ಭಟ್ಕಳ:ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮತ್ತೊಮ್ಮೆ ಭಟ್ಕಳ ಗಿರಿಜನ ಗೊಂಡರ ಢಿಕ್ಕಿ ಕುಣಿತ ಆಯ್ಕೆಯಾಗಿದ್ದು, ನಾಗಪ್ಪ ಗೊಂಡ ನೇತೃತ್ವದಲ್ಲಿ ಮೈಸೂರಿಗೆ ಹೊರಟ 15 ಕಲಾವಿದರ ತಂಡಕ್ಕೆ ತಾಲೂಕು ಆಡಳಿತದ ವತಿಯಿಂದ ಶುಭ ಹಾರೈಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಸಹಾಯಕ ಆಯುಕ್ತ ಮಮತಾದೇವಿ, ಭಟ್ಕಳ ಗೊಂಡ ಸಮಾಜದ ಕಲಾ ತಂಡ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಬಾರಿ ಕಲಾ ತಂಡವು ಮೊದಲ ಬಹುಮಾನ ಪಡೆದು ನಾಡಿನಲ್ಲಡ ಕೀರ್ತಿ ಮರೆಯಲಿ ಎಂದು ಆಶಯ ವ್ಯಕ್ತಪಡಿಸಿದರು, ತಹಸೀಲ್ದಾರ ಡಾ.ಸುಮಂತ್, ಗೊಂಡ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಗೊಂಡ, ಪ್ರಮುಖರಾದ ಗಣಪತಿ ಗೊಂಡ, ರಮೇಶ ಗೊಂಡ, ಮಾದೇವ ಗೊಂಡ, ಚಂದ್ರು ಗೊಂಡ, ರಾಜು ಗೊಂಡ, ಮಂಜುನಾಥ ಗೊಂಡ, ಪಾಂಡು ಗೊಂಡ, ರಾಘು ಗೊಂಡ, ರವಿ ಗೊಂಡ ಮೊದಲಾದವರು ಉಪಸ್ಥಿತರಿದ್ದರು. ಭಟ್ಕಳ ತಂಡಕ್ಕೆ ಎರಡು ದಿನದ ವಾಸ್ತವ್ಯ ವ್ಯವಸ್ಥೆ
ಪ್ರಸಿದ್ಧ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವ ಭಟ್ಕಳ ಕಲಾ ತಂಡ ಕ್ಕೆ ಮೈಸೂರು ನಗರ ಆಯುಕ್ತರು ಅ.1 ಮತ್ತು 5ರಂದು ಮೈಸೂರಿನ ದೇವರಾಜ ಮೊಹಲ್ಲಾ ವಿನೋಬಾ ರಸ್ತೆಯಲ್ಲಿನ ನಂಜರಾಜ ಬಹದ್ದೂರ ಛತ್ರದಲ್ಲಿ ವಾಸ್ತವ್ಯ ಸೌಕರ್ಯವನ್ನು ಕಲ್ಪಿಸಿದ್ದು, ಅಗತ್ಯ ಗುರುತು ಪತ್ರ, ಶುಭ್ರ ಉಡುಗೆ ತೊಡುಗೆಗಳೊಂದಿಗೆ ಹಾಜರಿರುವಂತೆ ಸೂಚಿಸಲಾಗಿದೆ. ಕಲಾವಿದರಿಗೆ ಸೂಕ್ತ ಗೌರವ ಸಂಭಾವನೆ, ಸಾರಿಗೆ ವಚ್ಚವನ್ನು ಸರಕಾರವೇ ಭರಿಸಲಿದೆ, ಅತ್ಯುತ್ತಮ ಕಲಾ ಪ್ರದರ್ಶನ ನೀಡುವ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ಆಯುಕ್ತರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.2016ರಲ್ಲಿ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಟ್ಕಳ ಗೊಂಡರ ಕಲಾ ತಂಡ ಎರಡನೆಯ ಬಹುಮಾನ ಗಳಿಸಿತ್ತು.