಾಡಿದ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಪಡಿತರ ಚೀಟಿ ಗೊಂದಲಕ್ಕೆ ಕಾರಣವಾದ ತಾಂತ್ರಿಕ ಅಂಶಗಳನ್ನು ಅವರು ಮನವರಿಕೆ ಮಾಡಿಕೊಳ್ಳಲು ಯತ್ನಿಸಿದರೂ ಪ್ರತಿಭಟನಾಕಾರರ ಗದ್ದಲದಲ್ಲಿ ಯಾರೂ ಕೇಳಿಸಿಕೊಳ್ಳದ ವಾತಾವರಣ ನಿರ್ಮಾಣವಾಯಿತು. ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸುವ ಭರವಸೆಯನ್ನು ನೀಡಿದ ಅವರು ಜನರ ಸಹಕಾರವನ್ನು ಅಪೇಕ್ಷಿಸುವುದಾಗಿ ತಿಳಿಸಿದರು. ಜನೇವರಿ ೨೦ರವರೆಗೆ ನಮ್ಮ ಸಮಸ್ಯೆ ಬಗೆ ಹರಿಯ ಬೇಕು. ಇಲ್ಲದೇ ಹೋದರೆ ೨೧ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿ ಮಧ್ಯಾಹ್ನದ ಹೊತ್ತಿಗೆ ಧರಣಿಯನ್ನು ಮೊಟಕುಗೊಳಿಸಿದರು. ಸಿಪಿ‌ಐ(ಎಂ) ಕಾರ್ಯದರ್ಶಿ ಸುಭಾಶ ಕೊಪ್ಪಿಕರ ಸ್ಥಳದಲ್ಲಿ ಉಪಸ್ಥಿತರಿದ್ದು, ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. 
13vd2.jpg
13vd3.jpg 

‘ಮಕ್ಕಳ ಮರ್‍ಯಾದೆ ಕಳೆಯಲಾರೆ... ಆದರೆ ನನಗೆ ಬಿಪಿ‌ಎಲ್ ಬೇಕು...’

ಇದು ಬಿಪಿ‌ಎಲ್ ಪಡಿತರ ಚೀಟಿಗಾಗಿ ಹೋರಾಟ ನಡೆಸುತ್ತಿರುವ ಮುಗ್ಧ ಮಹಿಳೆಯೋರ್ವಳ ಕಥೆ. ಮಾತೃ ಪ್ರೇಮದ ಉದಾಹರಣೆಯೂ ಹೌದು. ಆಕೆಗೆ ಇಬ್ಬರು ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಒಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರೆ, ಮತ್ತೋರ್ವ ಕೊಂಚ ಮಾನಸಿಕ ಅಸ್ವಸ್ಥನಾಗಿ ಇಲ್ಲಿಯೇ ಓಡಾಡಿಕೊಂಡಿರುತ್ತಾನೆ. ಆದರೇನು? ಐವತ್ತು ವರ್ಷವನ್ನು ದಾಟಿರುವ ಈ ವೃದ್ಧೆ ಹೊಟ್ಟೆಪಾಡಿಗಾಗಿ ಅಲ್ಲೆಲ್ಲೋ ಸಿಮೆಂಟ್ ಕೆಲಸದವರೊಂದಿಗೆ ಸೇರಿಕೊಂಡಿದ್ದಾಳೆ. ಸರಕಾರದ ಸರ್ವೇಯ ಪ್ರಕಾರ ಇವರೆಲ್ಲ ಒಂದೇ ಮನೆಯ ನಿವಾಸಿಗಳು. ಅದಕ್ಕೇ ಈ ವೃದ್ಧೆಯ ಹೆಸರೂ ಎಪಿ‌ಎಲ್ (ಬಡತನ ರೇಖೆಗಿಂತ ಮೇಲೆ) ಪಟ್ಟಿಯಲ್ಲಿ ಬಂದು ಕುಳಿತಿದೆ. ವಾಸ್ತವಾಂಶ ಎಂದರೆ ಇಬ್ಬರೂ ಮಕ್ಕಳು ಆಕೆಯ ಜೀವನಕ್ಕಾಗಿ ಕನಿಷ್ಠ ತಿಂಗಳಿಗೆ ೫೦೦ ರೂಪಾಯಿಯನ್ನೂ ನೀಡುತ್ತಿಲ್ಲ. ಒಂದೇ ಕಾರ್ಡಿನಲ್ಲಿ ಹೆಸರಿರುವ ಕಾರಣಕ್ಕೆ ಎಪಿ‌ಎಲ್ ಕಾರ್ಡ ಸಿಕ್ಕಿದೆ. ಅದಕ್ಕೇ ನಿನಗೆ ನೀಡಿಲ್ಲ ಎಂಬ ಅಧಿಕಾರಿಗಳ ಮಾರುತ್ತರಕ್ಕೆ ಆಕೆ ಹೇಳುವುದೇನು ಗೊತ್ತೇ? ‘ಹೌದು.. ನನ್ನ ಮಕ್ಕಳು ನನಗೆ ಏನೂ ನೀಡುತ್ತಿಲ್ಲ. ಇದನ್ನೆಲ್ಲ ಊರವರಿಗೆ ಹೇಳಿ ಮಕ್ಕಳ ಹೆಸರನ್ನು ಬೇರೆ ಇರಿಸಿ ಅವರ ಮರ್‍ಯಾದೆ ತೆಗೆಯುವುದೇ? ಯಾವ ತಾಯಿ ಹಾಗೆ ಮಾಡ್ತಾಳೆ..!?’ 


Share: