ಭಟ್ಕಳ:ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸುವಂತೆ ಆಗ್ರಹಿಸಿ ಮೊಗೇರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಂಸದ ಅನಂತಕುಮಾರ ಹೆಗಡೆ ಭೇಟಿ ನೀಡಿ ಮೊಗೇರ ಮುಖಂಡರ ಅಹವಾಲು ಕೇಳಿ, ಸರ್ಕಾರ ನಿಮ್ಮ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಉನ್ನತಮಟ್ಟದ ಸಭೆನಡೆಸಲು ನಿರ್ಧರಿಸಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡಿದ ಮೊಗೇರ ಸಮಾಜದ ಕಾನೂನು ಸಲಹೆಗಾರ ನಾಗರಾಜ ಈ.ಎಚ್, ನಮ್ಮ ಸಮಾಜದ ಪರವಾಗಿ ಸುಪ್ರೀಂ ಕೋರ್ಟಿ, ಹೈಕೋರ್ಟಿ ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಕಳೆದ 12 ವರ್ಷಗಳಿಂದ ಪರಿಶಿಷ್ಟ ಪ್ರಮಾಣ ಪತ್ರ ಸ್ಥಗಿತಗೊಳಿಸಿದ್ದರಿಂದ ಸಮಾಜದ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ ಮತ್ತಿತರ ಸೌಲಭ್ಯಕ್ಕೆ ಹಿನ್ನಡೆಯಾಗಿದೆ. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದ ಮೊಗೇರರಿಗೆ ಪ್ರವರ್ಗ 1ರಲ್ಲಿ ಪ್ರಮಾಣ ಪತ್ರ ಸರ್ಕಾರ ನೀಡಲು ಮುಂದಾದ ಹಿನ್ನೆಲೆಯಲ್ಲಿ ನಾವು ಇದನ್ನು ತೀವ್ರವಾಗಿ ವಿರೋಧಿಸಿ ಕಳೆದ 28 ದಿನಗಳಿಂದ ನ್ಯಾಯಕ್ಕಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದೇವೆ. ನಮಗೆ ಸರ್ಕಾರ ಈ ಹಿಂದೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಬೇಕು. ಆ ನಿಟ್ಟಿನಲ್ಲಿ ತಾವು ಪ್ರಯತ್ನಿಸಬೇಕೆಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಎಫ್.ಕೆ. ಮೊಗೇರ ಮಾತನಾಡಿ,ನಾವು ಹೊಸದಾಗಿ ಪ್ರಮಾಣ ಪತ್ರ ಕೇಳುತ್ತಿಲ್ಲ. ನಮಗೆ ಈ ಹಿಂದೆ ನೀಡಲಾಗಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಿ ಎಂದು ಕೇಳುತ್ತಿದ್ದೇವೆ ಎಂದರು.
ಮೊಗೇರರ ಅಹವವಾಲು ಕೇಳಿದ ನಂತರ ಮಾತನಾಡಿದ ಸಂಸದ ಅನಂತಕುಮಾರಹೆಗೆಡೆ, ಈಗಾಗಲೇ ನಿಮ್ಮ ಸಮಸ್ಯೆ ಕುರಿತು ಸಮಾಜ ಕಲ್ಯಾಣ ಸಚಿವರಲ್ಲಿ ಚರ್ಚಿಸಿದಾಗ ಅವರು ಶೀಘ್ರದಲ್ಲಿ ವಿಧಾನಸೌಧದಲ್ಲಿ ಮೊಗೇರ ಸಮುದಾಯದ ಮುಖಂಡರೂ ಸೇರಿದಂತೆ ಸ್ಥಳೀಯ ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ತಜ್ಞರ ಸಭೆಯ ಚರ್ಚೆಯ ಬಳಿಕ ಮುಖ್ಯಮಂತ್ರಿಯೊಂದಿಗೆ ಮತ್ತೊಂದು ಸಭೆ ನಡೆಸಿ ಚರ್ಚೆ ನಡೆಸಲಾಗುವುದು. ಆ ಸಭೆಯಲ್ಲಿ ನಾನೂ ಕೂಡ ಭಾಗವಹಿಸುತ್ತೇನೆ. ಮೊಗೇರರ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯ ಮಂತ್ರಿ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ. ಹೀಗಾಗಿ ತಾವು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿದರು. ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ, ಕಳೆದ 28 ದಿನಗಳಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಸಮಾಜದಿಂದ ನಮ್ಮ ಮೇಲೆ ಒತ್ತಡ ಇದೆ. ನಮಗೆ ನ್ಯಾಯ ಸಿಗುವ ವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಮೊಗೇರ ಸಮಾಜದ ಹೋರಾಟ ಸಮಿತಿಯ ಅಧ್ಯಕ್ಷ ಎಫ್.ಕೆ.ಮೊಗೇರ, ಶ್ರೀಧರ ಮೊಗೇರ, ಕುಮಾರ ಹೆಬಳೆ, ವೆಂಕಟ್ರಮಣ ಮೊಗೇರ, ಜಯಶ್ರೀ ಮೊಗೇರ, ದಿವಾಕರ ಮೊಗೇರ, ಕೃಷ್ಣ ಮೊಗೇರ ಮುಂತಾ ದವರಿದ್ದರು. ಇದೇ ಸಂದರ್ಭದಲ್ಲಿ ಮೊಗೇರ ವಿದ್ಯಾರ್ಥಿನಿಯರು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸರ್ಕಾರ ನೀಡದೇ ಇರುವುದರಿಂದ ಶಿಕ್ಷಣ, ಉದ್ಯೋಗ ಸೌಲಭ್ಯಕ್ಕೆ ಹಿನ್ನಡೆಯಾದ ಬಗ್ಗೆ ಸಂಸದರಿಗೆ ವಿವರಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.