ಧಾರವಾಡ : ಮಕ್ಕಳಲ್ಲಿ ಆಲೋಚಿಸುವ, ಕಲ್ಪಿಸುವ, ಕ್ರಿಯಾಶೀಲತೆ ಹೆಚ್ಚಿಸಲು ಕಥೆಗಳನ್ನು ಕೇಳುವ, ಹೇಳುವ ಹಾಗೂ ರಚಿಸುವ ಕಥನ ಕಲೆ ಅಗತ್ಯ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಬೇಕಾದರೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸಹಯೋಗದಲ್ಲಿ ಮೈಸೂರು ವಿಭಾಗದ ಬಾಲಮಂದಿರದ ವಿಶೇಷ ಮಕ್ಕಳಿಗಾಗಿ ಆಯೋಜಿಸಿದ್ದ ಮಕ್ಕಳ ಕಥಾ ಕಮ್ಮಟದ ಸಮಾರೋಪದ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಕಥಾ ಕಮ್ಮಟಗಳಿಂದ ಮಕ್ಕಳ ಭಾಷಾ ಶುದ್ಧಿಕರಣ, ವ್ಯಾಕರಣ, ಬರೆಯುವ ಶೈಲಿಯಲ್ಲಿ ಸುಧಾರಣೆ ಆಗುವುದು. ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಚಟುವಟಿಕೆಗಳ ಮೂಲಕ ಸಾರ್ಥಕ ಕೆಲಸ ಮಾಡುತ್ತಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಪ್ರತಿ ಮಗುವಿನಲ್ಲಿ ಪ್ರತಿಭೆಯೆಂಬ ಬೀಜ ಇರುತ್ತದೆ. ಆ ಬೀಜಕ್ಕೆ ನೀರು ಎರೆದು ಬೆಳಸುವ ಕಾರ್ಯವನ್ನು ಅಕಾಡೆಮಿಯು ಮಾಡುತ್ತಿರುವುದು ಅಭಿನಂದನೀಯ. ಇಂತಹ ಮಕ್ಕಳ ಮನಸ್ಸು ಅರಳಿಸುವ ಕಾರ್ಯ ಚಟುವಟಿಕೆಗಳು ನಡೆಯಲಿ. ಕಮ್ಮಟದಿಂದ ಪಡೆದುಕೊಂಡ ಶಿಸ್ತು, ಅನುಭವ, ಜ್ಞಾನವನ್ನು ಹಂಚಿ ಉಳಿದ ಮಕ್ಕಳಿಗೆ ಮಾದರಿಯ ವಿದ್ಯಾರ್ಥಿಗಳಾಗಿರಿ ಎಂದು ಕಿವಿ ಮಾತು ಹೇಳಿದರು.
ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ರಾಜ್ಯದ ಬಾಲಮಂದಿರದಲ್ಲಿಯ ಮಕ್ಕಳು ವಿವಿಧ ಕಾರಣಗಳಿಂದ ಮಾನಸಿಕವಾಗಿ ಕುಗ್ಗಿರುತ್ತಾರೆ. ಸರ್ಕಾರ ಅವರಿಗೆ ಎಲ್ಲ ಸೌಕರ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತದೆ. ಮಕ್ಕಳೊಂದಿಗೆ ಆತ್ಮೀಯವಾಗಿ ನಡೆದುಕೊಂಡಾಗ ಮಾತ್ರ ಮಾನಸಿಕ ದುರ್ಬಲತೆಯಿಂದ ಹೊರಬರಲು ಸಾಧ್ಯ. ಅವರನ್ನು ನೋಡಿಕೊಳ್ಳುವ ಆಪ್ತಸಮಾಲೋಚಕರು, ರಕ್ಷಕರು, ಗೃಹಪಾಲಕರು ಹಾಗೂ ಇತರೆ ಸಿಬ್ಬಂದಿ ಇದಕ್ಕಾಗಿ ಶ್ರಮಿಸಬೇಕು ಎಂದರು.
ಶಿಬಿರದ ನಿರ್ದೇಶಕ ಡಾ.ನಿಂಗು ಸೊಲಗಿ ಅವರು ಏಳು ದಿನಗಳ ಕಾಲ ಮೈಸೂರು ವಿಭಾಗದ ಬಾಲಮಂದಿರಗಳ ನಲವತ್ತು ಮಕ್ಕಳಿಗೆ ಕಥೆ ರಚನೆ, ಬರೆಯುವ ಶೈಲಿ, ಕಥೆಗೆ ಆಯ್ಕೆ ಮಾಡುವ ವಸ್ತು, ನಿರೂಪಿಸುವ ಶೈಲಿ ಹೀಗೆ ಹಲವು ವಿಷಯಗಳನ್ನು ಮಕ್ಕಳಿಗೆ ಮನದಟ್ಟಾಗುವಂತೆ ಕಥಾ ಕಮ್ಮಟದ ಮೂಲಕ ನಿರ್ವಹಿಸಿಕೊಟ್ಟರು ಎಂದು ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ ಕೃತಜ್ಞತೆ ಸಲ್ಲಿಸಿದರು.
ಹಿರಿಯ ಕಲಾವಿದ ಅನಂತ ದೇಶಪಾಂಡೆ ಅವರು ದ.ರಾ ಬೇಂದ್ರೆಯವರ ವ್ಯಕ್ತಿ ಚಿತ್ರಣವನ್ನು ನಟನೆಯ ಮೂಲಕ ಮಕ್ಕಳಿಗೆ ಪರಿಚಯಿಸಿದರು. ಮಕ್ಕಳ ಸಂಘಟಕ ಸಂಜೀವ ದುಮ್ಮಕನಾಳ ಭಾಗವಹಿಸಿದರು. ಕಚೇರಿ ಅಧೀಕ್ಷಕ ಮುತ್ತಣ್ಣ ಸಿ.ಎ ನಿರೂಪಿಸಿದರು.
ಅಕಾಡೆಮಿಯ ಎಲ್ಲ ಸಿಬ್ಬಂದಿ ಮತ್ತು ಮೈಸೂರು ವಿಭಾಗದ 8 ಜಿಲ್ಲೆಯ ಬಾಲಮಂದಿರದ ಸಮಾಲೋಚಕರು, ರಕ್ಷಕರು ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು. ಮಕ್ಕಳು ಕಮ್ಮಟದಲ್ಲಿ ರಚಿಸಿದ ಕಥೆಗಳ ಸಂಗ್ರಹದ ಹಸ್ತ ಪ್ರತಿಗಳ ಗುಚ್ಛವನ್ನು ಬಿಡುಗಡೆ ಮಾಡಲಾಯಿತು.