ಭಟ್ಕಳ:ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ತೆರ್ನಮಕ್ಕಿಯಲ್ಲಿ ಲಾರಿ ಹಾಗೂ ಬೊಲೆರೋ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಬೊಲೆರೋ ಚಾಲಕ ಸೇರಿ ಒಟ್ಟೂ ಐವರು ತೀವ್ರವಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.
ಲಾರಿ ಚಾಲಕ ನರಗುಂದ ಬೆನಕೊಪ್ಪದ ಬಸವರಾಜಪ್ಪ ನಿಂಗಪ್ಪ ಮರ್ಚಕನವರ ಇವರು ತಮ್ಮ ಲಾರಿಯನ್ನು ಮುರ್ಡೇಶ್ವರ ಕಡೆಯಿಂದ ಭಟ್ಕಳದ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ರಾತ್ರಿ ೨.೩೦ರ ಸುಮಾರಿಗೆ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವ ಬೊಲೆರೋ ವಾಹನದ ಚಾಲಕ ಅಜಾಗರೂಕತೆಯಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಡಿವೈಡರ್ ಮೇಲೆ ವಾಹನವನ್ನು ಹತ್ತಿಸಿ ಎದುರಿನಿಂದ ಬರುತ್ತಿರುವ ಲಾರಿಗೆ ಡಿಕ್ಕಿ ಹೊಡೆದಿದ್ದು ಲಾರಿ ಚಾಲಕ ಹಾಗೂ ಬೊಲೆರೋ ಚಾಲಕ ಸ್ವತಹ ಮತ್ತು ವಾಹನದಲ್ಲಿದ್ದ ಮಹಿಳೆ ಸೇರಿ ಮತ್ತಿಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಚಿಕ್ಕನರಗುಂದದ ರವಿಕುಮಾರ್ ರಮೇಶ ಕಂಬಾರ ಅವರು ನೀಡಿದ ದೂರಿನನ್ವಯ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.