ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯದ ಮುಂದಿನ ಚುನಾವಣೆಗೆ ಸಾಧು ಸಂತರ ಸ್ಪರ್ದೆ : ಭಟ್ಕಳದಲ್ಲಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಗಳ ಹೇಳಿಕೆ

ರಾಜ್ಯದ ಮುಂದಿನ ಚುನಾವಣೆಗೆ ಸಾಧು ಸಂತರ ಸ್ಪರ್ದೆ : ಭಟ್ಕಳದಲ್ಲಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಗಳ ಹೇಳಿಕೆ

Tue, 19 Apr 2022 04:14:07  Office Staff   SO News

ಭಟ್ಕಳ :  ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50 ಕ್ಷೇತ್ರಗಳಲ್ಲಿ ಸಾಧು- ಸಂತರು ಸ್ಪರ್ಧಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಭಟ್ಕಳದಲ್ಲೇ ಬ್ರಹ್ಮಾನಂದರು ಈ ಪ್ರಯೋಗ ಮಾಡುತ್ತಾರೆಂದು ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಗಳು ಹೇಳಿದ್ದಾರೆ.

ಸೋಮವಾರ ತಾಲೂಕಿನ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಾಲಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಚುನಾವಣೆ ಪ್ರಚಾರಕ್ಕೆ  ಐದು ಲಕ್ಷ ನಾಗಾಸಾಧುಗಳು ಬರುತ್ತಾರೆ  ರಾಜರುಗಳು  ಪ್ರಜೆಗಳನ್ನ ತಮ್ಮ ಮಕ್ಕಳಂತೆ ಕಾಣುವ ಕೆಲಸವಾಗಬೇಕು. ನಾವು ಇಡೀ ದೇಶವನ್ನು ಸುತ್ತುವ ಸಂತರು.  ಸುಮಾರು 5 ಲಕ್ಷ ಸಾಧು- ಸಂತರುಗಳಲ್ಲಿ ನಾನೂ ಒಬ್ಬ. ನಾವು ಎರಡು- ಮೂರು ತಿಂಗಳಿಗೆ ಕುಳಿತು ಮಾತನಾಡುತ್ತೇವೆ. ಈ ರಾಜ್ಯಾಂಗದ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಾರ್ಕೆಟ್‌ನಲ್ಲಿ ಗಲಾಟೆ ಆದಂತೆ ಆಗುತ್ತದೆ. ಎಷ್ಟೋ ಸಲ ನಮ್ಮ ವಿಧಾನಸಭಾಧ್ಯಕ್ಷರಾದವರ ಪರಿಸ್ಥಿತಿ ನೋಡಿದಾಗ ಬೇಸರವಾಗುತ್ತದೆ. ಅದನ್ನು ನೋಡಿದರೆ ಸಂವಿಧಾನ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ, ರಾಜ್ಯಾಂಗದ ಪರಿಕಲ್ಪನೆ ಇದೆಯೇ ಇಲ್ಲವೋ ಗೊತ್ತಾಗಲ್ಲ. ಇದಕ್ಕೆಲ್ಲ ಕಾರಣ ಸಮಗ್ರ ಬದಲಾವಣೆ ಆಗಬೇಕು. ಹೀಗಾಗಿ ನಾವು ಸನ್ಯಾಸಿಗಳು ತಯಾರಾಗಿದ್ದೇವೆ. ಇದಕ್ಕೆ ನಮಗೆ ಆದಿತ್ಯನಾಥರ ಪ್ರೇರಣೆ. ಉತ್ತರಾಖಂಡದಲ್ಲಿ ಈ ಬಗ್ಗೆ ಅನೇಕ ಸಭೆಗಳನ್ನೂ ನಡೆಸಿದ್ದೇವೆ ಎಂದರು.

ರಾಜ್ಯಾಂಗ, ಸಂವಿಧಾನ ಏನೆಂದೇ ನಮ್ಮ ನಾಯಕರುಗಳಿಗೆ ಗೊತ್ತಿಲ್ಲ. ರಾಜಕೀಯಕ್ಕೆ ಬರುವುದೇ ಸುಖಕ್ಕಾಗಿ, ಪ್ರಚಾರಕ್ಕಾಗಿ, ದುಡ್ಡಿಗಾಗಿ ಎಂಬುದು ಒಬ್ಬ ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಎಲ್ಲರ ಪರಿಕಲ್ಪನೆಯಾಗಿದೆ. ಕಾನೂನು ಗೊತ್ತಿಲ್ಲದವರು ರಾಜ್ಯಾಂಗದೊಳಗೆ ಬಂದು ಕಾನೂನು ಮಾಡಲು ಹೇಗೆ ಸಾಧ್ಯ? ಹೀಗಾಗಿ ತಿದ್ದುಪಡಿಯೊಂದನ್ನು ಮಾಡಬೇಕು. ಯಾರೇ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಆತ ಕನಿಷ್ಠ ಪದವಿಯನ್ನಾದರೂ ಪಡದಿರಬೇಕೆಂದ ಶ್ರೀಗಳು ಮಂತ್ರಿಯಾಗಲು ಕಾನೂನು ವಿದ್ವಾಂಸರೇ ಆಗಿರಬೇಕು. 4ನೇ ಕ್ಲಾಸು, 10ನೇ ಕ್ಲಾಸು ಓದಿದವರನ್ನ ಮಂತ್ರಿ ಮಾಡಿದರೆ ರಾಜ್ಯದ ಕಾನೂನುಗಳನ್ನು ಹೇಗೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

 ಪ್ರವಾಸಕ್ಕೆ ಮಂತ್ರಿಗಳನ್ನ ವಿದೇಶಕ್ಕೆ ಕಳುಹಿಸುತ್ತೀರಿ. 1- 2 ಲಕ್ಷದ ರೂಮಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಏನು ಪ್ರಯೋಜನ? ನಿದ್ದೆ ಮಾಡಲು 1- 2 ಲಕ್ಷದ ರೂಮು ಯಾಕಯ್ಯ? 5- 6 ಗಂಟೆಯ ನಿದ್ರೆಯನ್ನ 500 ರೂಪಾಯಿಯ ರೂಮಿನಲ್ಲೂ ಮಾಡಬಹುದು. 50- 100 ರೂಪಾಯಿಗೆ ಊಟ ಸಿಗುತ್ತದೆ. ಆದರೆ ಬೇಕಾಬಿಟ್ಟಿಯಾಗಿ ಪ್ರಜೆಗಳ ದುಡ್ಡನ್ನ ಪೋಲು ಮಾಡಲಾಗುತ್ತಿದೆ. ಇದನ್ನ ನೋಡಿದರೆ ನಮಗೆ ಕಣ್ಣೀರು ಬರುತ್ತದೆ. ತಪಸ್ಸು ಮಾಡಿದರೆ ಉದ್ಧಾರ ಮಾಡಲಾಗುವುದಿಲ್ಲ ಎಂದು ನಾವೆಲ್ಲ ತೀರ್ಮಾನಕ್ಕೆ ಬಂದಿದ್ದೇವೆ. ನನಗೆ ರಾಜಕೀಯದ ಆಸೆ ಇಲ್ಲ. ಆದರೆ ನಾನೇ ಮೊದಲು ಭಟ್ಕಳದಲ್ಲಿ ಈ ಪ್ರಯೋಗ ಮಾಡಿಸುತ್ತೇನೆ. ಸುನೀಲ್ ನಾಯ್ಕ, ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ ಯಾರೇ ಆಕಾಂಕ್ಷಿ ಇದ್ದರೂ ಈ ವೇಳೆ ಹಿಂದೆ ಸರಿಯುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

ಸಂವಿಧಾನ ಪಾಲನೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ನೋಡಲು ಪ್ರತಿ ತಾಲೂಕಿನಲ್ಲಿ ನ್ಯಾಯಾಧೀಶರ ವೀಕ್ಷಣಾ ಮಂಡಳಿ ರಚನೆಯಾಗಬೇಕು. ಚುನಾಯಿತರಾದ ಶಾಸಕರಿಗೆ ನಿವೃತ್ತ ನ್ಯಾಯಾಧೀಶರಿಂದ  ತರಬೇತಿ ನೀಡಬೇಕೆಂದು ಸಲಹೆ ನೀಡಿದ ಅವರು, ಸುಮ್ಮನೆ ಸಂವಿಧಾನ ಸಂವಿಧಾನ ಎಂದು ಸಂವಿಧಾನದ ಬಗ್ಗೆ ಮಾತನಾಡುತ್ತೀರಿ. ಸಂವಿಧಾನದ ತಲೆಯೂ ಗೊತ್ತಿಲ್ಲ, ಬುಡವೂ ಗೊತ್ತಿಲ್ಲ. ವಿಧಾನಸಭೆಯಲ್ಲಿ ಇಡೀ ದಿನ ಜಗಳ ಮಾಡುತ್ತಾರೆ. ಹೊರಗೆ ಬರುವಾಗ ಹೆಗಲ ಮೇಲೆ ಕೈ ಹಾಕಿಕೊಂಡು ಚಹಾ- ಊಟ ಸವಿಯುತ್ತಾರೆ. ಹೊರಗಡೆ ಈ ಹುಡುಗರೆಲ್ಲ ಕುಸ್ತಿ ಮಾಡುತ್ತಾರೆ. ಇದನ್ನ ನೋಡಿ ಸಂತರಿಗೆಲ್ಲ ಕಣ್ಣೀರು ಬರುತ್ತಿದೆ ಎಂದ ಅವರು, ಸ್ವಾಮಿಗಳು ಓಟಿಗೆ ನಿಲ್ಲುತ್ತಾರೆಂದು ಯಾರೂ ಹೆದರಬೇಕಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಎಲ್ಲರನ್ನೂ ಸರಿಸಮಾನವಾಗಿ ಕಾಣಲು ನಾವು ರಾಜಕೀಯಕ್ಕೆ ಸ್ಪಧಿಸುತ್ತಿದ್ದೇವೆ. ಎಲ್ಲರೂ ಸಹೋದರತ್ವ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ ನುಂತಾದವರು ಉಪಸ್ಥಿತರಿದ್ದರು.


Share: