ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯಾದ್ಯಂತ ಮನುಸ್ಮೃತಿ ದಹಿಸಿ ಪ್ರತಿಭಟನೆ

ರಾಜ್ಯಾದ್ಯಂತ ಮನುಸ್ಮೃತಿ ದಹಿಸಿ ಪ್ರತಿಭಟನೆ

Mon, 26 Dec 2022 16:27:37  Office Staff   Vb

ಬೆಂಗಳೂರು: ಡಾ. ಬಿ. ಆರ್. ಅಂಬೇಡ್ಕರ್ ಅವರು 1927 ಡಿಸೆಂಬರ್ 25ರಂದು ಮನುಸ್ಮೃತಿಯನ್ನು ಸುಟ್ಟ ಹಿನ್ನೆಲೆಯಲ್ಲಿ, ಆ ದಿನವನ್ನು ಇಂದು ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಆಚರಿಸಿದವು. ಬೆಂಗಳೂರು, ಮೈಸೂರು, ಉಡುಪಿ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಕೋಲಾರ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಮನುಸ್ಮೃತಿ ಸುಟ್ಟ ದಿನವನ್ನು ಆಚರಿಸಿ, ಮನುಸಂವಿಧಾನವನ್ನು ತಿರಸ್ಕರಿಸಿ, ಅಂಬೇಡ್ಕರ್ ಸಂವಿಧಾನವನ್ನು ಬಲಪಡಿಸಿ ಎಂದು ಕರೆ ನೀಡಿದರು. 

ರವಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾರ್ಯಕರ್ತರು 'ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ, ಮನುಸ್ಮೃತಿಗೆ ಕೊಳ್ಳಿ ಇಡೋಣ' ಎಂಬ ಘೋಷಣೆಯಡಿ ಮನುಸ್ಮೃತಿಯನ್ನು ಸುಟ್ಟು ಹಾಕಿದರು.

ಮೈಸೂರು ನಗರದಲ್ಲಿ ರವಿವಾರ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ವತಿಯಿಂದ ವಿವಿಧ ದಲಿತ ಸಂಘಟನೆಗಳ ಮುಖ್ಯಸ್ಥರು ಪುರಭವನದ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಸಂವಿಧಾನದ ಪ್ರಸ್ತಾವನೆ ಓದಿದರು. ಬಳಿಕ ಮನುಸ್ಮೃತಿ ಪುಟಗಳಿಗೆ ಬೆಂಕಿ ಹಚ್ಚಿದರು.

ತುಮಕೂರಿನಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಡೋಣ ಕಾರ್ಯಕ್ರಮ ನಡೆಯಿತು.

ಕೋಲಾರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ, ಮನುಸ್ಮೃತಿಗೆ ಕೊಳ್ಳಿ ಇಟ್ಟು, ಸಂವಿಧಾನ ಎದೆಗಪ್ಪಿಕೊಳ್ಳುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ನಗರದ ನಚಿಕೇತ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ, ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

1927ರ ಡಿಸೆಂಬರ್ 25ರಂದು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಮನುಸ್ಮೃತಿಯನ್ನು ದಹಿಸಲಾಗಿತ್ತು. ಚಾತುರ್ವಣ್ರ ವ್ಯವಸ್ಥೆಯ ವಿರುದ್ಧ ಹೋರಾಡಿದ ಅಂಬೇಡ್ಕರ್, ಮನುಸ್ಮೃತಿ ಅಸಮಾನತೆಯನ್ನು ಪ್ರತಿನಿಧಿಸುತ್ತದೆ, ಸಮಾನತೆಯನ್ನು ನಿರಾಕರಿಸುತ್ತದೆ ಎಂದು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.

ಹಾಸನದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಮನುಸ್ಮೃತಿಯನ್ನು ದಹನ ಮಾಡಲಾಯಿತು, ಜಾತಿ ಅಸಮಾನತೆಯ ವಿರುದ್ಧ ವಿವಿಧ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನ ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕ ಅವರ ಪ್ರತಿಮೆ ಎದುರು ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಸದಸ್ಯರು ಮನುಸೃತಿಯ ಪ್ರತಿಗಳನ್ನು ದಹಿಸುವ ಮೂಲಕ ಅಂಬೇಡ್ಕ‌' ದಾರಿಯಲ್ಲಿ ಸಾಗುವ ಪ್ರತಿಜ್ಞೆ ಮಾಡಿದರು.

ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ ವತಿಯಿಂದ 'ಮನುಸ್ಮೃತಿ ದಹನ' ಕಾರ್ಯಕ್ರಮ ನಡೆಯಿತು. ಸಾಮಾಜಿಕ ಹೋರಾಟಗಾರ ಪ್ರೊ.ಫಣಿರಾಜ್, ಸಾಮಾಜಿಕ ಹೋರಾಟಗಾರ ಇದ್ರೀಸ್ ಹೂಡೆ, ದಲಿತ ಮುಖಂಡ ಮಂಜುನಾಥ ಗಿಳಿಯಾರು, ದಲಿತ ಮುಖಂಡ ಸುಂದರ ಮಾಸ್ತರ್‌ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.


Share: