ಭಟ್ಕಳ : ಮಕ್ಕಾದಲ್ಲಿ ನಡೆದ 43ನೇ ವಿಶ್ವ ಖುರಾನ್ ಕಂಠಪಾಠ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ಭಟ್ಕಳದ ಇಬ್ರಾಹಿಂ ಫಹಿಮ್ ಶಾಬಂದ್ರಿ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.
ಲಭ್ಯ ಮಾಹಿತಿಯಂತೆ, ಸ್ಪರ್ಧೆಯು ಆಗಸ್ಟ್ 25 ರಂದು ಪ್ರಾರಂಭವಾಯಿಗಿದ್ದು ಅದರ ಅಂತಿಮ ಸುತ್ತು ಸೆ.6 ರಂದು ನಡೆಯಿತು. ಈ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ 117 ದೇಶಗಳ 166 ವಿದ್ಯಾರ್ಥಿಗಳು ಭಾಗವಹಿಸಿದ್ದು, ಕುರಾನ್ ಕಂಠಪಾಠದ ಐದು ಪಠ್ಯ ವಿಭಾಗದಲ್ಲಿ ಭಟ್ಕಳದ ಇಬ್ರಾಹಿಂ ಶಾಬಂದ್ರಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇಬ್ರಾಹಿಂ ಶಾಬಂದ್ರಿ, ಯುನೈಟೆಡ್ ಅರಬ್ ಎಮಿರೇಟ್ಸ್ನ (ಯು.ಎ.ಇ) ಶಾರ್ಜಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ, ಭಟ್ಕಳದ ನಾಲೇಜ್ ಶಾಲೆಯಲ್ಲಿ ಪ್ರೌಢಶಿಕ್ಷಣ ಮತ್ತು ಕುರಾನ್ ಕಂಠಪಾಠವನ್ನು ಪೂರ್ಣಗೊಳಿಸಿದರು. ಈ ಜಾಗತಿಕ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಕ್ಕಾಗಿ ಅವರಿಗೆ 60 ಸಾವಿರ ಸೌದಿ ರಿಯಾಲ್ಗಳನ್ನು(ಅಂದಾಜು ೧೩ಲಕ್ಷ ರೂ) ಮೊತ್ತ ಬಹುಮಾನದ ರೂಪದಲ್ಲಿ ನೀಡಲಾಗಿದೆ.