ಭಟ್ಕಳ: ಕಳೆದ ಹಲವು ದಿನಗಳಿಂದ ಇಲ್ಲಿನ ತಾಲೂಕು ಕಚೇ ರಿಯ ಎದುರುಗಡೆ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕಾಗಿ ಧರಣಿ ನಡೆಸುತ್ತಿದ್ದ ಮೊಗೇರ ಸಮಾಜದವರು ಗುರುವಾರ ಡಾ. ಅಂಬೇಡ್ಕರ ಭಾವಚಿತ್ರವನ್ನು ಪ್ರದರ್ಶಿಸಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಅರ್ಥಪೂರ್ಣವಾಗಿ ಸಂವಿಧಾನದ ಶಿಲ್ಪಿ ಬಿ.ಆರ್ ಅಂಬೆಡ್ಕರ ಅವರ ಜಯಂತಿ ಆಚರಿಸಿದರು.
ನಗರದ ಆನಂದಾಶ್ರಮ ಶಾಲೆಯಿಂದ ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟ ಮೊಗೇರ ಸಮಾಜದವರು ನಗರದ ಸಂಶುದ್ದೀನ್ ಸರ್ಕಲ್ ಮುಖಾಂತರ ನಗರದ ಮುಖ್ಯ ರಸ್ತೆಗೆ ಮೆರವಣಿಗೆಯ ಮೂಲಕ ಆಗಮಿಸಿ ಅಲ್ಲಿಂದ ಧರಣಿ ನಡೆಯುವ ಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ,
ಅಂಬೇಡ್ಕರ್ ಒಬ್ಬರು ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದ ಮಹಾನ್ ಹೊರಾಟಗಾರರು ಸಮಾಜ ಸುಧಾರಕರು ಆಗಿದ್ದಾರೆ. ನಾವು ಅವರ ಸಿದ್ಧಾಂತವನ್ನು ನಂಬಿ ನಡೆಯುವವರಾಗಿದ್ದೇವೆ. ನಾವು ದುಡುಕಿ ಯಾವ ನಿರ್ಧಾರವನ್ನು ಕೈಗೊಳ್ಳುವುದು ಬೇಡ, ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಆದ್ದರಿಂದ ನಮ್ಮ ಹೋರಾಟ ಶಾಂತಿಯುತವಾಗಿಯೆ ಇರಲಿ ಎಂಬುವುದು ನನ್ನ ಆಶಯ, ನಾವು ಅಂಬೇಡ್ಕರ್ ಹಾಕಿಕೊಟ್ಟ ನಡೆಯಲ್ಲಿ ನಡೆಯೋಣ ಎಂದರು.
ಈ ಸಂದರ್ಭದಲ್ಲಿ ಮೊಗೇರ ಸಮಾಜದ ಪ್ರಮುಖರಾದ ಅಣ್ಣಪ್ಪ ಮೊಗೇರ, ಎಫ್.ಕೆ.ಮೊಗೇರ,ಕೆ.ಎಂ. ಕರ್ಕಿ, ಶ್ರೀಧರ ಮೊಗೇರ, ಭಾಸ್ಕರ ಮೊಗೇರ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಹಾಗೂ ಮಕ್ಕಳು ಇದ್ದರು.