ಬಳ್ಳಾರಿ : ಹುಟ್ಟಿನಿಂದ 18 ವರ್ಷದೊಳಗಿನ ಮಕ್ಕಳ ಆರೈಕೆಗೆ ವೈದ್ಯಕೀಯ ತಂಡಗಳ ಸೇವೆಯನ್ನು ಸಾರ್ವಜನಿಕರಿಗೆ ಸದುಪಯೋಗವಾಗುವ ರೀತಿಯಲ್ಲಿ ಒದಗಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ಎಲ್ ಜನಾರ್ಧನ್ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಸಹಕಾರದೊಂದಿಗೆ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಸಂಚಾರಿ ಆರೋಗ್ಯ ತಂಡಗಳ ಕಾರ್ಯಕ್ಷಮತೆ ಗುರುತಿಸುವ ಚೈತನ್ಯದಾಯಿತ್ವ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.
ಹುಟ್ಟಿನಿಂದ 6 ವರ್ಷದೊಳಗಿನ ಮಕ್ಕಳ ಆರೊಗ್ಯ ತಪಾಸಣೆಗೆ ತಂಡವು ಭೇಟಿ ನೀಡುವ ಮೂಲಕ ಮಕ್ಕಳಲ್ಲಿ ಕಂಡುಬರುವ ಬೆಳವಣಿಗೆಗೆ ಕುಂಠಿತವಾಗಿರುವ ಅಂಶಗಳನ್ನು ಗುರುತಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುವ ಹಾಗೂ ಅಗತ್ಯ ಸಲಹೆ ಸೂಚನೆಗಳನ್ನು ಕೊಡುವ ಜೊತೆಗೆ ಮಗುವಿನ ಸಮಗ್ರ ಆರೋಗ್ಯ ರಕ್ಷಣಗೆ ಮನಃಪೂರ್ವಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಮುಖ್ಯವಾಗಿ ಮಗುವಿನ ಬೆಳವಣಿಗೆಯಲ್ಲಿ ಕಂಡುಬರುವ ನ್ಯೂನತೆಗಳ ಬಗ್ಗೆ ಮಕ್ಕಳ ತಜ್ಞರ ಅಭಿಪ್ರಾಯದ ಮೇರೆಗೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಿರುವ ಡಿಇಐಸಿ ಕೇಂದ್ರಕ್ಕೆ ಕಳುಹಿಸಿಕೊಡುವ ಮೂಲಕ ಪಾಲಕರಿಗೆ ಮಗುವಿನ ಆರೈಕೆಯಲ್ಲಿ ಬದಲಾವಣೆಯನ್ನು ಕೈಗೊಂಡು ಆರೋಗ್ಯವಂತ ಮಗುವನ್ನಾಗಿ ರೂಪಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ ಕಾರ್ಯನಿರ್ವಹಿಸಬೇಕು. ಅಲ್ಲದೆ 06 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಶಾಲೆಗಳಿಗೆ ವರ್ಷದಲ್ಲಿ ಒಂದು ಬಾರಿ ಕಡ್ಡಾಯವಾಗಿ ತಪಾಸಣೆ ಮಾಡಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಆರ್.ಅನಿಲ್ ಕುಮಾರ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಡಾ.ಗುರುನಾಥ್ ಬಿ ಚೌವ್ಹಾಣ್, ಮಕ್ಕಳ ತಜ್ಞರಾದ ಡಾ.ಬಸವಪ್ರಭು, ಡಾ. ಸಂಜೀವ್ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ನಗರ ಕಾರ್ಯಕ್ರಮ ವ್ಯವಸ್ಥಾಪಕರಾದ ಸುರೇಶ್, ಆರ್.ಬಿ.ಎಸ್.ಕೆ ತಂಡಗಳ ವೈದ್ಯಾಧಿಕಾರಿಗಳು, ನೇತ್ರಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು ಹಾಗೂ ಇತರರು ಹಾಜರಿದ್ದರು.