ಮಂಗಳೂರು - ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ.
ಶುಕ್ರವಾರ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ 23ನೇ ಅವಧಿಯ ಚುನಾವಣೆ ನಡೆಯಿತು.
ಚುನಾವಣಾಧಿಕಾರಿಯಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ. ಸಿ ಪ್ರಕಾಶ್ ಚುನಾವಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೂತನ ಮೇಯರ್ ಹಾಗೂ ಉಪ ಮೇಯರ್ ಗಳ ಹೆಸರನ್ನು ಘೋಷಿಸಿದರು.
ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಒಟ್ಟು 65 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ 62 ಸದಸ್ಯರು ಚುನಾವಣೆಗೆ ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಇತರೆ ಚುನಾವಣಾ ಪ್ರಕ್ರಿಯೆ ಅಧಿಕಾರಿಗಳು ಭಾಗವಹಿಸಿದ್ದರು.
ವಾರ್ಡ್ ನಂ 22 (ಕದ್ರಿ ಪದವು) ರ ಸದಸ್ಯರಾಗಿರುವ ಜಯಾನಂದ ಅಂಚನ್ ಮತ್ತು ಸೆಂಟ್ರಲ್ ಮಾರ್ಕೆಟ್ ರೋಡ್ ವಾರ್ಡ್‍ನ ಸದಸ್ಯರಾದ ಪೂರ್ಣಿಮಾ ಅವರು ಬಹುಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಜಯನಂದ ಅಂಚನ್ ಅವರಿಗೆ 46 ಮತಗಳು ಲಭಿಸಿದರೆ, ಅವರ ಪ್ರತಿಸ್ಪರ್ಧಿ ಶಶಿಧರ್ ಹೆಗ್ಡೆ ಅವರಿಗೆ 14 ಮತಗಳು ಲಭಿಸಿವೆ. ಉಪಮೇಯರ್ ಸ್ಥಾನಕ್ಕೆ ಪೂರ್ಣಿಮಾ ಅವರಿಗೆ 46 ಮತಗಳು ಮತ್ತು ಅವರ ಪ್ರತಿಸ್ಪರ್ಧಿ ಝೀನತ್ ಸಂಶುದ್ದೀನ್ ಅವರು 14 ಮತಗಳನ್ನು ಪಡೆದುಕೊಂಡರು. ಇದೇ ವೇಳೆ ವಿವಿಧ ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ ನಡೆಯಿತು.