ಮಂಗಳೂರು, ಅ.16: ನಗರದ ಪಿವಿಎಸ್ ವೃತ್ತದ ಬಳಿ ಇರುವ ಕಂಪ್ಯೂಟರ್ ಸಂಸ್ಥೆಯೊಂದಕ್ಕೆ ನುಗ್ಗಿದ ಬಜರಂಗದಳದ ಕಾರ್ಯಕರ್ತ ರೆನ್ನಲಾದ ತಂಡವೊಂದು ಅಲ್ಲಿನ ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಕೋಮುದ್ವೇಷದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ತಂಡ ದಾಳಿ ನಡೆಸಲು ಯತ್ನಿಸಿದಾಗ ಅದನ್ನು ಶಿಕ್ಷಕ ತಡೆದದ್ದೇ ಹಲ್ಲೆಗೆ ಕಾರಣವೆನ್ನಲಾಗಿದೆ.
ಹಲ್ಲೆಗೊಳಗಾದ ಶಿಕ್ಷಕನನ್ನು ರಾಜೇಶ್ ಶೇಟ್ ಎಂದು ಗುರುತಿಸಲಾಗಿದೆ. ಪಿವಿಎಸ್ ಬಳಿ ಇರುವ ಜೆಟ್ಕಿಂಗ್ ಎಂಬ ಕಂಪ್ಯೂಟರ್ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಎಲ್ಲ್ಲ ಧರ್ಮಗಳ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಬುಧವಾರ ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಯೋರ್ವ ತನ್ನ ತರಗತಿಯ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿರುವುದನ್ನೇ ನೆಪವಾಗಿಸಿಕೊಂಡ ಬಜರಂಗದಳದವರೆನ್ನಲಾದವೊಂದು ತಂಡ ಕೋಮುದ್ವೇಷದ ಮಾತುಗಳೊಂದಿಗೆ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಆಗ ಶಿಕ್ಷಕ ರಾಜೇಶ್ ಶೇಟ್ ಎಂಬಾತ ಮಧ್ಯ ಪ್ರವೇಶಿಸಿ “ಈ ರೀತಿ ದಾಂಧಲೆ ನಡೆಸುವುದು ಸರಿಯಲ್ಲ” ಎಂದು ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆಸಿದ್ದ ತಂಡ, ಗುರುವಾರ ಸುಮಾರು ಹದಿನೈದು ಜನರೊಂದಿಗೆ ಕಂಪ್ಯೂಟರ್ ಸಂಸ್ಥೆಯ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿ ರಾಜೇಶ್ ಶೇಟ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಈ ಬಗ್ಗೆ ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.