ಕಾರವಾರ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಗರಮಾಲಾ ಯೋಜನೆಯಡಿ ನಿರ್ಮಾಣ ಮಾಡಲು ನಿರ್ಧರಿಸಿದ ಮಾಜಾಳಿ ಬಂದರು ಯೋಜನೆಗೆ ಮೀನುಗಾರರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ದಂಡೇಬಾಗ್ ಮಾಜಾಳಿಯಲ್ಲಿ ಸೇರಿದ ಮೀನುಗಾರ ಮುಖಂಡರು ಹಾಗು ಊರ ನಾಗರಿಕರು, ಮಾಜಾಳಿ ಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ ಮೀನುಗಾರಿಕಾ ಬಂದರು ಯೋಜನೆ ಬಗ್ಗೆ ಚರ್ಚಿಸಿದರು. ಬಂದರು ನಿರ್ಮಾಣದಿಂದ ಮೀನುಗಾರರಿಗೆ ಆಗುವ ತೊಂದರೆಗಳ ಬಗ್ಗೆ ವಿವರಿಸ ಲಾಯಿತು. ಅಧಿಕಾರಿಗಳು ಮೀನುಗಾರರ ಜೊತೆ ಚರ್ಚಿಸದೇ ಯೋಜನೆಗೆ ಮುಂದಾಗಿರೋದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮಾಜಾಳಿ, ಹಿಪ್ಪಳಿ, ದಂಡೇಬಾಗ್, ಬಾವಳ, ದೇವಬಾಗ್ ಭಾಗದ ಮೀನುಗಾರರು ಸೇರಿ ಯೋಜನೆ ವಿರೋಧಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿ ಹಾಗೂ ಮೀನುಗಾರಿಕಾ ಸಚಿವರಿಗೆ, ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಮನವಿಗೆ ಸ್ಪಂದಿಸಿ ಯೋಜನೆ ಕೈ ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉತ್ತರಕನ್ನಡ ಮೀನುಗಾರರು ಸೇರಿ ಉಗ್ರ ಹೋರಾಟ ಮಾಡಲು ತೀರ್ಮಾನಿಸಿದರು.
ಅಲ್ಲದೇ ದೇವಬಾಗದಿಂದ ಮಾಜಾಳಿ ವರೆಗೆ ಮೀನುಗಾರರು ಮುಂಬರುವ ಯಾವುದೇ ಚುನಾವಣೆಯನ್ನು ಬಹಿಷ್ಕರಿಸುವ ಮತ್ತು ಊರಿಗೆ ಬರುವ ಅಧಿಕಾರಿ ಗಳಿಗೆ ಘೇರಾವ್ ಹಾಕುವುದಾಗಿ ನಿರ್ಣಯ ಮಾಡಿದರು.
ಸಭೆಯಲ್ಲಿ ಮೀನುಗಾರ ಮುಖಂಡರಾದ ದೇವರಾಯ ಸೈಲ್, ಮಹದೇವ್ ಕುಮಟೀಕರ, ಶ್ರೀಪಾದ್ ಸೈಲ್, ಮನೋಜ್ ಮಾಜಾಳಿಕರ, ಗಣಪತಿ ಖೋಬ್ರೇಕರ, ಪ್ರಶಾಂತ ಸೈಲ್, ಪಾಂಡುರಂಗ ಖೋಬ್ರೇಕರ, ಗಜಾನನ ಚಂಡೆಕರ, ಶೈಲೇಶ್ ಕಾಂಬ್ಳೆ, ಸಂತೋಷ ಚಂಡೆಕರ, ಮುಂತಾದವರು ಉಪಸ್ಥಿತರಿದ್ದರು.