ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

Sat, 30 Sep 2023 04:44:22  Office Staff   SO News

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ , ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನಿಡಿದರು.

 ಅವರು  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪೂರ್ಣಗೊಳಿಸಲು ಕೇವಲ 5 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಭೂ ಸ್ವಾಧೀನ ಸಮಸ್ಯೆಯಿದ್ದು, ಈ ಕುರಿತಂತೆ ಇರುವ ಸಮಸ್ಯೆಯನ್ನು ಜಿಲ್ಲಾಡಳಿತದ ಮೂಲಕ ಪರಿಹರಿಸಿಕೊಡಲಾಗುವುದು, ಭೂ ಸ್ವಾಧೀನದ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಗಧಿತ ಕಾಲವಧಿಯೊಳಗೆ ವ್ಯವಸ್ಥಿತ ರೀತಿಯಲ್ಲಿ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

 ಕಾರವಾರದಲ್ಲಿ ಅವಳಿ ಟನಲ್ ನಿರ್ಮಾಣದಿಂದ 12 ಕಡೆಗಳಲ್ಲಿ ನೀರು ಹರಿಯುವ ನಾಲೆಗಳು ಬಂದ್ ಆಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆಗಳಾಗುತಿದ್ದು, ಈ ಕುರಿತಂತೆ ಪರಿಶೀಲಿಸಿ ನೀರು ಹರಿಯಲು ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ತಿಳಿಸಿದರು.

 ಅವಳಿ ಟನಲ್ ಮೂಲಕ ವಾಹನ ಸಂಚಾರ ಆರಂಭಿಸುವ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಟನಲ್ ಕಾರ್ಯಕ್ಷಮತೆ ಮತ್ತು ಟನಲ್ನಲ್ಲಿ ಸಂಚರಿಸುವ ವಾಹನಗಳು ಮತ್ತು ಸಾರ್ವಜನಿಕರ ಸುರಕ್ಷತೆ ಕುರಿತಂತೆ ಮುಚ್ಚಳಿಕೆ ಬರೆದುಕೊಡುವಂತೆ ತಿಳಿಸಿದ್ದು, ಅವರು ಈ ಬಗ್ಗೆ ಲಿಖಿತ ಮುಚ್ಚಳಿಕೆ ಬರೆದುಕೊಟ್ಟಲ್ಲಿ ತಕ್ಷಣವೇ ಟನಲ್ ನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

 ಟನಲ್ ಆರಂಭಿಸುವ ಕುರಿತ ಇಂದು ಕರೆದಿರುವ ಪ್ರಮುಖ ಸಭೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪ್ರಮುಖ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

 ಸಭೆಯಲ್ಲಿ ಶಾಸಕ ಸತೀಶ್ ಸೈಲ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ಪ್ರಬಂಧಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು


Share: