ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ವಿಕಲಚೇತನ ಮಕ್ಕಳ ಶಿಕ್ಷಕರ ವಜಾ - ಅಮರಣಾಂತ ಉಪವಾಸದ ಮೂಲಕ ಪ್ರತಿಭಟನೆ

ವಿಕಲಚೇತನ ಮಕ್ಕಳ ಶಿಕ್ಷಕರ ವಜಾ - ಅಮರಣಾಂತ ಉಪವಾಸದ ಮೂಲಕ ಪ್ರತಿಭಟನೆ

Tue, 23 Feb 2010 18:55:00  Office Staff   S.O. News Service
ಬುದ್ಧಿಮಾಂದ್ಯರು, ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ವಿಶೇಷವಾದ ಹೊಣೆಗಾರಿಕೆ. ಇಂತಹ ಮಹತ್ವದ ಸೇವೆಯನ್ನು ಹತ್ತಾರು ವರ್ಷ ಸಲ್ಲಿಸಿರುವ ಶಿಕ್ಷಕರಿಗೆ ನಮ್ಮ ಸರ್ಕಾರಗಳು ನೀಡರುವ ಬಹುಮಾನ ಹುದ್ದೆಯಿಂದ ವಜಾ! ಶಿಕ್ಷಕರು ಹೋರಾಟಕ್ಕಿಳಿದಿದ್ದಾರೆ. ಅಮರಣಾಂತ ಉಪವಾಸ ಕೈಗೊಂಡಿದ್ದಾರೆ.

 

 

ರಾಜ್ಯದ ಅಂಗವಿಕಲ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುತ್ತಿದ್ದ1022 ಸಂಪನ್ಮೂಲ ಶಿಕ್ಷಕರನ್ನು ಸೇವೆಯಲ್ಲಿ ಮುಂದುವರೆಸಲು ಆಗ್ರಹಿಸಿ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಮಹಿಳೆಯರೂ ಸೇರಿದಂತೆ 100 ಕ್ಕೂ ಹೆಚ್ಚು ಶಿಕ್ಷಕರೂ ಅಸ್ವಸ್ಥರಾಗಿದ್ದಾರೆ. ಜಯಶ್ರೀ (ಗದಗ್), ಜಲಜಾಕ್ಷಿ (ಬೆಂಗಳೂರು), ವಿಜಯಲಕ್ಷ್ಮಿ (ರಾಯಚೂರು), ಸುಮಂಗಲ (ಬಿಜಾಪುರ) ಅನುಸೂಯಮ್ಮ (ಕೊಪ್ಪಳ) ಲಕ್ಷ್ಮಮ್ಮ, ಶಾಂತ(ಕೊಪ್ಪಳ), ಪಾರ್ವತಮ್ಮ(ಹಾಸನ), ಸೋಮಪ್ಪ ಆಯಟ್ಟಿ (ಬಿಜಾಪುರ), ಕೆ. ಬೀರಪ್ಪ (ಕೊಪ್ಪಳ) ರಾಜಪ್ಪ (ದಾವಣಗೆರೆ), ರಮೇಶ (ಮಾಗಡಿ), ದೇವರಾಜ ಬಿ.ಕೆ. (ತುಮಕೂರು), ಅರುಣ್ಕುಮಾರ್ ಇನ್ನಿತರರು ತೀವ್ರವಾಗಿ ಅಸ್ವಸ್ಥರಾಗಿದ್ದು, ಶಿಕ್ಷಕರು ಚಿಕಿತ್ಸೆಗೆ ನಿರಾಕರಿಸುತ್ತಿದ್ದು ಸಕರ್ಾರ ಸೂಕ್ತವಾಗಿ ಸ್ಪಂದಿಸುವವರೆಗೆ ಯಾವುದೇ ಚಿಕಿತ್ಸೆ ತೆಗೆದುಕೊಳುವುದಿಲ್ಲವೆಂದು ಸ್ಪಷ್ಟಪಡಿಸಿದರೂ ಪೊಲೀಸರು ಬಲವಂತದಿಂದಾಗಿ ಶೋಭಾ ನಿಂಬಳಗುಂದಿ (ಬಿಜಾಪುರ) ಇವರನ್ನು ನಿಮ್ಹಾನ್ಸ್ ಗೆ, ಜಯಶ್ರಿ (ಕೊಪ್ಪಳ), ಶಾರದ ಗದಗ್), ಸುಮಿತ್ರ ಬಂಡೆಮಠ 3 ಜನ ಮಹಿಳಾ ಶಿಕ್ಷಕರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಅಸ್ವಸ್ಥರಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದುವರೆಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದೇ ನಿರ್ಲಕ್ಷಿಸಿದೆ. ಸಣ್ಣ ಪುಟ್ಟ ಮಕ್ಕಳೊಂದಿಗೆ ರಾಜ್ಯದ ನಾನಾ ಭಾಗದಿಂದ ಬಂದಿರುವ ನೂರಾರು ಮಹಿಳೆಯರೂ ಸೇರಿದಂತೆ ಅಮರಣಾಂತ ಉಪವಾಸ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸಿರುವುದನ್ನು ಕರ್ನಾಟಕ ರಾಜ್ಯ ಸಂಪನ್ಮೂಲ ಶಿಕ್ಷಕರ ಸಂಘ (ಐ.ಇ.ಡಿ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ), ಬಿಜಾಪುರ ವಿಕಲ ಚೇತನ ಹೋರಾಟ ಸಮಿತಿ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

 

ಪ್ರೊ. ಬರಗೂರು ರಾಮಚಂದ್ರಪ್ಪನವರ ಆಗ್ರಹ

 

ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ರಾಜ್ಯ ಸರ್ಕಾರ ಹೇಳುವ ಪ್ರಕಾರ ಒಬ್ಬ ಶಿಕ್ಷಕರಿಗೆ 8 ಮಕ್ಕಳಿಗೆ ಪಾಠ ಮಾಡಬೇಕು ಎಂಬ ನಿಯಮವಿದೆ. ಆ ನಿಯಮದ ಪ್ರಕಾರ 38,000 ಶಿಕ್ಷಕರ ಅಗತ್ಯ ಇವೆ. ಆದರೆ ರಾಜ್ಯ ಸರ್ಕಾರ 1022 ಸಂಪನ್ಮೂಲ ಶಿಕ್ಷಕರನ್ನು ಕೆಲಸದಲ್ಲಿ ಮುಂದುವರಿಸಲು ಯಾವುದೇ ಕ್ರಮ ಕೈಗೊಳದೇ ಇರುವುದು ಮೂರ್ಖತನದ ಪರಮಾವಧಿ ಎಂದೇ ಹೇಳಬಹುದು. ಸರಕಾರವು 9,000 ಕೋಟಿ ಶಿಕ್ಷಣಕ್ಕೆ ತೆಗೆದಿರಿಸಿದೆ ಎಂದು ತಿಳಿಸಿದೆ. ಆದರೆ ಆ ಹಣ ಎಲ್ಲಿಗೆ ಹೋಯ್ತು ಎನ್ನುವ ಪ್ರಶ್ನೆಗೆ ರಾಜ್ಯ ಸರ್ಕಾರವೇ ಉತ್ತರ ನೀಡಬೇಕು. ಅಭಿವೃದ್ಧಿಗೆ ಹಣ ನೀಡುವ ಸರ್ಕಾರ ಅಂಗವಿಕಲರನ್ನು ಅಭಿವೃದ್ಧಿಯಿಂದ ಮರೆತು ಅಂಗವಿಕಲರಿಗೆ ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಈ ಸರ್ಕಾರ ಮೋಸ ಮಾಡಿದೆ ಎಂದು ಟೀಕಿಸಿದರು. ಇವರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

 

ಪ್ರೊ|| ಮರುಳಸಿದ್ಧಪ್ಪನವರ ಖಂಡನೆ.

 

 

ದೈಹಿಕ ಅಂಗವಿಕಲರೆಂದರೆ ದುರ್ಬಲರಾದವರು. ಅವರಿಗೆ ಶಿಕ್ಷಣ ಕೊಡುವುದಕ್ಕೆ ವಿಶೇಷ ಪರಿಣಿತಿ ಬೇಕು. ಅಂತಹವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದು ಸೇವೆ ಸಲ್ಲಿಸಿದವರಿಗೆ ಈ ಸರಕಾರ ಕ್ರೂರತನದಿಂದ ವರ್ತಿಸಿದೆ. ಬಡ ಅಂಗವಿಕಲರು ಸರಕಾರಿ ಶಾಲೆಗೆ ಬರುವುದು ಅಂತಹವರಿಗೆ ಶಿಕ್ಷಣ ನೀಡುವ ಸಂಪನ್ಮೂಲ ಶಿಕ್ಷಕರನ್ನು ಕಡೆಗಣಿಸಿದ್ದು ಇದು ಅನಾಗರೀಕತೆಯ ಪರಮಾವಧಿ. ಮಠಮಾನ್ಯಗಳಿಗೆ, ಭಾರತಿ ಭಾರತ ಸರಣಿಯ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳ ಖರೀದಿಗೆ 17 ಕೋಟಿ ರೂ. ಹಣ ನೀಡುವ ಸರಕಾರ ಈ ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಏಕೆ ಹಣವನ್ನು ನೀಡುವುದಿಲ್ಲ. ಇವರ ಬೇಡಿಕೆ ನ್ಯಾಯಯುತವಾಗಿದೆ. ಇವುಗಳನ್ನು ಸರಕಾರ ಈಡೇರಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

 

ಜಿ.ಎನ್.ನಾಗರಾಜ್ ಆಗ್ರಹ

 

15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ 1022 ಜನ ಸಂಪನ್ಮೂಲ ಶಿಕ್ಷಕರನ್ನು ಕೂಡಲೇ ಸೇವೆಯಲ್ಲಿ ಮುಂದುವರಿಸಬೇಕು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಐ.ಇ.ಡಿ.ಸಿ ಯೋಜನೆಯನ್ನು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ (ಕೇರಳ ಶಿಕ್ಷಣ ಇಲಾಖೆಯ ಮಾದರಿ) ಮುಂದುವರೆಸಬೇಕು, ನಮ್ಮ ರಾಜ್ಯದಲ್ಲಿರುವ ವಿಶೇಷ ಅಗತ್ಯತೆಯುಳ ಮಕ್ಕಳ ಶಿಕ್ಷಣ ಹಾಗೂ ಅನುಕೂಲತೆಗಾಗಿ ರಾಜ್ಯ ಸರ್ಕಾರವು ಸ್ವಯಂ ಪ್ರಾಧಿಕಾರ ರಚನೆ ಮಾಡಬೇಕು, ಸರ್ಕಾರಿ ಸಾಮಾನ್ಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುವಾಗಲೇ ವಿಶೇಷ ಅಗತ್ಯತೆಯುಳ ಮಕ್ಕಳಿಗಾಗಿ ಪರಿಪೂರ್ಣ ಶಿಕ್ಷಣ ನೀಡುತ್ತಿರುವ ಅರ್ಹ, ವಿಶೇಷ ತರಬೇತಿ ಪಡೆದ ಸಂಪನ್ಮೂಲ ಶಿಕ್ಷಕರನ್ನು ನೇಮಕ ಮಾಡಿಕೊಂಡು ಪ್ರತಿ ಸಾಮಾನ್ಯ ಶಿಕ್ಷಕರ ನೇಮಕಾತಿಯಲ್ಲಿ ಕನಿಷ್ಟ ಶೇ.10 ಸಂಪನ್ಮೂಲ ಶಿಕ್ಷಕರನ್ನು ನೇಮಕ ಮಾಡಿಕೊಳಬೇಕು.

 

ಉಪವಾಸ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರವರ ಭೇಟಿ.

 

ಜೊತೆಗೆ ಸಂಪನ್ಮೂಲ ಶಿಕ್ಷಕರು ಮತ್ತು ಡಿವೈಎಫ್ಐ ಹಾಗೂ ಎಸ್ಎಫ್ಐ ನಿಯೋಗವನ್ನು ಮುಖ್ಯಮಂತ್ರಿಗಳ ಜೊತೆ ಚೆರ್ಚಿಸಲು ಕೊಂಡೊಯ್ಯಲಾಗುವುದೆಂದು ಹೇಳಿದರು. ರಾಜ್ಯ ಸರ್ಕಾರವೇನಾದರೂ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಶಿಕ್ಷಕರ ಜೊತೆಗೂಡಿ ಮುಂದಿನ ದಿನಗಳಲ್ಲಿ ನಾನು ಕೂಡ ಹೋರಾಟಕ್ಕೆ ಜೊತೆಗೂಡುವೆನೆಂದು ಬೆಂಬಲ ವ್ಯಕ್ತಪಡಿಸಿದರು.

 

ಖ್ಯಾತ ಪ್ರಗತಿಪರ ಶಿಕ್ಷಣ ತಜ್ಞರೂ ಅಮರಣಾಂತ ಉಪವಾಸ ನಿರತ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಜಿ.ರಾಮಕೃಷ್ಣರವರು . ರಾಜ್ಯ ಸರ್ಕಾರ ಇಂತಹ ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡಿರುವ ಶಿಕ್ಷಕರನ್ನು ನಿರ್ಲಕ್ಷಿಸಿರುವುದು ಅತ್ಯಂತ ಅಮಾನವೀಯವಾಗಿದ್ದು, ಈ ಕೂಡಲೇ ಎಲ್ಲಾ ಶಿಕ್ಷಕರನ್ನು ಸೇವೆಯಲ್ಲಿ ಮುಂದುವರೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

 

ವಿ. ಎಸ್.ಉಗ್ರಪ್ಪ ಭೇಟಿ

 

14ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆನ್ನುವ ನಿಯಮವಿದ್ದರೂ ಅದರಲ್ಲಿಯೂ ಅಂಗವಿಕಲ ಮಕ್ಕಳಿಗೆ ಶಿಕ್ಷಣ ನೀಡುವುದರ ಕುರಿತು ಗಮನಹರಿಸದೆ ರಾಜ್ಯ ಸರ್ಕಾರ ಮಾನವೀಯತೆ ಮರೆತು ಬೇಜವಬ್ದಾರಿತನದಿಂದ ವರ್ತಿಸುತ್ತಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಅನೇಕ ಶಾಲೆಗಳಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು ಅವುಗಳನ್ನು ಭರತ್ ಮಾಡದಿರುವುದನ್ನು ಗಮನಿಸಬೇಕಾಗಿದೆ. ಅಂಗವಿಕಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಅತ್ಯಂತ ಮುಖ್ಯವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರ 1022 ಸಂಪನ್ಮೂಲ ಶಿಕ್ಷಕರನ್ನು ಕೆಲಸದಲ್ಲಿ ಮುಂದುವರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಒಂದು ವೇಳೆ ಇವರ ಬಗ್ಗೆ ಗಮನ ಹರಿಸದೇ ಇದ್ದರೆ ವಿಧಾನಮಂಡಲದಲ್ಲಿ ಈ ಬಗ್ಗೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

 

ಶಿಕ್ಷಕರು, ವಿಕಲಾಂಗಚೇತನರು ಮತ್ತು ಪೋಷಕರು ಜಂಟಿಯಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್, ಮಾಜಿ ಶಾಸಕರಾದ ಮಹಿಮಾ ಪಟೇಲ್, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಸಿ.ಕುಮಾರಿ, fsmk ಸಂಘಟನೆಯ ರಾಜ್ಯ ಸಂಚಾಲಕ ಜಯಕುಮಾರ್ ಮಾತನಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

 

ಈ ಹೋರಾಟವನ್ನು ಬೆಂಬಲಿಸಿ ಜೆ.ಡಿ.ಎಸ್.ನ ಮುಖಂಡರಾದ ವೈ ಮಾನವೀಯತೆಯನ್ನು ಮರೆತು ಸರ್ಕಾರ ವರ್ತಿಸುತ್ತಿದೆ.ಎಸ್.ದತ್ತಾರವರು. ಕನಿಷ್ಟ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸರ್ಕಾರದ ಯಾವೊಬ್ಬ ಪ್ರತಿನಿಧಿ ಬರದೇ ಇರುವುದು ಖಂಡನೀಯ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆಯೆಂದು ತಿಳಿಸಿದರು.

 

ಹೋರಾಟದ ನೇತೃತ್ವವನ್ನು ಸಂಪನ್ಮೂಲ ಶಿಕ್ಷಕರ ಸಂಘ, ಡಿವೈಎಫ್ಐ, ಎಸ್ಎಫ್ಐ, ವಿಕಲಾಂಗ ಹೋರಾಟ ಸಮಿತಿ ವಹಿಸಿತ್ತು.

 

ವರದಿ : ಹುಳ್ಳಿ ಪ್ರಕಾಶ್

ಸೌಜನ್ಯ: ಜನಶಕ್ತಿ 

 

 

 


Share: