ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮೇ 14, 15 ರಂದು ಮಂಗಳೂರಿನಲ್ಲಿ ಉದ್ಯೋಗ ಮೇಳ

ಮೇ 14, 15 ರಂದು ಮಂಗಳೂರಿನಲ್ಲಿ ಉದ್ಯೋಗ ಮೇಳ

Thu, 12 May 2022 15:19:59  Office Staff   SO News

ಮಂಗಳೂರು : ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳ ಗಂಗೋತ್ರಿಯ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಮೇ.14 ಮತ್ತು 15 ರಂದು ಉದ್ಯೋಗ ಮೇಳ ಆಯೋಜಿಸಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳ ವಲಯದ ಮ್ಯಾಜಿಕ್ ಬಸ್‍ನ ಕ್ಲಸ್ಟರ್ ಮ್ಯಾನೇಜರ್ ಚಿರಂಜೀವಿ ಅಂಬರ್‍ನಾಥ್ ಮೇ.14ರ ಬೆಳಿಗ್ಗೆ 10.30ಕ್ಕೆ ಉದ್ಯೋಗ ಮೇಳವನ್ನು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕುಲಸಚಿವ ಪ್ರೋ. ಕಿಶೋರ್ ಕುಮಾರ್ ಸಿ.ಕೆ, ಕುಲಸಚಿವ (ಪರೀಕ್ಷಾಂಗ) ಪ್ರೋ. ಪಿ.ಎಲ್ ಧರ್ಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ಯುಐಜಿಬಿ ಉಪ ಮುಖ್ಯಸ್ಥ ಎಸ್.ಜೆ. ಹೇಮಚಂದ್ರ, ಹಣಕಾಸು ಅಧಿಕಾರಿ, ಯುಐಜಿಬಿ ಮತ್ತು ಯುಟಿಪಿಸಿ ಮುಖ್ಯಸ್ಥ ಪ್ರೋ. ಕೆ.ಎಸ್ ಜಯಪ್ಪ, ಯುಟಿಪಿಸಿ ಯೋಜನೆ ಆಧಾರಿತ ಸಲಹೆಗಾರ್ತಿ ಶಾರದಾ ಹೆಚ್.ಎಸ್ ಭಾಗವಹಿಸುವರು.

ಎರಡು ದಿನಗಳ ಕಾಲ ನಡೆಯಲಿರುವ ಉದ್ಯೋಗ ಮೇಳದಲ್ಲಿ ಸುಮಾರು 10 ಕಂಪನಿಗಳು ಭಾಗವಹಿಸಲಿದ್ದು, ಸುಮಾರು 11,100 ಹುದ್ದೆಗಳಿಗೆ ಅರ್ಹರ ನೇಮಕಾತಿ ನಡೆಯಲಿದೆ. ಯುಐಜಿಬಿ ಮತ್ತು ಯುಟಿಪಿಸಿ ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಘಟಕ, ಸಂಯೋಜಿತ, ಸ್ವಾಯತ್ತ ಕಾಲೇಜುಗಳಿಂದ ಮತ್ತು ಮಂಗಳೂರು ವಿವಿ ಕ್ಯಾಂಪಸ್‍ನ ವಿದ್ಯಾರ್ಥಿಗಳಿಂದ ಸುಮಾರು 10,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಮ್ಯಾಜಿಕ್ ಬಸ್ ಎಂಬ ಸರ್ಕಾರೇತರ ಸಂಸ್ಥೆಗೆ ಹಸ್ತಾಂತರಿಸಿದ ಸಂಸ್ಥೆ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಟೋಕನ್ ಒದಗಿಸಿ ನೇಮಕಾತಿಗೆ ನೇರ ಸಂದರ್ಶನ ನಡೆಸಲಿದೆ.

ಸ್ಥಳದಲ್ಲೇ ನೋಂದಣಿಗೂ ಅವಕಾಶ:
ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಬಯೋಡಾಟ, ಆಧಾರ್ ಕಾರ್ಡ್, ಪಾಸ್‍ಪೋರ್ಟ್ ಅಳತೆಯ ಫೋಟೋ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯ ಜೊತೆಗೆ ಗರಿಷ್ಠ ಅರ್ಹತೆಯ ಅಂಕಪಟ್ಟಿಯನ್ನು ತರಬೇಕು, ಅಂತಿಮ ವರ್ಷದ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವವರೂ (2021-22) ಸಂದರ್ಶನಕ್ಕೆ ಹಾಜರಾಗಬಹುದು.
ಮಂಗಳೂರು ವಿಶ್ವವಿದ್ಯಾನಿಲಯದ ಹ್ಯುಮಾನಿಟೀಸ್ (ಮಾನವಿಕ), ಮ್ಯಾನೇಜೆಂಟ್ (ನಿರ್ವಹಣೆ), ಸೈನ್ಸ್ (ವಿಜ್ಞಾನ) ಬ್ಲಾಕ್ ಮತ್ತು ಲೆಕ್ಚರ್ ಕಾಂಪ್ಲೆಕ್ಸ್‍ಗಳನ್ನು ಉದ್ಯೋಗ ಮೇಳಕ್ಕೆ ಬಳಸಿಕೊಳ್ಳಲು ಉದ್ದೇಶಿಸಿದ್ದು, ಪ್ರತಿಯೊಂದು ವಿಭಾಗದಲ್ಲೂ ಸಹಾಯವಾಣಿ ಒದಗಿಸಲಾಗಿದೆ.

      ಈ ಉದ್ಯೋಗ ಮೇಳದಲ್ಲಿ ಅಪೋಲೋ ಫಾರ್ಮಸಿ, ಮುತ್ತೂಟ್ ಫೈನಾನ್ಸ್ ಮೆಡಿಪ್ಲಸ್, ಜನ್ಮ ಡಯಲ್, ಬೈಬೊಸ್, ಆಕ್ಸಿಸ್ ಬ್ಯಾಂಕ್, ಕಾಂಚನಾ ಗ್ರೂಪ್ ಆಫ್ ಕಂಪೆನೀಸ್, ಹೋಂಡಾ ಮ್ಯಾಟ್ರಿಕ್ಸ್, ದಿಯಾ ಸಿಸ್ಟಮ್ಸ್, ಹೆಚ್‍ಡಿಎಫ್‍ಸಿ ಬ್ಯಾಂಕ್, ಮಾಂಡೋವಿ ಮೋಟರ್ಸ್, ಮೋರ್ ಸೂಪರ್ ಮಾರ್ಕೆಟ್ ಸೇರಿದಂತೆ 40 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ.

      ಹೆಚ್ಚಿನ ಮಾಹಿತಿಗೆ ಯುಟಿಪಿಸಿ ಯೋಜನೆ ಆಧಾರಿತ ಸಲಹೆಗಾರ್ತಿ ಶಾರದಾ ಎಚ್. ಸೋಮಯಾಜಿ ಮೊ.ಸಂಖ್ಯೆ:6363023303 ಹಾಗೂ ವಿವಿ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಗುರುಪ್ರಸಾದ್ ಟಿ.ಎನ್ ಮೊ.ಸಂಖ್ಯೆ:9964939267 ಅವರನ್ನು ಸಂಪರ್ಕಿಸುವಂತೆ ವಿಶ್ವವಿದ್ಯಾನಿಲಯದ ನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: