ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸೂಚನೆ

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸೂಚನೆ

Tue, 09 May 2023 04:15:00  Office Staff   SO News

ಕಾರವಾರ : ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ  77-ಕಾರವಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ನಡೆಯುವ  ಮೇ 10 ರಂದು ಮತಗಟ್ಟೆ ಕೇಂದ್ರಗಳ ಬಳಿ ಬೂತ್ ಗಳನ್ನು ಸ್ಥಾಪಿಸುವ ಬಗ್ಗೆ ರಾಜಕೀಯ ಪಕ್ಷಗಳು ಚುನಾವಣಾ ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಮಾನ್ಯ ಚುನಾವಣಾ ಆಯೋಗವು ಹಲವು ಸೂಚನೆ ಹಾಗೂ ನಿರ್ದೇಶನಗಳನ್ನು ಹೊರಡಿಸಿದ್ದು ಅವುಗಳು ಈ ಕೆಳಗಿನಂತಿವೆ.

1.77-ಕಾರವಾರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ನಡೆಯುವ ಮೇ 10 ರಂದು ಮತಗಟ್ಟೆ ಕೇಂದ್ರಗಳಿಂದ 200 ಮೀಟರ್ ದೂರದಲ್ಲಿ ರಾಜಕೀಯ ಪಕ್ಷಗಳು, ಚುನಾವಣಾ ಅಭ್ಯರ್ಥಿಗಳು ಒಂದು ಚುನಾವಣೆ ಬೂತ್‌ ಸ್ಥಾಪಿಸಲು ಮಾತ್ರ ಅವಕಾಶವಿರುತ್ತದೆ.

 ಚುನಾವಣೆ ಬೂತ್‌ಗಳಲ್ಲಿ ಒಂದು ಟೇಬಲ್ ಎರಡು ಕುರ್ಚಿಗಳನ್ನು ಇಡಬಹುದಾಗಿದ್ದು ನೆರಳಿಗಾಗಿ ಛತ್ರಿ ಟಾರ್ಪಾಲಿನ್ ಬಳಸಿ ಸೂಕ್ತ ನೆರಳಿನ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಈ ಚುನಾವಣಾ ಬೂತ್‌ ಗಳನ್ನು ಸ್ಥಾಪಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಸ್ಥಳೀಯ ಪ್ರಾಧಿಕಾರಗಳಿಗೆ ಅಗತ್ಯ ದಾಖಲೆ ಹಾಗೂ ಮಾಹಿತಿ ನೀಡಿ ಅರ್ಜಿ ಸಲ್ಲಿಸಿ ಚುನಾವಣಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯತಕ್ಕದ್ದು ಹಾಗೂ ಈ ಅನುಮತಿ ಪತ್ರವನ್ನು ಚುನಾವಣೆ ಬೂತ್‌ನಲ್ಲಿ ಇಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ.

 ಚುನಾವಣೆ ಬೂತ್‌ಗಳಲ್ಲಿ ಮತದಾನ ಮಾಡಲು ಬರುವ ಮತದಾರರಿಗೆ ನೀಡುವ Voters Slip ಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಮುದ್ರಿಸತಕ್ಕದ್ದು ಹಾಗೂ ಈ Voters Slip ಗಳಲ್ಲಿ ಚುನಾವಣಾ ಅಭ್ಯರ್ಥಿಯ ಹೆಸರು ಹಾಗೂ ಚಿಹ್ನೆಗಳನ್ನು ಮುದ್ರಿಸಬಾರದು.

 ಈ ಚುನಾವಣೆ ಬೂತ್‌ಗಳಲ್ಲಿ ಚುನಾವಣಾ ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯಿರುವ ಒಂದು ಬ್ಯಾನರ್ ನ್ನು ಪ್ರದರ್ಶಿಸಲು ಅವಕಾಶವಿದ್ದು ಈ ಬ್ಯಾನರ್‌ನ ಅಳತೆಯು 3 ಅಡಿ ಅಗಲ 45 ಅಡಿ ಅಳತೆಯ ಉದ್ದದ್ದಾಗಿರಬೇಕು. ಇದಕ್ಕಿಂತ ಹೆಚ್ಚಿನ ಆಳತೆಯ ಬ್ಯಾನರ್ ಪ್ರದರ್ಶನ ಮಾಡಿದ್ದಲ್ಲಿ ಅವುಗಳನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ
ಚುನಾವಣಾ ಆಯೋಗದ ನಿರ್ದೇಶನದಂತೆ ತೆರವುಗೊಳಿಸಲಾಗುವುದು.

ಈ ಚುನಾವಣೆ ಬೂತ್‌ಗಳಲ್ಲಿ ಮತ ಚಲಾಯಿಸಲು ಬರುವವರಿಗೆ ಹಾಗೂ ಮತ ಚಲಾಯಿಸಿ ವಾಪಸ್‌ ಹೋಗುವವರಿಗೆ ಯಾವುದೇ ಅಡೆತಡೆ, ತೊಂದರೆ ಉಂಟು ಮಾಡತಕ್ಕದ್ದಲ್ಲ ಹಾಗೂ ಚುನಾವಣೆ ಬೂತ್‌ಗಳ ಬಳಿ ಹೆಚ್ಚಿನ ಜನಜಂಗುಳಿ ಸೇರದಂತೆ ಕ್ರಮವಹಿಸತಕ್ಕದ್ದು.

 ಮತ ಚಲಾಯಿಸಲು ಬರುವ ಮತದಾರರಿಗೆ ಚುನಾವಣೆ ಬೂತ್‌ಗಳಲ್ಲಿ Voters Slip ನೀಡಬೇಕೆ ಹೊರತು ನಿರ್ದಿಷ್ಟವಾಗಿ ಇಂತಹ ಪಕ್ಷ ಹಾಗೂ ಇಂತಹ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕೆಂದು ಒತ್ತಾಯ ಮಾಡುವಂತಿಲ್ಲ. ಹಾಗೇನಾದರೂ ಒತ್ತಾಯ ಪಡಿಸುತ್ತಿರುವುದು ಕಂಡು ಬಂದಲ್ಲಿ  ಚುನಾವಣಾ ಆಯೋಗದ ನಿರ್ದೇಶನದಂತೆ ಅಂತಹ ಚುನಾವಣೆ ಬೂತ್‌ಗಳನ್ನು ತೆರವುಗೊಳಿಸಲಾಗುವುದು ಹಾಗೂ ಅಂತಹ ಅಭ್ಯರ್ಥಿ ಹಾಗೂ ಚುನಾವಣೆ ಏಜೆಂಟರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.

ಅಭ್ಯರ್ಥಿಗಳಾಗಲೀ ಅಥವಾ ಚುನಾವಣಾ ಏಜೆಂಟರಾಗಲೀ ಸ್ವಂತ ವಾಹನದಲ್ಲಿ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವಂತಿಲ್ಲ.

 ಮತಗಟ್ಟೆ ಕೇಂದ್ರದ ಬಳಿ ಯಾವುದೇ ರೀತಿಯ ಪಾನೀಯ ಹಾಗೂ ಊಟ ಉಪಹಾರವನ್ನು ವಿತರಣೆ ಮಾಡಲು ಅವಕಾಶವಿರುವುದಿಲ್ಲ.

ಕಾರಣ ಮತದಾನ ನಡೆಯುವ ದಿನವಾದ ಮೇ 10 ರಂದು ಮುಕ್ತ ಹಾಗೂ ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಮತದಾನ ನಡೆಸಲು ಸಾಧ್ಯವಾಗುವಂತೆ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ಈ ಮೇಲ್ಕಂಡ ಎಲ್ಲಾ ಸೂಚನೆ ನಿರ್ದೇಶನಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಚುನಾವಣಾಧಿಕಾರಿಗಳು 77-ಕಾರವಾರ ವಿಧಾನಸಭಾ ಕ್ಷೇತ್ರ ಹಾಗೂ ಸಹಾಯಕ ಕಮೀಷನರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share: